Friday, November 20, 2026

ಪ್ರಾಯೋಗಿಕ ಆವೃತ್ತಿ

ಸಮರ್ಪಕ ಅನ್ನ, ಸಂಪೂರ್ಣ ಜ್ಞಾನಗಳು ನಮ್ಮನ್ನು ಬಿಡುಗಡೆಗೊಳಿಸುತ್ತವೆ…..

✍️ ಡಾ.ವೆಂಕಟೇಶ್ ನೆಲಕುಂಟೆ

ನಮ್ಮ ಅತಿ ದೊಡ್ಡ ಸಮಸ್ಯೆಗಳು; ಅಪೌಷ್ಟಿಕತೆ, ಬಾಯಿ ಪಾಠ ಮಾಡುವ ನೀಡುವ ಶಿಕ್ಷಣ ಮತ್ತು ತಾವು ಓದುತ್ತಿರುವುದು ಉದ್ಯೋಗಕ್ಕೆ ಮಾತ್ರ ಎಂಬ ತಿಳಿವಳಿಕೆ. ಈ ಮೂರೂ ಕೂಡ ನಮ್ಮನ್ನು ವಿಶ್ವ ಸಮುದಾಯದ ಜೊತೆ ಸರಿಸಮನಾಗಿ ಹೆಜ್ಜೆ ಹಾಕಲಾಗದಂತೆ ಮಾಡುತ್ತಿವೆ.

ಬಿಡಿ ಬಿಡಿಯಾಗಿ ಕೆಲವರು ಬಹಳ ಬುದ್ಧಿವಂತರಿರುತ್ತಾರೆ, ಹಲವರು ಆರೋಗ್ಯವನ್ನು ಚೆನ್ನಾಗಿಟ್ಟುಕೊಂಡಿರುತ್ತಾರೆ ಹಾಗೂ ಅನೇಕರು ಅಂಕಪಟ್ಟಿಗಳಿಗೆ ಮರ್ಯಾದೆ ಕೊಡುವುದನ್ನು ನಿಲ್ಲಿಸಿ ಶಿಕ್ಷಣವು ಮಕ್ಕಳ ಕುತೂಹಲ, ಪ್ರಶ್ನೆ ಮತ್ತು ಹುಡುಕಾಟಗಳ ಕಡೆಗೆ ಇರಬೇಕು, ಬಿಕ್ಕಟ್ಟುಗಳನ್ನು ನಿಭಾಯಿಸುವ ಶಕ್ತಿ ಇರಬೇಕು ಎಂದು ಬಯಸುತ್ತಾರೆ. ಆದರೆ ಸ್ಕೂಲುಗಳಲ್ಲಿ ಈ ರೀತಿ ಕಲಿಯುವ ವಾತಾವರಣವೆ ಇಲ್ಲವಾಗಿದೆ.

ಬುದ್ಧಿ, ಕರುಣೆ ಮತ್ತು ಕೌಶಲ್ಯವಿಲ್ಲದ ಶಿಕ್ಷಣ ಸಂಪೂರ್ಣ ಸಮಸ್ಯಾತ್ಮಕ. ನಮ್ಮಲ್ಲಿ ನೆನಪಿಟ್ಟುಕೊಳ್ಳುವುದು ಮತ್ತು ಬಾಯಿ ಪಾಠ ಮಾಡುವುದನ್ನೆ ಶಿಕ್ಷಣ ಎಂಬ ನಿಲುವು ಬುದ್ಧ ಪೂರ್ವ ಯುಗದಿಂದಲೂ ಇದೆ. ಬುದ್ಧ ಮಾತ್ರ ಜ್ಞಾನವನ್ನು ಮುಟ್ಟಿ ನೋಡಿ ಕಲಿಯುವ ವಿಧಾನ ಎಂದು ಭಾವಿಸಿದ್ದ. ಅನುಭವಕ್ಕೆ ಬಂದದ್ದರ ಬಗ್ಗೆ ಮಾತ್ರ ಅವನು ಖಚಿತವಾಗಿ ಮಾತನಾಡಿದ್ದ.

ಅವನ ದರ್ಶನಗಳಲ್ಲಿ ಕರುಣೆ ಮತ್ತು ಕೌಶಲ್ಯಗಳಿದ್ದವು. ಅವು ತಿಳುವಳಿಕೆಯ ಮೂಲಕವೆ ನಿರೂಪಿತಗೊಳ್ಳುತ್ತವೆ ಎಂದು ಭಾವಿಸಿದ್ದ. ಇಲ್ಲದಿದ್ದರೆ ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ದರ್ಶನದ ಕುರಿತು ಆದಿಮ ಬೌದ್ಧರು ಮಾತನಾಡುತ್ತಿರಲಿಲ್ಲ.
ಪಂಚಶೀಲಗಳು ಹಾಗೂ ಅಷ್ಟಾಂಗ ಮಾರ್ಗಗಳು ಮಾತ್ರ ಮನುಷ್ಯನನ್ನು ವ್ಯಾಕುಲ ಮುಕ್ತನನ್ನಾಗಿಸಲು ಸಾಧ್ಯ ಎಂದು ಭಾವಿಸಿದ್ದರು. ಇದು ಒಂಥರಾ ವಿಜ್ಞಾನದ ಮಾರ್ಗವೆ.

ಯುರೋಪಿನ ಗೆಲಿಲಿಯೊ, ಐನ್ ಸ್ಟೈನ್, ಹಾಕಿಂಗ್ ಮುಂತಾದವರು ಬುದ್ಧನ ಸಮ್ಯಕ್ ದರ್ಶನ ಮತ್ತು ಸಮ್ಯಕ್ ಜ್ಞಾನಗಳಂಥ ಹಾದಿಗೆ ಹೋಗಬೇಕೆಂದು ಬಯಸಿದವರೆ.

ಕೌಶಲ್ಯವಂತ ಸಮುದಾಯಗಳಿಂದ ಬಂದ ಗೆಲಿಲಿಯೊ ಮುಂತಾದವರು ದೊಡ್ಡ ವಿಜ್ಞಾನಿಗಳಾಗಲು ಸಾಧ್ಯವಾಯಿತು. ಅವರು ಏಕಕಾಲದಲ್ಲಿ ಕೈ ಮತ್ತು ಮೆದುಳನ್ನು ಬಳಸಿ ವಿಜ್ಞಾನದ ಅಸೀಮ ಸಾಧ್ಯತೆಗಳನ್ನು ದರ್ಶಿಸಿದರು.

ನಮ್ಮ ಶಾಲಾ ಶಿಕ್ಷಣವು ಕೌಶಲ್ಯಕ್ಕೆ ಒಂದಿಷ್ಟು ಬೆಲೆಯನ್ನೂ ಕೊಡುತ್ತಿಲ್ಲ. ಲ್ಯಾಬುಗಳು ನೆಪಮಾತ್ರಕ್ಕೆಂಬಂತೆ ನಡೆಯುತ್ತಿವೆ. ಸಮಾಜವೆಂಬ ಬೃಹತ್ ಲ್ಯಾಬುಗಳ ಮೂಲಕ ಕಲಿಯುವ ದೃಷ್ಟಿಯನ್ನು ಸಂಪೂರ್ಣ ಕಿತ್ತುಕೊಳ್ಳಲಾಗಿದೆ. ಇಲ್ಲದಿದ್ದರೆ ಬಡಗಿ , ಕುಂಬಾರ, ರೈತ, ಚಮ್ಮಾರರ ಮಕ್ಕಳು ಗಣಿತ, ಭೌತಶಾಸ್ತ್ರವೆಂದರೆ ನಡುಗಬೇಕಾಗಿರಲಿಲ್ಲ. ರೇಷ್ಮೆ ಸಾಕುವ, ಹಾಲು ಕರೆಯುವ, ಕರು ಸಾಕುವ ಮಕ್ಕಳು ಜೀವಶಾಸ್ತ್ರವೆಂದರೆ ಹೆದರಬೇಕಾಗಿರಲಿಲ್ಲ. ನಮ್ಮ ಅಡುಗೆ ಮನೆಯೆ ದೊಡ್ಡ ಕೆಮಿಸ್ಟ್ರಿಯ ಲ್ಯಾಬು ಎಂದ ಪಿ ಸಿ ರೇ ಮಾತನ್ನು ಎಷ್ಟು ಜನ ರಸಾಯನ ಶಾಸ್ತ್ರದ ಮೇಷ್ಟ್ರುಗಳು ಅರ್ಥ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಜಗತ್ತಿನ ಹಲವು ದೇಶಗಳಿಂದ ಬರುತ್ತಿರುವ ಇಂಜಿನಿಯರುಗಳ ಕೌಶಲ್ಯವನ್ನು ಅಳೆದ ವರದಿಯೊಂದು ಪತ್ರಿಕೆಗಳಲ್ಲಿ ಪ್ರಕಟವಾಯಿತು. ಅಳತೆ ಮಾಡಲು ಜಾಗತಿಕ ಮಟ್ಟದ ಬೆಂಚ್ ಮಾರ್ಕನ್ನು ನಿಗಧಿಪಡಿಸಲಾಗಿತ್ತು. ಅದರ ಪ್ರಕಾರ ದಕ್ಷಿಣ ಕೊರಿಯಾದ ಶೇ 85 ರಷ್ಟು, ಇಂಗ್ಲೆಂಡಿನ ಶೇ 68 ರಷ್ಟು ಯುವಜನರು ಬೆಂಚ್ ಮಾರ್ಕನ್ನು ಮುಟ್ಟಿದರೆ ಭಾರತದವರು ಶೇ.4 ರಷ್ಟು ಮುಟ್ಟಿದರು ಎಂದಾಗ ದಿಗಿಲಾಯಿತು. ಇದು ನಮ್ಮ ಪೆಡಗಾಜಿಯ ಕನ್ನಡಿ ಎಂದು ಭಾವಿಸಲೇಕಾಗಿದೆ ವಜ್ರ- ಬಂಗಾರದ ಬೆಲೆ ಗೊತ್ತಿಲ್ಲದ. ಆದಿ ಮಾನವರು ಅವನ್ನು ಹೇಗೆ ಕಲ್ಲು ಮಣ್ಣುಗಳೆಂದು ಭಾವಿಸಿದರೊ ಅದರಂತೆಯೆ ನಾವು ಯುವಜನರನ್ನು ನೋಡುತ್ತಿದ್ದೇವೆ. ಯಾವುದನ್ನೂ ಸಮರ್ಪಕವಾಗಿ ನೋಡುತ್ತಿಲ್ಲ.

ಎಲ್ಲವನ್ನೂ ಹಾದಿ ತಪ್ಪಿಸಿದ್ದೇವೆ. ಹೊಲಬು ತಪ್ಪಿಸಿದ್ದೇವೆ. ಈಗ ಅನ್ನದ ಸಮಸ್ಯೆಯನ್ನು ಶುರು ಮಾಡಿದ್ದೇವೆ ( ಮೊದಲಿನಿಂದಲೂ ಇದೆ. ಆದರೆ ಕಡಲು ದಾಟಿ ಜಾಗತಿಕಗೊಂಡ ಮೇಲೂ ಈ ರಾಜಕಾರಣ ಮಾಡುತ್ತ ಕೂತರೆ ನಾವು ಉದ್ಧಾರವಾಗುವುದೆಂದು?)

NHFS- 5 ರ ಸಮೀಕ್ಷೆಯ ವರದಿಗಳು ಹೇಳುವಂತೆ ಹೆಚ್ಚು ಸಸ್ಯಾಹಾರವಿರುವ ಪಶ್ಚಿಮ ಭಾರತ ಅದರಲ್ಲೂ ಗುಜರಾತಿನಲ್ಲಿ ಅಪೌಷ್ಟಿಕತೆಯ ಸಮಸ್ಯೆ ತೀವ್ರವಾಗಿದೆ. ಗುಜರಾತಿನ ಶೇ. 82 ರಷ್ಟು ಗ್ರಾಮೀಣ ಭಾಗದ ಮಕ್ಕಳಲ್ಲಿ ಹಿಮೊಗ್ಲೋಬಿನ್ ಮಟ್ಟ 11 ಕ್ಕಿಂತ ಕಡಿಮೆ ಇದೆ. ನಮ್ಮಲ್ಲಿ ಶೇ 65.5 ಮಕ್ಕಳು ಹಿಮೊಗ್ಲೋಬಿನ್ ಕೊರತೆಯಿಂದ ಒದ್ದಾಡುತ್ತಿದ್ದಾರೆ. ಕೇರಳದಲ್ಲಿ ಇದರ ಪ್ರಮಾಣ ಶೇ 39.4 ರಷ್ಟಿದೆ.

15-49 ವರ್ಷದ ಹೆಣ್ಣು ಮಕ್ಕಳಲ್ಲಿ ಅನೀಮಿಯ ಸಮಸ್ಯೆ ಗುಜರಾತಿನಲ್ಲಿ ಶೇ 65 ರಷ್ಟಿದೆ. ಕರ್ನಾಟಕದ ಶೇ. 47 ರಷ್ಟು ಹೆಣ್ಣು ಮಕ್ಕಳು ಅನೀಮಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಕೇರಳದಲ್ಲಿ ಇದರ ಪ್ರಮಾಣ ಶೇ.36 ರಷ್ಟಿದೆ.
ಹೀಗಿದ್ದಾಗ ನಾವು ನಮ್ಮ ನಾಡುಗಳನ್ನು ಜಗತ್ತಿನ ಎದುರು ಸ್ಫರ್ಧೆಗೆ ನಿಲ್ಲಿಸುವುದು ಹೇಗೆ?

ಮಾಂಸಾಹಾರವಿಲ್ಲದೆ ಊಟವೆ ಇಲ್ಲ ಎಂದು ಬದುಕುವ ಪಶ್ಚಿಮ ಮತ್ತು ಪೂರ್ವದ ದೇಶಗಳು ಜ್ಞಾನ ವಿಜ್ಞಾನಗಳನ್ನು ಸಂಪೂರ್ಣ ಕಬ್ಜಾ ಮಾಡಿಕೊಂಡು ಕೂತಿವೆ. ಪ್ರತಿ ವರ್ಷ ಪ್ರಕಟಗೊಳ್ಳುವ ನೊಬೆಲ್ ಪ್ರಶಸ್ತಿಗಳು ಹತ್ತತ್ತಿರ ಶೇ.100 ರಷ್ಟು ಮಾಂಸಾಹಾರಿ ದೇಶಗಳಿಗೆ ಹೋಗುತ್ತಿವೆ. ಅವರು ಕರುಣೆ, ದಯೆ, ಬುದ್ಧಿ, ಕೌಶಲ್ಯಗಳಲ್ಲಿ ಅಪಾರವಾದುದನ್ನು ಸಾಧಿಸಿದ್ದಾರೆ.

ಹಾಗಾಗಿ ಆಹಾರದಲ್ಲಿ ತಾಮಸ, ಸಾತ್ವಿಕ ಅಂತೆಲ್ಲ ಇಲ್ಲ. ಅನ್ನದೊಳಗೆ ಬೇಧವೆಣಿಸಿದ್ದು ಮನುಷ್ಯತ್ವವೂ ಅಲ್ಲ. ವಿಜ್ಞಾನತ್ವವೂ ಅಲ್ಲ. ಬುದ್ಧ ಅಹಿಂಸೆಯ ಕುರಿತು ಮಾತನಾಡಿದ್ದಕ್ಕೆ ಕಾರಣ; ಕಾಲವು ಒತ್ತಾಯಿಸಿದ ರಾಜಕೀಯ, ಸಾಮಾಜಿಕ ಒತ್ತಡದ ಪರಿಣಾಮ. ಬುದ್ಧನ ಈ ಪ್ರಮೇಯವನ್ನು ಸೋಲಿಸಲು ಮಾಡಿದ ಕೆಲಸ ಅದನ್ನು ವಿರೋಧಿಸಿದ್ದಲ್ಲ. ಬದಲಾಗಿ‌ ಆ ತತ್ವವನ್ನು ಕ್ರೂ ಡಾಗಿ ತನ್ನದನ್ನಾಗಿ ಮಾಡಿಕೊಂಡಿದ್ದು.

ಪ್ರಮೇಯ ಮತ್ತು ಪ್ರತಿಮೆಗಳ ಕಬ್ಜಾತನದಲ್ಲಿ ಈ ದೇಶದ ಸಮುದಾಯಗಳ ಸೋಲು- ಗೆಲುವುಗಳು ತೀರ್ಮಾನವಾಗಿ ಹೋಗಿವೆ.

ಹಾಗಾಗಿ ಬಲಿಷ್ಠ ದೇಹ, ಬಲಿಷ್ಠ ಮನಸ್ಸು ಅಥವಾ ಮೆದುಳು ಮುಖ್ಯ, ಇಲ್ಲದಿದ್ದರೆ ಉದ್ಧಾರವಾಗುವುದು ಹೇಗೆ ಎಂದ ಸ್ವಾಮಿ ವಿವೇಕಾನಂದರ ಮಾತು ಇವತ್ತಿಗೆ ಪ್ರಸ್ತುತ.
ಸಮಾಜಗಳು ಇದರ ಕುರಿತು ಯೋಚಿಸಬೇಕು.

ಸಮರ್ಪಕ ಅನ್ನ, ಸಂಪೂರ್ಣ ಜ್ಞಾನಗಳು ನಮ್ಮನ್ನು ಬಿಡುಗಡೆಗೊಳಿಸುತ್ತವೆ. ವಿಶ್ವ ಸಮುದಾಯದ ಜೊತೆ ಹೆಗಲಿಗೆ ಹೆಗಲು ತಾಕಿಸಿ ನಡೆಯುವಂತೆ ಮಾಡುತ್ತವೆ.

ಸ್ವಾರ್ಥ ಬಿಟ್ಟು ಉದಾರವಾಗಬೇಕು. ಇಲ್ಲದಿದ್ದರೆ ನಾಶವಾಗಲು ಸಿದ್ಧರಾಗಬೇಕು.
(ಒಂದು ಹಳೆಯ ಪೋಸ್ಟ್)

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ