ವಿಶ್ವ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮಕ್ಕೆ ಗೈರಾದ ಸಾಲು ಸಾಲು ಅಧಿಕಾರಿಗಳ ವಿರುದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಮಾದೇಶ ಅವರು ಅಸಮಾಧಾನ ಹೊರ ಹಾಕಿದರು, ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಯಾರಿಗೆ ಸಿಗಬೇಕೋ ಅವರಿಗೆ ಸವಲತ್ತುಗಳು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಳವಳ್ಳಿ ಪಟ್ಟಣದ ಶ್ರೀಸಮುದಾಯ ಗ್ರಾಮೀಣ ವಿಕಲಚೇತನರ ಪುನರ್ವಸತಿ ಯೋಜನೆ ಕಚೇರಿ ಆವರಣದಲ್ಲಿ ನಡೆದ 26ನೇ ವಿಶ್ವ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾರು ಬರಬೇಕೋ ಅವರೇ ಬಂದಿಲ್ಲ, ಅವರಿಗೆ ತುಂಬಾ ಕೆಲಸ ಕಾರ್ಯಗಳು ಇದೆಯೋ ಅಥವಾ ಕಾಳಜಿ ಇಲ್ಲವೋ ಗೊತ್ತಿಲ್ಲ ಅಥವಾ ಕಾರ್ಯಕ್ರಮಕ್ಕೆ ಹೋದರೆ ಪ್ರಯೋಜನ ಇಲ್ಲ ಎಂದುಕೊಂಡಿದ್ದಾರೋ ಅರ್ಥವಾಗುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದರು.
ಆಹ್ವಾನ ಪತ್ರಿಕೆಯಲ್ಲಿದ್ದ ತಹಸೀಲ್ದಾರ್, ತಾ.ಪಂ ಇಒ ಹಾಗೂ ಡಿವೈಎಸ್ ಪಿ, ಪುರಸಭೆ ಮುಖ್ಯಾಧಿಕಾರಿ ಸಹಿತ ಯಾವ ಅಧಿಕಾರಿಗಳು ಬಾರದ ಹಿನ್ನಲೆಯಲ್ಲಿ ಸಭೆಯಲ್ಲೇ ಬೇಸರ ಹೊರಹಾಕಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಸಚಿನ್ ಶಿವಪೂಜಿ, ಮಹಂತೇಶ್,ಎಸಿಡಿಪಿಒ ಮಹೇಶ್, ಶ್ರೀಕಂಠಸ್ವಾಮಿ, ಸಂಯೋಜಕ ನೀಲಾ, ಕೃಷ್ಣಮೂರ್ತಿ, ಸೇರಿದಂತೆ ಹಲವರು ಇದ್ದರು.




