ತಮಿಳುನಾಡಿಗೆ ನೀರು ಹರಿಸಲು ಆದೇಶ ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ವಿರುದ್ಧ ಎರಡನೇ ದಿನದ ಸರದಿ ಉಪವಾಸವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಭಾನುವಾರ ಮುಂದುವರೆಸಿದರು.
ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಎದುರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ( ಸಾಗರ್ ಬಣ) ಜಿಲ್ಲಾ ಸಂಚಾಲಕ ಎಂ ವಿ ಕೃಷ್ಣ, ಮಿಕ್ಕೆರೆ ಚುಂಚಯ್ಯ, ಮೇನಾಗರ ಶೋಭಾ ಶ್ರೀನಿವಾಸ್,ಗರಕಹಳ್ಳಿ ವೈರಮುಡಿ, ನಿಡಘಟ್ಟ ಶಂಕರ್, ಮದ್ದೂರು ಶ್ರೀನಿವಾಸ್, ರಾಯಶೆಟ್ಟಿಪುರ ಬೈರೇಶ್ ಪ್ರಸಾದ್ ಸರದಿ ಉಪವಾಸ ನಡೆಸಿದರು.
ಭಾರತದ ಸಂವಿಧಾನ ಪೀಠಿಕೆ ಓದು
ಸಂವಿಧಾನ ದಿನಾಚರಣೆಯ ನಿಮಿತ್ತ 83ನೇ ದಿನದ ನಿರಂತರ ಧರಣಿಯಲ್ಲಿ ಕಾವೇರಿ ಹೋರಾಟಗಾರರು ಭಾರತದ ಸಂವಿಧಾನದ ಪೀಠಿಕೆ ಓದುವ ಮೂಲಕ ಸಂವಿಧಾನಕ್ಕೆ ಗೌರವ ಸಮರ್ಪಿಸಿದರು.
ಹೋರಾಟಗಾರರು ಸಂವಿಧಾನದ ಪ್ರತಿಜ್ಞಾವಿಧಿ ಸ್ವೀಕರಿಸಿ ಭಾರತದ ಪ್ರಜೆಗಳಾದ ನಾವು, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ; ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು; ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ; ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ದೃಢಸಂಕಲ್ಪ ಮಾಡಿ, ನಮ್ಮ ಸಂವಿಧಾನ ಸಭೆಯಲ್ಲಿ 1949ನೆಯ ಇಸವಿಯ ನವೆಂಬರ್ ತಿಂಗಳ 26ನೇ ದಿನದಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು.
ವೀರ ಯೋಧನಿಗೆ ಕಂಬನಿ
ಜಮ್ಮು – ಕಾಶ್ಮೀರದ ರಜೌರಿ ಜಿಲ್ಲೆಯ ಬಾಜಿ ಮಾಲ್ ಅರಣ್ಯ ಪ್ರದೇಶದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಕರ್ನಾಟಕದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಬಳಿಯ ನಂದನವನ ಲೇಔಟ್ನ ಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ರಿಗೆ ಕಾವೇರಿ ಹೋರಾಟಗಾರರು ಸಂತಾಪ ಸೂಚಿಸಿದರು.
ಒಂದು ನಿಮಿಷಗಳ ಕಾಲ ಮೌನ ಆಚರಿಸುವ ಮೂಲಕ ವೀರ ಯೋಧನನ್ನು ಸ್ಮರಿಸಿದ ಹೋರಾಟಗಾರರು ದೇಶಕ್ಕಾಗಿ ಹುತಾತ್ಮರಾದ ಯೋಧನ ಅಗಲಿಕೆಗೆ ಕಂಬನಿ ಮಿಡಿದರು.
ನಿರಂತರ ಧರಣಿಯಲ್ಲಿ ಕನ್ನಡ ಸೇನೆ ಮುಖಂಡರು ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು. ಸೇನೆಯ ರಾಜ್ಯಾಧ್ಯಕ್ಷ ಕುಮಾರ್ ಮಾತನಾಡಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಆಳುವ ಸರ್ಕಾರಗಳ ಧೋರಣೆ ಸರಿಯಲ್ಲ, ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಸಹ ಸರ್ಕಾರ ನಿರ್ಲಕ್ಷ ವಹಿಸಿದೆ. ಮುಖ್ಯಮಂತ್ರಿ, ಸಚಿವರು ಧರಣಿ ಸ್ಥಾನಕ್ಕೆ ಬಂದು ಹೋದರು ಇದುವರೆಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದರು,
ಮುಖಂಡರಾದ ಹರಿಕೃಷ್ಣ, ಪಾಟೀಲ್, ವೆಂಕಟಪ್ಪ, ಹನುಮಂತಪ್ಪ, ರಾಜೇಂದ್ರ, ಸತೀಶ್, ಶಿವರಾಮು, ಮಹಾಂತೇಶ್, ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಇತರರಿದ್ದರು.
ಜಿಲ್ಲಾ ರೈತ ಹಿತರಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ರೈತ ಸಂಘದ ಇಂಡುವಾಳು ಚಂದ್ರಶೇಖರ್. ಮುದ್ದೆ ಗೌಡ,ನಾರಾಯಣ್, ಶಿವರಾಜ್ ನೇತೃತ್ವ ವಹಿಸಿದ್ದರು.




