ಸಂಕ್ರಾಂತಿವರೆಗೆ ಕಾದು ನೋಡಿ ನಮ್ಮ ಪಕ್ಷಕ್ಕೆ ಬಿಜೆಪಿ ಹಾಗೂ ಜೆಡಿಎಸ್ ನಿಂದ ಎಷ್ಟು ಜನ ಬರ್‍ತಾರೆ ಅಂತ ಗೊತ್ತಾಗುತ್ತೇ ಎಂದು ಮಂಡ್ಯ ಶಾಸಕ ಪಿ.ರವಿಕುಮಾರ್ ಗೌಡ ಹೇಳಿದರು.
ಹಾಸನದಲ್ಲಿ ಇಂದು ಹಾಸನಾಂಬೆಯ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ದೀಪಾವಳಿ ನಡಿತಿದೆ, ಸಂಕ್ರಾಂತಿವರೆಗೆ ಕಾದು ನೋಡಿ ಎನ್ನುವ ಮೂಲಕ ರಾಜ್ಯದಲ್ಲಿ ಆಪರೇಷನ್ ಹಸ್ತ ನಡೆಯುತ್ತಿದೆ ಎಂಬುದನ್ನು ಮಾರ್ಮಿಕವಾಗಿ ಹೇಳಿದರು.
ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದರಿಂದ ವಿಡಿಯೋ ಬಿಟ್ಟಿಲ್ಲ
ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುತ್ತಿದೆ ಎಂದು ಹಿಂದೆ ಆರೋಪ ಮಾಡಿದ್ದೇವೆ, ಬೆಳಗಾವಿ ಏರ್ ಪೋರ್ಟ್ ನಲ್ಲಿ ಬಾಬ ಸಾಹೇಬ ಪಾಟೀಲ್ ಜೊತೆ ಮಾತನಾಡಿದ್ದನ್ನು ಸ್ವತಃ ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಆದ್ದರಿಂದ ನಾವು ಆಪರೇಷನ್ ಕಮಲದ ವಿಡಿಯೋವನ್ನು ಬಿಡುಗಡೆ ಮಾಡಲಿಲ್ಲ ಎಂದು ಸ್ಪಷ್ಟಪಡಿಸಿದರು.
136 ಶಾಸಕರು ಒಗ್ಗಟ್ಟಿನಿಂದ ಇದ್ದೇವೆ
ರಾಜ್ಯದಲ್ಲಿ 136 ಕಾಂಗ್ರೆಸ್ ಶಾಸಕರು ಒಗ್ಗಟ್ಟಿನಿಂದ ಇದ್ದೇವೆ, ನಾವೆಲ್ಲ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಎಐಸಿಸಿ ಆಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಪರಮೇಶ್ವರ್ ಜೊತೆಯಲ್ಲೇ ಇದ್ದೇವೆ, ನಮ್ಮಲ್ಲಿ ಭಿನ್ನಮತ ಇಲ್ಲ, ಇದೆಲ್ಲ ಬಿಜೆಪಿ ಹಬ್ಬಿಸುತ್ತಿರುವ ಸುಳ್ಳು ಸುದ್ದಿ, ಅವರ ಪಕ್ಷವೇ ಒಡೆದ ಮನೆಯಾಗಿದೆ. ಮೊದಲು ವಿರೋಧ ಪಕ್ಷ ನಾಯಕನನ್ನ ಆಯ್ಕೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ನಮ್ಮ ಪಕ್ಷ ಶಾಸಕರ್‍ಯಾರು ಬಿಜೆಪಿ ಬಲೆಗೆ ಬೀಳಲ್ಲ, ವಿರೋಧ ಪಕ್ಷದ ನಾಯಕರೊಂದಿಗೆ ಕಾಫಿ, ಡಿನ್ನರ್ ಮಾಡುತ್ತೇವೆ, ರಾಜಕೀಯದಲ್ಲಿ ಈ ಕಾಫಿ, ಡಿನ್ನರ್ ಗೆ ವಿಶೇಷವಾದ ಮಹತ್ವವಿದೆ ಎಂದು ಸೂಚ್ಯವಾಗಿ ತಿಳಿಸಿದರು.




