Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ: ಲಕ್ಷಾಂತರ ಭಕ್ತರ ಉದ್ಘೋಷದ ನಡುವೆ ಪಟ್ಟಲದಮ್ಮ ಸಿಡಿಹಬ್ಬಕ್ಕೆ ತೆರೆ

ಲಕ್ಷಾಂತರ ಭಕ್ತರ ಉದ್ಘೋಷದ ನಡುವೆ ಸಿಡಿರಣ್ಣನನ್ನು ಮಳವಳ್ಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎಳೆದು ಪಟ್ಟಲದಮ್ಮ ದೇವಸ್ಥಾನದಲ್ಲಿ ಅಂತಿಮಗೊಳಿಸಿದ ನಂತರ, ಪೂಜಾರಿ ಕೊಂಡ ಹಾಯುವುದರ ಮೂಲಕ ಐತಿಹಾಸಿಕ ಪಟ್ಟಲದಮ್ಮ ಸಿಡಿ ಹಬ್ಬಕ್ಕೆ ತೆರೆ ಬಿದ್ದಿದಂತಾಗಿದೆ.

ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಕೋಟೆ ಪಟೇಲ್ ಚಿಣ್ಣೇಗೌಡರ ಮನೆಯ ಮುಂದೆ ಸಿಡಿಯನ್ನು ಕಟ್ಟಲು ಸರ್ವ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಗಂಗಾಮತಸ್ಥರ ಬೀದಿಯ ಪಟ್ಟಲದಮ್ಮ ದೇವಸ್ಥಾನದಿಂದ ತಂದಿದ್ದ ಸಿಡಿರಣ್ಣನ ಗೊಂಬೆಯನ್ನು ಸಿಡಿ ಮರಕ್ಕೆ ಕಟ್ಟಲಾಯಿತು. ಮಧ್ಯರಾತ್ರಿ 12 ಗಂಟೆಯ ಸಮಯದಲ್ಲಿ ಸಿಡಿರಣ್ಣನಿಗೆ ಪೂಜೆ ಸಲ್ಲಿಸಿ ಸಿಡಿ ಎಳೆಯುವುದಕ್ಕೆ ಚಾಲನೆ ನೀಡಲಾಯಿತು. ಯುವಕರ ತಂಡ ಸಿಡಿಬಂಡಿಯನ್ನು ಸಾರಂಗ ಪಾಣಿ ಬೀದಿ, ಕೋಟೆ ಬೀದಿ, ಮೈಸೂರು ರಸ್ತೆ, ಪೇಟೆ ಬೀದಿ, ಗಂಗಾಮತ ಬೀದಿಯ ಕುಪ್ಪಸ್ವಾಮಿ ವೃತ್ತಕ್ಕೆ ಬಂದು ಸುಲ್ತಾನ್ ರಸ್ತೆಯ ಮಾರ್ಗವಾಗಿ ಪಟ್ಟಲದಮ್ಮ ದೇವಸ್ಥಾನದ ಆವರಣಕ್ಕೆ ಆಗಮಿಸಿದಾಗ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪೂಜೆ ಸಲ್ಲಿಸಿದರು.

ಮೂರು ಸುತ್ತು ಸುತ್ತಿದ ಸಿಡಿರಣ್ಣನಿಗೆ ನವ ದಂಪತಿಗಳು ಸೇರಿದಂತೆ ಸಾವಿರಾರು ಮಂದಿ ಹಣ್ಣು ಜವನ ಎಸೆದು ಭಕ್ತಿ ಭಾವ ಮೆರೆದರು. ಶಾಸಕ ಪಿ.ಎಂ ನರೇಂದ್ರಸ್ವಾಮಿ ಪಟ್ಟಲದಮ್ಮನ ಹಾಗೂ ವಳಗೆರೆ ಹುಚ್ಚಮ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸಿಡಿ ಅಂತಿಮ ಗೊಳ್ಳುತ್ತಿದ್ದಂತೆ ಗಂಗಾಮತ ಬೀದಿಯ ಅಡ್ಡೆನಿಂಗಯ್ಯನ ಕೇರಿಯ ರಘು ಕೊಂಡಕ್ಕೆ ಪೂಜೆ ಸಲ್ಲಿಸಿ ಕೊಂಡವನ್ನು ಹಾಯ್ದರು, ನಂತರ ಹಕರೆ ಹೊತ್ತ ಸುಮಾರು 50ಕ್ಕೂ ಹೆಚ್ಚು ಮಂದಿ ಸರದಿ ಸಾಲಿನಲ್ಲಿ ತೆರಳಿ ಕೊಂಡ ಹಾಯುವ ಮೂಲಕ ಹರಕೆ ತೀರಿಸಿದರು.

ಸಿಡಿಹಬ್ಬದ ಕೇಂದ್ರಬಿಂದುವಾದ ಘಟ್ಟ ಮೆರವಣಿಗೆಯೂ ಮೊದಲಿಗೆ ಒಕ್ಕಲಗೇರಿಯಿಂದ ಆರಂಭವಾಯಿತು. ಮೆರವಣಿಗೆಯಲ್ಲಿ ಸಾವಿರಾರು ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ಪಟ್ಟಲದಮ್ಮನ ದೇವಸ್ಥಾನದತ್ತ ತೆರಳಿದರು. ನಂತರ ಸಿದ್ದಾರ್ಥ ನಗರ, ಕೀರ್ತಿ ನಗರ, ಗಂಗಾಮತಸ್ಥರ ಬೀದಿ, ಅಶೋಕನಗರ, ಬಸವಲಿಂಗಪ್ಪನಗರದ ಮಹಿಳೆಯರು ಮೆರವಣಿಗೆ ಮೂಲಕ ಘಟ್ಟದೊಂದಿಗೆ ತೆರಳಿ ಪಟ್ಟಲದಮ್ಮನಿಗೆ ಪೂಜೆ ಸಲ್ಲಿಸಿದರು.

ಘಟ್ಟಕ್ಕೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪೂಜೆ ಸಲ್ಲಿಸಿದರು. ಘಟ್ಟ ಮೆರವಣಿಗೆಯಲ್ಲಿ ಐಜಿಪಿ ನಂಜುಂಡಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್,ತಹಶೀಲ್ದಾರ್ ಲೋಕೇಶ್ ಶಾಸಕರ ಜೊತೆಗೆ ಹೆಜ್ಜೆ ಹಾಕಿದರು. ತಮಟೆ ತಾಳಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ಹಬ್ಬದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಇ.ಸಿ.ತಿಮ್ಮಯ್ಯ ಹಾಗೂ ಡಿವೈಎಸ್ಪಿ ವಿ.ಕೃಷ್ಣಪ್ಪ ಮಾರ್ಗದರ್ಶನ ದಲ್ಲಿ ಪಿ. ಐ ರವಿಕುಮಾರ್ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.

ಜಾತ್ಯಾತೀತೆಯ ಹಾಗೂ ಭಾವೈಕ್ಯತೆಯ ಸಂಕೇತವಾಗಿ ಆಚರಿಸುವ ಪಟ್ಟಲದಮ್ಮ ಸಿಡಿಹಬ್ಬವನ್ನು ನೋಡಲು ರಾಜ್ಯದ ವಿವಿಧ ಭಾಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಹಬ್ಬದ ಮೆರುಗು ಹೆಚ್ಚಿಸಿದರು.ಹಬ್ಬದ ಭಾಗವಾಗಿ ನಡೆದ ವಿವಿಧ ಮನರಂಜನಾ ಕಾರ್ಯ ಕ್ರಮಗಳು, ಧ್ವನಿವರ್ಧಕ ಶಬ್ಧಕ್ಕೆ ಹೆಜ್ಜೆ ಹಾಕಿದ ಯುವ ಸಮೂಹ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ