ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡುವಂತೆ ಆಗ್ರಹಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಮಂಡ್ಯದಲ್ಲಿ ನಡೆಸುತ್ತಿರುವ ಹೋರಾಟವು 53ನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಮಂಡ್ಯ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡುವುದ ಜೊತೆಗೆ ಹೋರಾಟಕ್ಕೆ ಶಕ್ತಿ ತುಂಬಿದರು.
ಬೆಂಗಳೂರು- ಮೈಸೂರು ರಸ್ತೆಯ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ವಿದ್ಯಾರ್ಥಿನಿಯರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಂಸದರು,ಶಾಸಕರ ವಿರುದ್ಧ ಕಿಡಿ ಕಾರಿದರು.
ವಿದ್ಯಾರ್ಥಿನಿ ಕ್ಯಾತುಂಗೆರೆ ಮೋನಿಕಾ ಮಾತನಾಡಿ, ನಾವೆಲ್ಲರೂ ರೈತರ ಮಕ್ಕಳು, ತಾತನ ಕಾಲದಿಂದಲೂ ನಮ್ಮದು ರೈತ ಕುಟುಂಬ, ಬೇಸಾಯ ನಂಬಿ ಬದುಕುತ್ತಿದ್ದೇವೆ, ಕಾವೇರಿ ನದಿ ನಮ್ಮದು, ಇಲ್ಲೇ ಹುಟ್ಟುತ್ತದೆ, ಅದನ್ನೇ ನಂಬಿ ಬದುಕುತ್ತಿದ್ದೇವೆ .ಆದರೆ ನಮ್ಮ ನೀರಿಗಾಗಿ ನಾವೇ ಹೋರಾಟ ಮಾಡಬೇಕಾದ ಪರಿಸ್ಥಿತಿ ವಿಪರ್ಯಾಸವಾಗಿದೆ ಎಂದರು.
ಮತ್ತೊಬ್ಬ ವಿದ್ಯಾರ್ಥಿನಿ ಟಿ.ಅನುಷಾ ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಬಂಗಾರಪ್ಪ ತೆಗೆದುಕೊಂಡಿದ್ದ ದಿಟ್ಟ ನಿರ್ಧಾರವನ್ನು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತೆಗೆದುಕೊಳ್ಳಬೇಕಾಗಿದೆ, ಕಾವೇರಿ ಕನ್ನಡಿಗರ ಸ್ವತ್ತು, ಇಲ್ಲಿನ ರೈತರ ಹಿತ ಕಾಪಾಡದೇ ನೆರೆ ರಾಜ್ಯಕ್ಕೆ ನಿವಾರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿ ಆಳುವ ಸರ್ಕಾರ ದೃಢ ನಿರ್ಧಾರಕ್ಕೆ ಮುಂದಾಗಲಿ ಎಂದು ಒತ್ತಾಯಿಸಿದರು.
ವಿದ್ಯಾರ್ಥಿನಿ ವಿನುತಾ ಮಾತನಾಡಿ, ಚುನಾವಣೆ ಸಮಯದಲ್ಲಿ ಮತಕ್ಕೆ 2000 ರೂ ಕೊಟ್ಟು ಮತ ಪಡೆಯುವ ರಾಜಕಾರಣಿಗಳು ಸಂಕಷ್ಟಕಾಲದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವುದಿಲ್ಲ, ಹಣ ನೀಡಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮತದಾರರ ಋಣ ಇದೆ, ಅದನ್ನು ತೀರಿಸುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸುನಂದ ಜಯರಾಂ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೆಗೌಡ, ಕನ್ನಡ ಸೇನೆ ಮಂಜುನಾಥ್, ಮಹಾಂತಪ್ಪ, ಕೋಮಲ, ಸುಜಾತ ಕೃಷ್ಣ, ದಸಂಸ ಎಂ ವಿ ಕೃಷ್ಣ, ಫಯಾಜ್ ಮತ್ತಿತರರಿದ್ದರು.




