ಪ್ರೇಮಿಗಳ ದಿನದಂದು (ಫೆಬ್ರವರಿ 14) ಬೆಳಗಾವಿಯ ರಾಯಬಾಗದಲ್ಲಿ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಮೂವರು ಕಾಮುಕರು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತಡವಾಗಿ ಬೆಳಗಿಗೆ ಬಂದಿದೆ. ಪ್ರಕರಣದಲ್ಲಿ ರಾಯಬಾಗ ತಾಲೂಕಿನ ಹಾಲಪ್ಪ ಸುರೇಶ ಬಬಲೇಶ್ವರ, ಹಾಲಪ್ಪ ಗಿಡ್ಡವ್ವಗೋಳ ಮತ್ತು ಗೋಪಾಲ್ ಗಾಡಿವಡ್ಡರ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಾಯಬಾಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ, ದೇವಸ್ಥಾನಕ್ಕೆ ತೆರಳುತ್ತಿದ್ದ ಬಾಲಕಿಯರನ್ನು ಅವರಿಗೆ ಪರಿಚಯವಿದ್ದ ಆರೋಪಿಗಳು ಕಾರಿನಲ್ಲಿ ಹಿಂಬಾಲಿಸಿದ್ದಾರೆ. ದೇವಸ್ಥಾನದ ಬಳಿ ಆರೋಪಿಗಳು ಬಾಲಕಿಯರನ್ನು ಕಾರಿನಲ್ಲಿ ಕೂರಿಸಿಕೊಂಡು ಮುಗಳಖೋಡ ಗ್ರಾಮದ ತೋಟಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ.
ಘಟನೆಯ ಬಗ್ಗೆ ಪೊಲೀಸರಿಗೆ ಅಥವಾ ಪೋಷಕರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ಸಂತ್ರಸ್ತೆಯರನ್ನು ದೇವಸ್ಥಾನದ ಬಳಿ ಬಿಟ್ಟು ಹೋಗಿದ್ದಾರೆ. ಸಂತ್ರಸ್ತೆಯರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡ ರಾಯಬಾಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.