ಕನ್ನಡ ಚಿತ್ರರಂಗದ ನಟ ರಾಕಿಂಗ್ ಸ್ಟಾರ್ ಯಶ್ ಜನ್ಮದಿನದ ಹಿನ್ನೆಲೆ ಹುಟ್ಟಹಬ್ಬದ ಶುಭಾಶಯ ಕೋರುವ ಬ್ಯಾನರ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ಅಭಿಮಾನಿಗಳು ಮೃತಪಟ್ಟ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ.
ಹನಮಂತ ಮಜ್ಜುರಪ್ಪ ಹರಿಜನ (21), ಮುರಳಿ ನೀಲಪ್ಪ ನಡವಿನಮನಿ (20) ಹಾಗೂ ನವೀನ್ ಗಾಜಿ (19) ಮೃತ ಯುವಕರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬುವ ಮೂವರಿಗೆ ಗಂಭೀರ ಗಾಯಗಳಾಗಿವೆ.
ನೆಚ್ಚಿನ ನಟನ ಹುಟ್ಟುಹಬ್ಬವನ್ನು ಗ್ರಾಮದಲ್ಲಿ ಭರ್ಜರಿಯಾಗಿ ಆಚರಿಸಬೇಕೆಂದು ರವಿವಾರ ತಡರಾತ್ರಿ ಬ್ಯಾನರ್ ಕಟ್ಟುವ ವೇಳೆ ಈ ದುರ್ಘಟನೆ ನಡೆದಿದೆ. ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಘಟನೆಯಲ್ಲಿ ಗಾಯಗೊಂಡ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ. ಯುವಕರಿಗೆ ವಿದ್ಯುತ್ ತಗಲುತ್ತಿದ್ದಂತೆ ಕೂಗಾಟ ಚೀರಾಟ ಕೇಳಿ ಬಂದ ಘಟನೆಯ ಲೈವ್ ವಿಡಿಯೋ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲ್, ಕುಟುಂಬಸ್ಥರ ಭೇಟಿಯಾಗಿ ಸಾಂತ್ವನ ಹೇಳುತ್ತೇನೆ, ಘಟನೆ ಸಂಬಂಧ ಜಿಲ್ಲಾಧಿಕಾರಿ, ಎಸ್ಪಿಯಿಂದಲೇ ಮಾಹಿತಿ ಪಡೆದುಕೊಂಡಿದ್ದೇನೆ. ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ ಎಂದರು.
ಗದಗ ಎಸ್ಪಿ ಬಿ.ಎಸ್.ನೇಮಗೌಡ ಲಕ್ಷ್ಮೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಗಂಭೀರ ಗಾಯಗೊಂಡ ಮೂವರ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಒಂಬತ್ತು ಜನ ಕಟೌಟ್ ಕಟ್ಟುವಾಗ ಘಟನೆ ನಡೆದಿದೆ. ಎಲ್ಲರೂ ಅಭಿಮಾನಿಗಳೇ ಇದ್ರು. ಕಬ್ಬಿಣದ ಫ್ರೇಮ್ ಇರೋದ್ರಿಂದ ಮೇಲೆತ್ತುವಾಗ ವಿದ್ಯುತ್ ತಂತಿ ತಗುಲಿ ದುರಂತ ನಡೆದಿದೆ. ಮೂವರು ಯುವಕರು ಸಾವನ್ನಪ್ಪಿದ್ದಾರೆ. ಮೂವರಿಗೆ ಗಾಯವಾಗಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದರು.
ನಟ ಯಶ್ ಬರಬೇಕೆಂದು ಅಭಿಮಾನಿ ಪಟ್ಟು
ಇನ್ನು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮಕ್ಕೆ ನಟ ಯಶ್ ಬರಬೇಕೆಂದು ಮೃತ ಯುವಕರ ಸ್ನೇಹಿತ ಪಟ್ಟುಹಿಡಿದಿದ್ದಾನೆ. ಯಶ್ ನಮ್ಮೂರಿಗೆ ಬರಬೇಕು, ಬಂದು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಬೇಕು ಎಂದು ಪ್ರಕಾಶ ಮ್ಯಾಗೇರಿ ಒತ್ತಾಯಿಸಿದ್ದಾರೆ.
ಕೃಪೆ: ಈದಿನ.ಕಾಂ