ರಾಜ್ಯದ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ನೇರ ಪಾವತಿಗೆ ಹಾಗೂ ಪೌರ ಕಾರ್ಮಿಕರ ನೇಮಕಾತಿಗೆ ಆಗ್ರಹಿಸಿ ಫೆ. 15ರಂದು ಹೊರಗುತ್ತಿಗೆ ನೌಕರರು ಹಾಗೂ ಪೌರ ಕಾರ್ಮಿಕರ ನಡಿಗೆ ಮುಖ್ಯಮಂತ್ರಿಗಳ ಕಡೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರ ಮತ್ತು ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ. ನಾಗಣ್ಣಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ಧಿಗೋಷ್ಠಿ ಮಾತನಾಡಿದ ಅವರು, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೀರುಗಂಟಿಗಳು ಲೋಡರ್ಸ್ ಕ್ಲೀನರ್ಸ್, ಹೆಲ್ಪರ್ಸ್ ಯೂಜಿಡಿ ಕಾರ್ಮಿಕರು ಸೇರಿದಂತೆ ಎಲ್ಲ ಬಗೆಯ ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ಒಳಪಡಿಸುವಂತೆ ಹಾಗೂ ಪೌರ ಕಾರ್ಮಿಕರ ಬಾಕಿ ಹುದ್ದೆಗಳ ನೇಮಕಾತಿಗೆ ಆ. 13ರಿಂದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ನಗರ ಸ್ಥಳೀಯ ಸಂಸ್ಥೆಗಳ ಎಲ್ಲ ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ತರಲು ಬಜೆಟ್ನಲ್ಲಿ ಘೋಷಣೆ ಮಾಡಬೇಕು. ಪೌರಾಡಳಿತ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಅಗತ್ಯಕ್ಕನುಗುಣವಾಗಿ ಪೌರಚಾಲಕ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಆಗ್ರಹಿಸಿದರು.
ಸಂಕಷ್ಟ ಭತ್ಯೆಯನ್ನು ನೇರಪಾವತಿ ಹಾಗೂ ಗುತ್ತಿಗೆ ಪೌರಕಾರ್ಮಿಕರಿಗೂ ವಿಸ್ತರಿಸಬೇಕು. ಬಾಕಿ ಇರುವ ಪೌರಕಾರ್ಮಿಕ ಹುದ್ದೆಗಳ ಭರ್ತಿ ಸೇರಿದಂತೆ ನಾಲ್ಕು ಬೇಡಿಕೆಗಳನ್ನು ಬಜೆಟ್ನಲ್ಲಿ ಘೋಷಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ಹೇಳಿದರು.
ಮುಖಂಡರಾದ ನಾಗರಾಜು, ಎಂ. ಮಹದೇವು, ಎಂ. ಗಣೇಶ, ರಾಜೇಶ್ ಗೋಷ್ಠಿಯಲ್ಲಿದ್ದರು.