ಸುತ್ತಮುತ್ತಲ ಜನತೆಗೆ ಮಾರಕವಾಗಿದ್ದ ಮಂಡ್ಯ ತಾಲ್ಲೂಕಿನ ಬಸರಾಳು ಸಮೀಪದ ಕಾರೇಕಟ್ಟೆ ಹೊರ ವಲಯದ ಕೀರ್ತಿ ಸಲ್ಫರ್ ಕೆಮಿಕಲ್ ಎಂಬ ಕಾರ್ಖಾನೆಯೊಂದು ಶಾಸಕ ಪಿ.ರವಿಕುಮಾರ್ ಸೂಚನೆ ಹಿನ್ನೆಲೆಯಲ್ಲಿ ಶಾಶ್ವತವಾಗಿ ಬಾಗಿಲು ಮುಚ್ಚಿದೆ.
ಇತ್ತಿಚೇಗೆ ಶಾಸಕ ರವಿಕುಮಾರ್ ಗಣಿಗ ನೇತೃತ್ವದಲ್ಲಿ ಕಾರ್ಖಾನೆ ಆವರಣದಲ್ಲಿ ನಡೆದ ರೈತರು ಹಾಗೂ ಕಾರ್ಖಾನೆ ಆಡಳಿತ ಮಂಡಳಿಯ ಸಭೆಯಲ್ಲಿ ಸ್ಥಳೀಯ ರೈತರು ಕಾರ್ಖಾನೆಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು. ಇದಕ್ಕೆ ಸ್ಪಂದಿಸಿದ ಶಾಸಕರು, ಮುಚ್ಚುವುದು ಸೂಕ್ತ ಎಂದು ಸೂಚನೆ ನೀಡಿದರು. ಇದರಿಂದಾಗಿ ಕಾರ್ಖಾನೆ ವ್ಯವಸ್ಥಾಪಕರು ಘಟಕ ಸ್ಥಗಿತಗೊಳಿಸುವುದಾಗಿ ಬೇಬಿ ಗ್ರಾಮ ಪಂಚಾಯಿತಿಗೆ ಪತ್ರ ಕೊಟ್ಟು ಸಮಸ್ಯೆಗೆ ಇತಿಶ್ರೀ ಹಾಡಿದರು.

ಸ್ಥಳೀಯರಿಂದ ಭಾರೀ ಆಕ್ರೋಶ
ಬಸರಾಳು ಸಮೀಪದ ಕಾರೇಕಟ್ಟೆ ಗ್ರಾಮದ ಹೊರವಲಯದಲ್ಲಿ ಬೆಂಗಳೂರು ಮೂಲದವರು ಕೆಮಿಕಲ್ ಘಟಕ ಪ್ರಾರಂಭಿಸಿದ್ದರು. ಕಳೆದ 2022 ಜ.15ರಂದು ಕಾರ್ಖಾನೆಯಿಂದ ವಿಷಾನಿಲ ಸೋರಿಕೆಯಾದ ಪರಿಣಾಮ ನೂರಾರೂ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ತೆಂಗು ಸೇರಿದಂತೆ ತರಕಾರಿ ಬೆಳೆ ನಾಶವಾಗಿದ್ದವು. ಇದಲ್ಲದೆ ಸುತ್ತಮುತ್ತಲ ಜನರ ಆರೋಗ್ಯದ ಮೇಲೆಯೂ ಪರಿಣಾಮ ಬೀರಲಾರಂಭಿಸಿತು. ಆ ಸಮಯದಲ್ಲಿ ಜನರ ಭಾರೀ ಆಕ್ರೋಶವನ್ನು ಎದುರಿಸಬೇಕಾಯಿತು.
ಹಲವು ತಿಂಗಳಿಂದ ಬಾಗಿಲು ಮುಚ್ಚಲಾಗಿದ್ದ ಕಾರ್ಖಾನೆಯನ್ನು ಕಳೆದ ನಾಲ್ಕು ದಿನದ ಹಿಂದೆಯಷ್ಟೇ ಪುನರಾಂಭ ಮಾಡಲಾಗಿತ್ತು. ಇದಕ್ಕಾಗಿ ಆಡಳಿತ ಮಂಡಳಿ ನ್ಯಾಯಾಲಯದಿಂದ ಅನುಮತಿ ಪಡೆದಿತ್ತು, ಆದರೆ ಮತ್ತೆ ಸಮಸ್ಯೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಜನರು ಆಕ್ರೋಶಕ್ಕೆ ಹೊರ ಹಾಕಿದ್ದರು. ಅಲ್ಲದೆ ಕಾರ್ಖಾನೆಯನ್ನು ಮುಚ್ಚಿಸುವಂತೆ ಶಾಸಕರ ಬಳಿ ಮನವಿ ಮಾಡಿದ್ದರು.
ಸಭೆಯಲ್ಲಿ ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ಸೇರಿದಂತೆ ಪರಿಸರ ಮಾಲಿನ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.




