ಮಂಡ್ಯ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಅಸಂಘಟಿತ ಕಾರ್ಮಿಕರನ್ನು ಸಂಘಟಿತರನ್ನಾಗಿ ಮಾಡಿ ಮುಖ್ಯವಾಹಿನಿಗೆ ತರಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆದ ಮೈಷುಗರ್ ನೂತನ ಅಧ್ಯಕ್ಷ ಸಿ.ಟಿ.ಗಂಗಾಧರ್ ತಿಳಿಸಿದರು.
ಮಂಡ್ಯನಗರದ ಕರ್ನಾಟಕ ಭವನದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಘಟಕದ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಸಂವಿಧಾನವು ಸಮಾಜವಾದಿಯಾಗಿದೆ, ಅಂದರೆ ಕಾರ್ಮಿಕರು, ರೈತರು, ತುಳಿತಕ್ಕೊಳಗಾದವರ ಪರವಾಗಿದೆ. ಇಲ್ಲಿ ಬಂಡವಾಳಶಾಹಿಗಳಿಗೆ ಹೆಚ್ಚಿನ ಅವಕಾಶವಿಲ್ಲವಾಗಿದೆ. ಸಂವಿಧಾನವೇ ತಮ್ಮ ಹಿತ ಬಯಸುವಾಗ ಎಲ್ಲಡೆ ಅಸಂಘಟಿತ ಕಾರ್ಮಿಕ ಸಮುದಾಯಗಳು ಸಂಘಟಿತಗೊಂಡು ಸಂವಿಧಾನದ ಆಶಯವನ್ನು ಈಡೇರಿಸಬೇಕಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ಅರ್ಹರಲ್ಲದವರು ಕಾರ್ಮಿಕರ ಕಾರ್ಡ್ ಹಾಗೂ ಬಿಪಿಎಲ್ ಪಡಿತರ ಚೀಟಿಗಳನ್ನು ಮಾಡಿಸಿಕೊಂಡು, ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ಧಾರೆ, ಅಂತಹವರು ಕೂಡಲೇ ಕಾರ್ಡ್ ಗಳನ್ನು ವಾಪಸ್ ನೀಡಬೇಕೆಂದು ಸರ್ಕಾರ ಎಚ್ಚರಿಕೆ ನೀಡಿದೆ. ನಿಜವಾಗಿ ಯಾರು ಕಾರ್ಮಿಕರಾಗಿರುತ್ತಾರೋ ಅಂತಹವರಿಗೆ ಕಾರ್ಡ್ ಗಳು ದೊರೆಯುವಂತೆ ನಾವು ನೋಡಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಸುಂಡಹಳ್ಳಿ ಮಂಜುನಾಥ್ ಸೇರಿದಂತೆ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.




