ಮದ್ದೂರಿನ ತಮಿಳು ಕಾಲೋನಿಯ 2.17 ಎಕರೆ ಜಾಗದ ಬಗ್ಗೆ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಿ, ಅಲ್ಲಿನ ಶ್ರಮಿಕ ನಿವಾಸಿಗಳಿಗೆ ಜಾಗ ಹಸ್ತಾಂತರಿಸಲು ವಿಫಲವಾಗಿರುವ ಮಂಡ್ಯ ಜಿಲ್ಲಾಡಳಿತದ ವೈಫಲ್ಯತೆ ಖಂಡಿಸಿ ಕರ್ನಾಟಕ ಜನಶಕ್ತಿ ಹಾಗೂ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯು ಮಾ.10ರಂದು ಮದ್ದೂರಿನಿಂದ ಮಂಡ್ಯದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಅಂದು ಮಂಡ್ಯಕ್ಕೆ ಆಗಮಿಸುವ ಸಿಎಂ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರರ್ದಶನ ಮಾಡಲು ನಿರ್ಧಾರ ಕೈಗೊಂಡಿದೆ.
ಮಂಡ್ಯ ಜಿಲ್ಲಾಡಳಿತದ ಶ್ರಮಿಕರಿಗೆ ಕೊಟ್ಟ ಮಾತಿನಂತೆ ಇಂದು, ನಾಳೆಯೊಳಗೆ 2.17 ಎಕರೆ ಆರ್ಟಿಸಿ ಇಂಡೀಕರಿಸಿ ಸಮಸ್ಯೆ ಬಗೆಹರಿಸಬೇಕು ಹಾಗೂ ಮಂಡ್ಯದ ಕಾಳಿಕಾಂಭ ಶ್ರಮಿಕ ನಗರದ ಸಮಸ್ಯೆಗೆ ಪರಿಹಾರ ಕಂಡು ಹಿಡಿದು ಬೇಗನೆ ಇತ್ಯರ್ಥಪಡಿಸಿ, ಅಲ್ಲಿನ ನಿವಾಸಿಗಳಿಗೆ ಮನೆಗಳನ್ನು ದೊರೆಕಿಸಿಕೊಡಬೇಕು ಇಲ್ಲವಾದರೆ ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಮುಖಂಡ ಸಿದ್ದರಾಜು ನುಡಿಕರ್ನಾಟಕ.ಕಾಂ ಗೆ ತಿಳಿಸಿದ್ಧಾರೆ.

ಮದ್ದೂರು ಪಟ್ಟಣದ ಕೆಇಬಿ ಮುಂಭಾಗದಲ್ಲಿ ಇರುವ ತಮಿಳು ಕಾಲೋನಿಯಲ್ಲಿ ನಾಲ್ಕು ತಲೆಮಾರುಗಳಿಂದ ವಾಸ ಮಾಡುವ 114 ಶ್ರಮಿಕ ಕುಟುಂಬಗಳು, ಮೂಟೆ ಹೊರುವ, ಬಣ್ಣ ಹೊಡೆಯುವ, ಸ್ವಚ್ಚ ಮಾಡುವ ಮುಂತಾದ ಶ್ರಮದ ಕೆಲಸ ಮಾಡುತ್ತಾ ಬಂದಿರುವ ಈ ಶ್ರಮಿಕ ಜನಗಳು ಒಂದು ಎಕರೆಗಿಂತಲೂ ಕಡಿಮೆ ಜಾಗದಲ್ಲಿ ವಾಸ ಮಾಡುತಿದ್ದಾರೆ, ಈ ಜಾಗಕ್ಕೆ ಸಂಬಂಧಿಸಿದಂತೆ ಮದ್ದೂರು ವಕ್ಟ್ ಮಂಡಳಿ ಮತ್ತು ಕಮಲ ನೆಹರು ಶಾಲೆ ಹಾಗೂ ಶ್ರಮಿಕ ನಿವಾಸಿಗಳ ನಡುವೆ ವಿವಾದದ್ದು ಹೈಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿದೆ. ನಾವು ಕೂಡ ಕಾನೂನು ಹೋರಾಟ ಮಾಡುತಿದ್ದೇವೆ ಎಂದು ಸಿದ್ದರಾಜು ತಿಳಿಸಿದ್ದಾರೆ.

ಕಳೆದ ಕೆಲವು ವರುಷಗಳಿಂದ ಕರ್ನಾಟಕ ಜನಶಕ್ತಿ ಮತ್ತು ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ವತಿಯಿಂದ ನಡೆಸಿದ ಹೋರಾಟದ ಕಾರಣ, ಶ್ರಮಿಕರು ಮಾಡುತ್ತಿರುವ ಜಾಗ ವಿವಾದದಲ್ಲಿ ಇರುವುದನ್ನು ತಿಳಿದು ಮಂಡ್ಯ ಜಿಲ್ಲಾಡಳಿತ ಮದ್ದೂರು ಪಟ್ಟಣ ವ್ಯಾಪ್ತಿಯಲ್ಲಿ ಜಾಗ ಕೊಡಲು ಒಪ್ಪಿ, ಜಾಗ ಗುರುತಿಸಿ ತೋರಿಸಿತು, ನಾವು ಈ ಜಾಗದಲ್ಲಿ 114 ಕುಟುಂಬಗಳಿಗೆ ವಿಭಾಗ ಮಾಡಿ, ರಸ್ತೆ, ಚರಂಡಿ, ಅಂಗನವಾಡಿ ಇತ್ಯಾದಿ ಮೂಲಸೌಕರ್ಯಗಳ ಜೊತೆಗೆ ಮನೆ ಕಟ್ಟಿಕೊಟ್ಟು ಗುರುತಿಸಿರುವ ಕುಟುಂಬಗಳಿಗೆ ಹಕ್ಕುಪತ್ರ ಕೊಟ್ಟ ನಂತರ ಈಗ ಇರುವ ಜಾಗ ಬಿಟ್ಟು ಹೊಸ ಜಾಗಕ್ಕೆ ಹೋಗುತ್ತೇವೆ ಎಂಬ ನಮ್ಮ ಮಾತಿಗೆ ಒಪ್ಪಿದ ಜಿಲ್ಲಾಡಳಿತ ಜಾಗ ಗುರುತಿಸಿ, ನಮಗೆ ಜಾಗವನ್ನು ತೋರಿಸಿತು, ಈಗ ಜಾಗ ನೋಡಿ, ಒಪ್ಪಿದ ಮೇಲೆ ಡಿಸಿ, ಎಡಿಸಿ, ಎಸಿರವರುಗಳು 2.17 ಎ.ಗುಂ ಜಾಗವನ್ನು ಇಂಡೀಕರಿಸಿ ಆದೇಶ ಹೊರಡಿಸಿದರು. ಆದರೆ ಮದ್ದೂರು ತಹಸೀಲ್ದಾರ್ ರವರು 1.17 ಎಕರೆ ಮಾತ್ರ ಆರ್ಟಿಸಿ ಇಂಡಿಕರಣವಾಗಿದೆ ಉಳಿದ ಒಂದು ಎಕರೆ ಜಾಗದ ಬಗ್ಗೆ ಗೊತ್ತಿಲ್ಲ ಎಂದು ಹೇಳುತ್ತಿರುವುದು, ನಮಗೆ ಬೇಸರ ತರಿಸಿದೆ. ಆದ್ದರಿಂದ ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆಂದು ತಿಳಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಹಲವು ಶ್ರಮಿಕ ನಗರಗಳ ಹಲವಾರು ಸಮಸ್ಯೆಗಳ ದೊಡ್ಡ ಪಟ್ಟಿಯೇ ಇದೆ. ಕಾಳಿಕಾಂಭ ಶ್ರಮಿಕ ನಗರದಲ್ಲಿ ವಾಸ ಮಾಡುತ್ತಿರುವ ಜನರಿಗೆ ಜಾಗ ಮಂಜೂರು ಮಾಡಿ ಮನೆ ಕಟ್ಟಿಕೊಡಬೇಕೆಂದು ಹೈ ಕೋರ್ಟ್ ಆದೇಶ ಆಗಿದ್ದರು, ಸ್ಲಂ ಬೋರ್ಡ್ ಮತ್ತು ಮಂಡ್ಯ ಜಿಲ್ಲಾಡಳಿತದ ವೈಫಲ್ಯದಿಂದ ಇದು ಇನ್ನೂ ಜಾರಿಯಾಗದೆ ಜನ ಸಂಕಷ್ಟ ಎದುರಿಸುವಂತಾಗಿದೆ ಎಂದು ಅವರು ದೂರಿದ್ದಾರೆ.




