Friday, November 20, 2026

ಪ್ರಾಯೋಗಿಕ ಆವೃತ್ತಿ

ಭಾರತ್ ಬ್ರಾಂಡ್ ಅಕ್ಕಿ ಮಾರಾಟ; ಬಿಜೆಪಿಯ ಚುನಾವಣಾ ಗಿಮಿಕ್: ರಮೇಶ್ ಟೀಕೆ

ಬಿಜೆಪಿಯವರು ಸಾರ್ವಜನಿಕರಿಗೆ 29 ರೂ.ಗೆ ಭಾರತ್ ಬ್ರಾಂಡ್ ಅಕ್ಕಿ ಮಾರಾಟ ಮಾಡುತ್ತಿರುವುದು  ಲೋಕಸಭೆ ಚುನಾವಣೆಯ ಗಿಮಿಕ್ ಎಂದು ಮಂಡ್ಯ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್ ಟೀಕಿಸಿದ್ದಾರೆ.

ರಾಜ್ಯ ಸರ್ಕಾರ ಬಡ ಕುಟುಂಬಗಳಿಗೆ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಮಾಡಿದರೂ ರಾಜ್ಯಕ್ಕೆ ಅಕ್ಕಿ ನೀಡದೇ ದ್ರೋಹ ಬಗೆದ ಬಿಜೆಪಿಗರು ಇದೀಗ ಉಗ್ರಾಣದಲ್ಲಿ ದಾಸ್ತಾನು ಮಾಡಿದ ಪಡಿತರ ಕಾರ್ಡಿನ ಅಕ್ಕಿಯನ್ನೇ ಪಾಲಿಸ್ ಮಾಡಿಸಿ ರಸ್ತೆಬದಿಗಳಲ್ಲಿ 1 ಕೆ.ಜಿ ಅಕ್ಕಿಗೆ 29ರೂ.ಗಳಂತೆ ಮಾರಾಟ ಮಾಡಲು ಮುಂದಾಗಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈವರೆಗೆ ರಾಮನ ಜಪ ಮಾಡಿದ ಬಿಜೆಪಿ ನಾಯಕರು ಇದೀಗ ಭಾರತ್ ಅಕ್ಕಿ ಮಾರಾಟದ ಮೂಲಕ ರಾಜ್ಯದ ಜನತೆಯನ್ನು ಮರಳು ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಹಸಿವಿನಿಂದ ಬಳಲುತ್ತಿರುವ ಬಡತನ ರೇಖೆಯ ಕುಟುಂಬಗಳಿಗೆ ಉಚಿತವಾಗಿ ನ್ಯಾಯಬೆಲೆ ಅಂಗಡಿ ಮೂಲಕ ಅಕ್ಕಿ ವಿತರಣೆ ಮಾಡುತ್ತಿದ್ದರೆ ಬಿಜೆಪಿಯವರು ಪುಕ್ಕಟೆ ಪ್ರಚಾರಕ್ಕಾಗಿ ಜನಸಂದಣಿ ಇರುವೆಡೆ ಹಾಗೂ ರಸ್ತೆ ಬದಿಗಳಲ್ಲಿ 10ಕೆ.ಜಿ ಅಕ್ಕಿಯ ಕೆಲವೇ ಬ್ಯಾಗ್ ಗಳನ್ನು 290ರೂ.ಗಳನ್ನು (ಕೆ.ಜಿ.ಗೆ 29ರೂ.) ಪಡೆದು ಮಾರಾಟ ಮಾಡುತ್ತಿರುವುದು ಯಾವ ಅಕ್ಕಿ, ಇವರು ತಮ್ಮ ಜಮೀನಿನಲ್ಲಿ ಬೆಳೆದಿದ್ದಾರೆಯೇ ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರು ಇಲ್ಲಿಯವರೆಗೆ ರಾಜ್ಯದಲ್ಲಿ ಎಷ್ಟು ಟನ್ ಅಕ್ಕಿ ಮಾರಾಟ ಮಾಡಿದ್ದಾರೆ, ಎಷ್ಟು ಕುಟುಂಬಗಳು ಖರೀದಿ ಮಾಡಿವೆ ಎಂಬುದನ್ನು ಜನತೆಗೆ ತಿಳಿಸಲಿ ಎಂದು ಆಗ್ರಹಿಸಿದ್ದಾರೆ.

ರಾಜ್ಯ ಮತದಾರರು ಬಿಜೆಪಿ ನಾಯಕರ ಯಾವುದೇ ಪ್ರಚಾರಕ್ಕೆ ಮರಳಾಗುವುದಿಲ್ಲ ಎಂಬುದಕ್ಕೆ ರಾಜ್ಯದಲ್ಲಿ ಜರುಗಿದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪುಟ್ಟಣ್ಣ ಬಹುಮತದಿಂದ ಗೆಲುವು ಸಾಧಿಸಿರುವುದೇ ಸಾಕ್ಷಿ. ಈ ಮತದಾರರು ಪ್ರಜ್ಞಾವಂತ ಮತದಾರರು. ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಈ ಚುನಾವಣೆ ಎಚ್ಚರಿಕೆ ನೀಡಿದೆ. ಆ ಮೂಲಕ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮತದಾರರು ಇದ್ದಾರೆ ಎಂದ ಸಂದೇಶ ಸಾರಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಇನ್ನು ಮುಂದಾದರೂ ಗಿಮಿಕ್ ರಾಜಕೀಯ ನಿಲ್ಲಿಸಲಿ ಎಂದು ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ