ಕೆ.ಆರ್.ಪೇಟೆ ತಾಲೂಕಿನ ಅಂಚೆ ಮುದ್ದನಹಳ್ಳಿ ಗ್ರಾಮದ ಇಟ್ಟಿಗೆ ಭಟ್ಟಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಒರಿಸ್ಸಾದ ಕೂಲಿಕಾರ ದಂಪತಿಗಳನ್ನು ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಂಚೆ ಮುದ್ದನಹಳ್ಳಿ ಗ್ರಾಮದ ಯೋಗೇಂದ್ರ ಎಂಬುವರ ಮಾಲೀಕತ್ವದ ಇಟ್ಟಿಗೆ ಭಟ್ಟಿಯಲ್ಲಿ ಒರಿಸ್ಸಾ ರಾಜ್ಯದ ಬಾಲಂಗೀರ್ ಗ್ರಾಮದ ನರೇಂದ್ರ ಮಹಾಕೂರ್, ಆತನ ಪತ್ನಿ ನಂದಿನಿ ಮಹಾಕೂರ್ ಕಳೆದ ಐದು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ನರೇಂದ್ರ ಹಾಗೂ ನಂದಿನಿ ಮಹಾಕುರ್ ಅವರಿಗೆ ಮೂರು ವರ್ಷದ ಮಗಳಿದ್ದು, ಮೂವರೂ ಇಟ್ಟಿಗೆ ಭಟ್ಠಿಯ ಬಳಿಯಲ್ಲಿಯೇ ವಾಸವಿದ್ದರು.
ಆದರೆ ಇಟ್ಟಿಗೆ ಭಟ್ಟಿಯ ಮಾಲೀಕ ಯೋಗೇಂದ್ರ ಸಂಬಳ ಕೊಡದೆ ಜೀತದಾಳುಗಳಂತೆ ನಮ್ಮನ್ನು ದುಡಿಸಿಕೊಳ್ಳುತ್ತಿದ್ದಾನೆ.ಸಂಬಳ ಕೊಡದೆ ನಮ್ಮ ಮೇಲೆ ದೌರ್ಜನ್ಯ ಮಾಡಿ ಹಲ್ಲೆ ನಡೆಸಿದ್ದಾನೆ ಎಂದು ವಿಡಿಯೋ ಮಾಡಿ ಟ್ವಿಟ್ಟರ್ ಮುಖಾಂತರ ಗಮನ ಸೆಳೆದಿದ್ದರು.
ಲೆಸ್ಲಿ ಮಾರ್ಟಿನ್ ಎಂಬುವರು,ಕೆ.ಆರ್.ಪೇಟೆಯ ಅಂಚೆ ಮುದ್ದನಹಳ್ಳಿಯ ಇಟ್ಟಿಗೆ ಭಟ್ಟಿಯೊಂದರಲ್ಲಿ ಒರಿಸ್ಸಾ ಮೂಲದ ಕೂಲಿಕಾರ ದಂಪತಿ ನರೇಂದ್ರ ಹಾಗೂ ನಂದಿನಿ ಮಹಾಕೂರ್ ಎಂಬುವವರಿಗೆ ಸಂಬಳ ಕೊಡದೆ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ಇವರ ರಕ್ಷಣೆಗೆ ಮುಂದಾಗುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.ವೀಡಿಯೋದಲ್ಲಿ ಒರಿಸ್ಸಾ ದಂಪತಿಗಳು ವೀಡಿಯೋದಲ್ಲಿ ಕೈ ಮಗಿದು ನಮ್ಮನ್ನು ಇಲ್ಲಿಂದ ಬಿಡುಗಡೆ ಮಾಡಿಸುವಂತೆ ಮನವಿ ಮಾಡಿದ್ದರು.
ಈ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಇಂದು ಪಾಂಡವಪುರ ಉಪ ವಿಭಾಗಾಧಿಕಾರಿ ನಂದೀಶ್, ತಹಶೀಲ್ದಾರ್ ನಿಸರ್ಗ ಪ್ರಿಯ, ಕೆ.ಆರ್. ಪೇಟೆ ಗ್ರಾಮಾಂತರ ಠಾಣೆಯ ಸಿಪಿಐ ಜಗದೀಶ್ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳ ತಂಡ ಇಂದು ಅಂಚೆ ಮುದ್ದನಹಳ್ಳಿ ಗ್ರಾಮದ ಯೋಗೇಶ್ ಅವರ ಇಟ್ಟಿಗೆ ಭಟ್ಟಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ನಮ್ಮನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದ ಎಂದು ಆರೋಪಿಸಿದ್ದ ನರೇಂದ್ರ ಹಾಗೂ ನಂದಿನಿ ಮಹಾಕುರ್ ಅವರಿಂದ ಅಧಿಕಾರಿಗಳು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ನರೇಂದ್ರ ಹಾಗೂ ನಂದಿನಿ ಮಹಾಕುರ್ ದಂಪತಿಗಳು ನಾವು ಇಟ್ಟಿಗೆ ಭಟ್ಟಿಯ ಮಾಲೀಕ ಯೋಗೇಂದ್ರ ಅವರಿಂದ ಸಂಬಳ ಪಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಇತರ ಕೆಲಸಗಾರರನ್ನು ವಿಚಾರಿಸಿದ ಸಂದರ್ಭದಲ್ಲಿ ಅವರೆಲ್ಲ, ನಮಗೆ ಸರಿಯಾದ ಸಮಯಕ್ಕೆ ಸಂಬಳ ನೀಡುತ್ತಿದ್ದಾರೆ ಎಂದು ಅಧಿಕಾರಿಗಳ ತಂಡಕ್ಕೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಇಟ್ಟಿಗೆ ಭಟ್ಟಿಯ ಮಾಲೀಕ ಯೋಗೇಂದ್ರ ಅವರನ್ನು ಅಧಿಕಾರಿಗಳು ತಂಡ ವಿಚಾರಣೆಗೆ ಒಳ ಪಡಿಸಿತು.ನರೇಂದ್ರ ಹಾಗೂ ನಂದಿನಿ ಅವರನ್ನು ಜೀತದಾಳಿನಂತೆ ನಡೆಸಿಕೊಂಡಿಲ್ಲ.ಕಾಲ ಕಾಲಕ್ಕೆ ಸರಿಯಾಗಿ ಸಂಬಳ ನೀಡಿದ್ದೇನೆ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದ್ದು,ಅಧಿಕಾರಿಗಳು ಇನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.
ಜೀತ ಪ್ರಕರಣವಲ್ಲ
ಈ ಬಗ್ಗೆ ನುಡಿ ಕರ್ನಾಟಕ. ಕಾಂ ಜೊತೆ ಮಾತನಾಡಿದ ಕೆ.ಆರ್. ಪೇಟೆ ತಹಶೀಲ್ದಾರ್ ನಿಸರ್ಗ ಪ್ರಿಯ ಅವರು, ಒರಿಸ್ಸಾ ಮೂಲದ ನರೇಂದ್ರ ಹಾಗೂ ನಂದಿನಿ ಮಹಾಕುರ್ ಅವರಿಗೆ ಸಂಬಳ ಕೊಡದೆ ಕೆಲಸ ಮಾಡಿಸಿಲ್ಲ ಎಂಬುದು ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಕಂಡು ಬಂದಿದೆ. ಇದರಿಂದ ಇಲ್ಲಿ ಜೀತ ಪ್ರಕರಣ ನಡೆದಿಲ್ಲ.
ಮಾಲೀಕ ಕಾಲ ಕಾಲಕ್ಕೆ ಸಂಬಳ ನೀಡಿಯೇ ಕೆಲಸ ಮಾಡಿಸಿದ್ದಾರೆ ಎಂಬುದು ಸ್ಥಳ ಪರಿಶೀಲನೆ ಸಂದರ್ಭದಲ್ಲಿ ತಿಳಿದು ಬಂದಿದ್ದು, ಇದು ಜೀತದ ಪ್ರಕರಣವಲ್ಲ ಎಂದು ತಿಳಿದು ಬಂದಿದೆ. ಅಲ್ಲದೆ ಅವರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿಲ್ಲ ಎಂಬ ಮಾಹಿತಿಯೂ ತಿಳಿದು ಬಂದಿದೆ.ಕೂಲಿಕಾರ ದಂಪತಿಗಳನ್ನು ಇಟ್ಟಿಗೆ ಭಟ್ಟಿಯಿಂದ ಬಿಡುಗಡೆಗೊಳಿಸಿ ಅವರನ್ನು ಅಲ್ಲಿಂದ ಕರೆತಂದಿದ್ದೇವೆ. ಅವರು ಒರಿಸ್ಸಾಗೆ ತೆರಳುವುದಾಗಿ ತಿಳಿಸಿದ್ದು, ಅವರ ಆಶಯದಂತೆ ಅವರನ್ನು ಅಲ್ಲಿಗೆ ಕಳಿಸಿ ಕೊಡಲಾಗುವುದು ಎಂದು ತಿಳಿಸಿದರು.




