ಮಂಡ್ಯದ ಕೆರಗೋಡು ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಪಾದಯಾತ್ರೆ ನಡೆಸುವ ಸಂದರ್ಭದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೇಸರಿ ಶಾಲು ಧರಿಸಬಾರದಿತ್ತು, ಅದರ ಬದಲು ನಮ್ಮ ಪಕ್ಷದ ಶಾಲು ಧರಿಸಬೇಕಿತ್ತು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿಕೆ ನೀಡಿದ್ದಾರೆ.
ಕೆರಗೋಡು ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ, ಜೆಡಿಎಸ್ ಜಂಟಿಯಾಗಿ ಹೋರಾಟ ಮಾಡಿದಾಗ ಕೇಸರಿ ಶಾಲು ಧರಿಸಿ ಸಿಎಂ ಕುಮಾರಸ್ವಾಮಿ ಭಾಗವಹಿಸಿದ್ದರು, ಇದಕ್ಕೆ ಸಂಬಂಧಿಸಿದಂತೆ ಪರ ವಿರೋಧ ಚರ್ಚೆಗಳು ನಡೆದಿದ್ದು, ಇದರ ಬೆನ್ನಲ್ಲೇ ದೊಡ್ಡಗೌಡರು ಕೇಸರಿ ಶಾಲು ಧರಿಸಬಾರದಿತ್ತು ಎನ್ನುವ ಮೂಲಕ ಬಿಜೆಪಿಯೊಂದಿಗೆ ಅತಿಯಾದ ಸಲುಗೆ ಬೇಡ ಎಂಬರ್ಥದ ಸೂಚನೆ ನೀಡಿದ್ಧಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಗೌಡರು,“ಕುಮಾರಸ್ವಾಮಿ ಕೇಸರಿ ಶಾಲು ಧರಿಸಬಾರದಿತ್ತು” ಕೇಸರಿ ಶಾಲು ಬದಲು ನಮ್ಮ ಪಕ್ಷದ ಶಾಲು ಧರಿಸಬಹುದಿತ್ತು. ಕೇಸರಿ ಶಾಲು ಹಾಕಿದ್ದನ್ನೇ ದೊಡ್ಡ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ” ಎಂದು ತಿಳಿಸಿದ್ದಾರೆ.
“ನಾವು ಇಬ್ಬರು ಸೇರಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆ. ಬಿಜೆಪಿ ಜೊತೆ ಹೋಗುವಾಗ ನಮ್ಮ ಶಾಲು ಹಾಕಿಕೊಂಡು ಹೋಗಬೇಕು. ನಾನಂತೂ ಖಂಡಿತವಾಗಿ ಕೇಸರಿ ಶಾಲು ಹಾಕುವುದಿಲ್ಲ” ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.




