✍️ ಹರೀಶ್ ಗಂಗಾಧರ್
ಆ ಆನೆ ಮಾಡಿದ ತಪ್ಪೇನು ಅಂದ್ರೆ ಎಲ್ಲರಿಗಿಂತ ದೈತ್ಯನಾಗಿ ಹುಟ್ಟಿದ್ದು, ಹೊಳೆಯುವ ಉದ್ದನೆಯ ನುಣುಪಾದ ಕೋರೆ ಹಲ್ಲು ಹೊಂದಿದ್ದು. ಕಾಕನ ಕೋಟೆ ಕಾಡಿನಲ್ಲಿ ಆಟವಾಡಿಕೊಂಡಿದ್ದ ಅಗಲವಾದ ಬೆನ್ನಿನ ತುಂಟನಿಗೇನು ಗೊತ್ತಿತ್ತು ಮನುಷ್ಯರ ಕ್ರೌರ್ಯ. ಮುಂದೆ ಬಂದರೆ ಈ ಹುಲು ಮಾನವನನ್ನು ಒಸಕಿ ಹಾಕಿಬಿಡುವೆ ಎಂಬ ಅತಿಯಾದ ಆತ್ಮವಿಶ್ವಾಸ ಅವನಿಗಿತ್ತು ಆಗ ಅನ್ನಿಸುತ್ತೆ.
1968ರಲ್ಲಿ ಖೆಡ್ಡಾ ತೋಡಿ ಸೆರೆಹಿಡಿದು, ಸರಪಳಿಗಳಿಂದ ಬಂಧಿಸಿ, ಹಠ ಮಾಡಿದಾಗ ಊಟ ನೀರು ಕೊಡದೆ ಉಪವಾಸ ಕೆಡವಿ ಕೊನೆಗೂ ಆತನ ದೈತ್ಯ ದರ್ಪ ಮುರಿದೇ ಬಿಟ್ಟರು. ಜೀವನ ಪರ್ಯಂತ ಜೀತಕ್ಕಿದ್ದ ದೈತ್ಯನಿಗೆ ಅಂಬಾರಿಯ ಭಾರ ಹೊರುವ ಭಾಗ್ಯ ಸಿಕ್ಕಿತೆಂದು, ಆತನೇ ಭಾಗ್ಯಶಾಲಿ ಎಂದು ಜನ ಮುಂದೊಂದು ದಿನ ಮಾತನಾಡಿಕೊಂಡರೂ ಅದು ಆತನಿಗೆ ಮತ್ತೊಂದು ಸಹಿಸಲಸಾಧ್ಯ ಸಜೆಯಾಗಿತ್ತು ಅಷ್ಟೇ. ಮನುಷ್ಯ ತನ್ನ ಕ್ರೌರ್ಯವನ್ನು ಕೂಡ ಎಲ್ಲರಿಗೂ ಒಪ್ಪಿತವಾಗುವ ರೀತಿಯಲ್ಲಿ ಹೇಗೆಲ್ಲಾ rationalise ಮಾಡಿಬಿಡುತ್ತೇನೆ! ಅರ್ಜುನನೆಂದು ಹೆಸರಿಟ್ಟುಕೊಂಡ ಆನೆ ಅನುಭವಿಸಿದ ಮಾನಸಿಕ ವೇದನೆ ಎಂತಹದಿದ್ದಿರಬಹುದು!
ವರ್ಷಕೊಮ್ಮೆ ಅರ್ಜುನನಿಗೆ ರಾಜ ಮರ್ಯಾದೆ ಸಿಗುತ್ತಿತ್ತು. ಆತ ರಾಜ ಗಾಂಭೀರ್ಯದಿಂದಲೇ ಅಂಬಾರಿ ಹೊತ್ತು ಸಾಗುತ್ತಿದ್ದ ಅಂತೆಲ್ಲಾ ನಾವು ಅಂದುಕೊಳ್ಳಬಹುದು. ಆದರೆ ಕಾಡಿನ ಪ್ರಾಣಿಯೊಂದು ಜಂಜಂಗುಳಿ ಇರುವ ಡಾಂಬರಿನ ರಸ್ತೆಗಳಲ್ಲಿ, ವಾಹನಗಳ ಸದ್ದಿನ ನಡುವೆ ದಿನನಿತ್ಯ ತಾಲೀಮು ನಡೆಸಬೇಕಾದಾಗ ಅದರ ಯಾತನೆ ಅದಕ್ಕೆ ಮಾತ್ರ. ಒಮ್ಮೊಮ್ಮೆ ಯಾತನೆ ಅಸಹನೀಯವಾದಾಗ ಮಾವುತನನ್ನು ಗುಮ್ಮಿದ್ದೂ ಇದೆ. ಒಬ್ಬನನ್ನು ಕೊಂದದ್ದು ಇದೆ. ಮಾವುತನನ್ನು ಕೊಂದ ಮೇಲಾದರೂ ಬಿಡುಗಡೆಯ ಹಾದಿ ಸುಗಮವಾಗಬಹುದು ಎಂದುಕೊಂಡಿದ್ದ ಆನೆಗೆ ಸಿಕ್ಕಿದ್ದು ಮತ್ತಷ್ಟು ಸಂಕೋಲೆಗಳು ಮಾತ್ರ. ವರ್ಷದಲ್ಲಿ ಒಂದು ತಿಂಗಳು ರಾಜ ಆತಿಥ್ಯ. ಮಿಕ್ಕೆಲ್ಲಾ ತಿಂಗಳುಗಳು ಜೀತ. ಅಂಬಾರಿಯ ದಿನ ಈತನೇ ಕೇಂದ್ರ ಬಿಂದು. ಮುಂದಿನ ದಿನ ದಿನಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಸೂಪರ್ ಸ್ಟಾರ್! ದಸರಾ ಆಚೆಗಿನ ಬದುಕು??? ಅದು ಯಾರಿಗೆ ಬೇಕು…
Elephant Arjuna ‘s Mahutha cries as he bids goodbye to his unspoken friend who was connected by heart….💔 It’s hard to watch this…#RIPArjuna #RIP 😭😭 pic.twitter.com/3JpTBvWbb5
— ManjulaShobha (@ManjuShobha1981) December 5, 2023
“>
ದುಡಿವ ಮನುಜನಿಗೂ ಅರವತ್ತಕ್ಕೇ ನಿವೃತ್ತಿ ಸಿಗುವಾಗ, ನಮ್ಮ ನಾಡದೇವತೆಯನ್ನು ಹೊತ್ತು ಮೆರೆಸಿದ ಅರ್ಜುನನಿಗೆ ಅರವತ್ತಾ ನಾಲ್ಕಾದರು ಜೀತದಿಂದ ಮುಕ್ತಿ ಸಿಕ್ಕಿರಲೇ ಇಲ್ಲ. ದಿನನಿತ್ಯ ಜೀವ ಒತ್ತೆಯಿಟ್ಟು, ಕಾದಾಡಿ ಮತ್ತೊಬ್ಬ ಅರ್ಜುನನ್ನು ಸೆರೆ ಹಿಡಿಯುವ ಕಾಯಕ ಆತನಿಗೆ.
ಹದಿನಾಲ್ಕನೇ ಶತಮಾನದಲ್ಲಿ ಅತೋಮನ್ ಟರ್ಕರು ಆಲ್ಬೇನಿಯ, ಬಲ್ಗೇರಿಯಾ, ರೊಮೇನಿಯಾ, ಕ್ರೋವೇಶಿಯ, ಸೆರ್ಬಿಯಾ, ಗ್ರೀಕ್ ಮತ್ತು ಉಕ್ರೇನ್ ಮೇಲೆ ದಾಳಿ ಮಾಡಿದಾಗ ಕ್ರಿಶ್ಚಿಯನ್ ಮಕ್ಕಳನ್ನು ಅಪಹರಿಸುತ್ತಿದ್ದರಂತೆ. ಆ ಮಕ್ಕಳನ್ನು ಮತಾಂತರಗೊಳಿಸಿ, ತರಬೇತಿ ನೀಡಿ ಕ್ರಿಶ್ಚಿಯನ್ ದೇಶಗಳ ಮೇಲೆ ದಾಳಿ ಮಾಡಿಸುತ್ತಿದ್ದರಂತೆ. ಸುಲ್ತಾನನ ಸುತ್ತ ಸರ್ಪಗಾವಲು ಇವರದ್ದೇ! ಇವರು ಜಾನಿಸ್ಸರಿಗಳೆಂದೇ ಪ್ರಖ್ಯಾತರಾಗಿದ್ದರಂತೆ. ಜಾನಿಸ್ಸರಿಗಳು ದಾಳಿ ಮಾಡುತ್ತಿದ್ದಾರೆ ಎಂದರೆ ಇಡೀ ಕ್ರಿಶ್ಚಿಯನ್ ಜಗತ್ತು ನಡುಗುತ್ತಿತ್ತಂತೆ. ವಿಪರ್ಯಾಸ ನೋಡಿ ಟರ್ಕಿಯ ಸುಲ್ತಾನ ಕ್ರೈಸ್ತ ಧರ್ಮದ ಮಕ್ಕಳನ್ನೇ ಕ್ರೈಸ್ತರ ವಿರುದ್ಧ ಸಮರಕ್ಕೆ ಬಿಟ್ಟಿದ್ದ! ಆನೆಗಳು ಆಧುನಿಕ ಜಗತ್ತಿನ ನಿಜವಾದ ಜಾನಿಸ್ಸರಿಗಳು! ಆನೆಗಳಿಂದ ಆನೆಗಳನ್ನು ಸೆರೆ ಹಿಡಿಸಿ, ಕೆಲ ಪುಂಡಾನೆಗಳನ್ನು ಕೊಲ್ಲಿಸಿ ಮತ್ತಷ್ಟು ಭೂ ಪ್ರದೇಶವನ್ನು ತನ್ನ ಸುಪರ್ದಿಗೆ ತೆಗೆದಕೊಳ್ಳುವ ತವಕದಲ್ಲಿರುವ ನಾವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಟರ್ಕಿಯ ಸುಲ್ತಾನರೆ!
ವರುಷಗಳ ಹಿಂದೆ ದಸರಾಕ್ಕೆ ತಾಲೀಮು ನೆಡೆಸುವ ಸಮಯದಲ್ಲಿ ದೈತ್ಯ ಅರ್ಜುನನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೆ. ಆ ಕಣ್ಣುಗಳಲ್ಲಿ ತೇಜಸ್ಸು, ಮುಗ್ಧತೆಯಿತ್ತೆಂದು ನಾನು ಅಂದುಕೊಂಡಿದ್ದರೂ, ಆ ಕಣ್ಣುಗಳಲ್ಲಿ ಇದ್ದದ್ದು 1964ರಿಂದ ಅದುಮಿಟ್ಟುಕೊಂಡಿದ್ದ ಕಣ್ಣೀರು ಮಾತ್ರ. ಅರವತ್ತ ನಾಲ್ಕರ ಅರ್ಜುನ ಮಣ್ಣಲ್ಲಿ ಮಣ್ಣದ. ಅರಣ್ಯಾಧಿಕಾರಿಗಳು ಗೌರವ, ಸಂತಾಪ ಸೂಚಿಸುತ್ತಿದ್ದರು, ಭಕ್ತರು ವಿಭೂತಿ, ಹೂಗಳನ್ನು ಅವನ ಶವದ ಮೇಲೆ ಹಾಕಿ, ಒಂದಿಡಿ ಮಣ್ಣಾಕಿ ಗೋವಿಂದಾ… ಗೋವಿಂದಾ… ಅಂತ ಕೂಗುತ್ತಿದ್ದರು, ಅತೀವ ನೋವನ್ನು ತಡೆಯಲಾಗದೆ ಪ್ರಜ್ಞೆ ತಪ್ಪಿ ಬಿದ್ದವನು, ಅರ್ಜುನನ ಹೃದಯ ಬಡಿತವನ್ನು ಸ್ವಲ್ಪವಾದರೂ ಕೇಳಿಸಿಕೊಂಡಿದ್ದ, ಅರ್ಜುನನ ಅಂತರಾಳವನ್ನು ಕಿಂಚಿತ್ತಾದರೂ ಅರಿತಿದ್ದ ಮಾವುತ…




