2023-24ನೇ ಸಾಲಿಗೆ ಯಶಸ್ವಿನಿ ಆರೋಗ್ಯ ಯೋಜನೆಯಡಿ ರಾಜ್ಯದಾದ್ಯಂತ ಸದಸ್ಯತ್ವ ನೋಂದಣಿಯನ್ನು 2024ರ ಜನವರಿ 1 ರಿಂದ ಆರಂಭಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಶಾಸಕ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ಈಗಿರುವ ಹಾಲಿ ಸದಸ್ಯರಿಗೆ ಚಿಕಿತ್ಸಾ ಅವಧಿಯನ್ನು 2023 ಡಿಸೆಂಬರ್ ರಿಂದ 2024 ಮಾರ್ಚ್ ಅಂತ್ಯದವರೆಗೆ ವಿಸ್ತರಿಸಲಾಗಿದೆ. 2023-24ನೇ ಸಾಲಿಗೆ ಒಟ್ಟು 50 ಲಕ್ಷ ಸದಸ್ಯರ ನೋಂದಣಿ ಮಾಡಲು ಗುರಿ ನಿಗದಿಪಡಿಸಿಕೊಳ್ಳಲಾಗಿದೆ. ಆದರೆ, ವಂತಿಗೆ ಮೊತ್ತವನ್ನು ಪರಿಷ್ಕರಿಸುವ ಉದ್ದೇಶ ಸರ್ಕಾರದ ಮುಂದಿರುವುದಿಲ್ಲ ಎಂದಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಕಪ್ಪು ತಲೆ ಹುಳು ಬಾಧೆಯಿಂದ 4638 ಹೆಕ್ಟೇರ್ ವಿಸ್ತೀರ್ಣದ ತೆಂಗು ಬೆಳೆ ಹಾನಿ ಆಗಿದ್ದು, ಇದರ ಅಂದಾಜು 1298.64 ಲಕ್ಷದಷ್ಟಿದೆ. ಹಾಗೇ, ಮಳವಳ್ಳಿ ತಾಲ್ಲೂಕಿನಲ್ಲಿ ಬೆಂಕಿರೋಗಕ್ಕೆ 150 ಹೆಕ್ಟೇರ್ ವಿಸ್ತೀರ್ಣದ ಬೆಳೆ ಹಾನಿ ಆಗಿದ್ದು, ಇದರ ಅಂದಾಜು ರೂ. 42 ಲಕ್ಷದಷ್ಟಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಅಲ್ಲದೆ, ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಎನ್.ಡಿ.ಆರ್.ಎಫ್/ ಎಸ್.ಡಿ.ಆರ್.ಎಫ್. ಮಾರ್ಗಸೂಚಿಯನ್ವಯ ಬಹು ವಾರ್ಷಿಕ ಬೆಳೆಗಳಿಗೆ ರೂ. 28,000/-ನಂತೆ ಪ್ರತಿ ಹೆಕ್ಟೇರ್ ಗೆ ಪರಿಹಾರ ನೀಡುವಂತೆ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಕಪ್ಪು ತಲೆ ಹುಳು ಮತ್ತು ಬೆಂಕಿ ರೋಗದಿಂದ ತೆಂಗು ಬೆಳೆ ಹಾನಿಯಾಗಿದ್ದು ರೈತರಿಗೆ ಸೂಕ್ತ ಪರಿಹಾರ ವಿತರಿಸುವುದರ ಜೊತೆಗೆ ರೋಗ ನಿಯಂತ್ರಣಕ್ಕೂ ಸೂಕ್ತ ಕ್ರಮವಹಿಸುವಂತೆ ವಿಧಾನ ಪರಿಷತ್ತಿನಲ್ಲಿ ಶಾಸಕ ಮಧು ಜಿ.ಮಾದೇಗೌಡ ಅವರು ಕೇಳಿದ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.
202-23ನೇ ಸಾಲಿನಲ್ಲಿ ಯಶಸ್ವಿನಿ ಯೋಜನೆಯಡಿ ಫಲಾನುಭವಿಗಳಿಗೆ ಚಿಕಿತ್ಸೆಯನ್ನು 2023ರ ಜನವರಿಯಿಂದ ಆರಂಭಿಸಲಾಗಿದ್ದು, ಇಲ್ಲಿಯವರೆಗೆ ಸುಮಾರು 45 ಸಾವಿರ ಫಲಾನುಭವಿಗಳು ಲಾಭ ಪಡೆದುಕೊಂಡಿದ್ದಾರೆ. ಇದಕ್ಕಾಗಿ ರೂ. 74 ಕೋಟಿ ಮೊತ್ತವನ್ನು ಚಿಕಿತ್ಸೆ/ ಶಸ್ತ್ರಚಿಕಿತ್ಸೆಗಳಿಗಾಗಿ ರಾಜ್ಯದಾದ್ಯಂತ ಇರುವ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಿಗೆ ಪಾವತಿಸಲಾಗಿದೆ. ಯಶಸ್ವಿನಿ ಯೋಜನೆಯಡಿ ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳು, ಕಿವಿ, ಮೂಗು, ಗಂಟಲು ವ್ಯಾದಿಗಳು, ಕರುಳಿನ ಕಾಯಿಲೆಗಳು, ನರಗಳಿಗೆ ಸಂಬಂಧಿಸಿದ ಕಾಯಿಲೆಗಳು, ಹೆರಿಗೆ ಹಾಗೂ ಸ್ತ್ರೀಯರಿಗೆ ಸಂಬಂಧಿಸಿದ ಮತ್ತು ಕ್ಯಾನ್ಸರ್, ಉದರ ಸೇರಿದಂತೆ ವಿವಿಧ ಕಾಯಿಲೆಗಳಿಗೆ ವೈದ್ಯಕೀಯ ಚಿಕಿತ್ಸೆ ಪಡೆಯಲಾಗಿದೆ. ಎಂದು ಮಾಹಿತಿ ನೀಡಿದ್ದಾರೆ.




