ಮಂಡ್ಯ ತಾಲ್ಲೂಕು ಚೀರನಹಳ್ಳಿ ಗ್ರಾಮದಲ್ಲಿ ಸುಮಾರು 800 ವರ್ಷಗಳ ಇತಿಹಾಸವುಳ್ಳ ಶ್ರೀ ಬೀರೇಶ್ವರ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶವಿಲ್ಲ, ದೇವರ ಮೆರವಣಿಗೆ ಪೂಜಾ ಕುಣಿತದಲ್ಲಿ ದಲಿತರು ಭಾಗವಹಿಸುವಂತಿಲ್ಲ ಎಂಬಂತಹ ಅಸ್ಪೃಶ್ಯತೆ ಆಚರಣೆಗೆ ಜೀವಂತವಾಗಿದೆ ಎಂದು ನುಡಿಕರ್ನಾಟಕ.ಕಾಂ ಇಂದು ಬೆಳಿಗ್ಗೆ ಪ್ರಸಾರ ಮಾಡಿದ್ದ ವರದಿಯಿಂದ ಎಚ್ಚೆತ್ತ ಮಂಡ್ಯ ತಾಲ್ಲೂಕು ಆಡಳಿತವು, ಇಂದು ಮಧ್ಯಾಹ್ನವೇ (ಮಾ.9) ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ.
ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರಾದರ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡ ಸ್ಥಳಕ್ಕೆ ಭೇಟಿ ನೀಡಿ ಸಾರ್ವನಿಕರಿಂದ ಮಾಹಿತಿ ಸಂಗ್ರಹಿಸಿತು. ಈ ಸಂದರ್ಭದಲ್ಲಿ ದೇವಸ್ಥಾನ ಮುಂಭಾಗ ‘ಎಲ್ಲ ಜಾತಿ, ಜನಾಂಗದ ಜನರಿಗೆ ಮುಕ್ತ ಪ್ರವೇಶವಿದೆ’ ಎಂಬ ಬರಹವುಳ್ಳ ಬೋರ್ಡ ಅನ್ನು ಅಳವಡಿಸಲಾಗಿತ್ತು ಎಂದು ತಿಳಿದು ಬಂದಿದೆ. ಇಷ್ಟು ದಿನ ಯಾವ ಕಾರಣಕ್ಕೆ ಬೋರ್ಡ್ ತೆಗೆದಿರಿಸಲಾಗಿತ್ತು ಎಂದು ತಹಶೀಲ್ದಾರ್ ಪ್ರಶ್ನಿಸಿದಾಗ, ದೇವಸ್ಥಾನಕ್ಕೆ ಬಣ್ಣ ಮಾಡಿಸುತ್ತಿದ್ದರಿಂದ ಬೋರ್ಡ್ ತೆಗೆದಿದ್ದೇವು ಎಂದು ಅರ್ಚಕರು ಸ್ಪಷ್ಟನೆ ನೀಡಿದರೆನ್ನಲಾಗಿದೆ.
ದಲಿತರಿಗೆ ನ್ಯಾಯ ಸಿಗಲಿದೆ
ಗ್ರಾಮದಲ್ಲೇ ಮುಖಂಡರ ಮೇಲೆ ನಂಬಿಕೆ ಇದೆ, ನಾಳೇ ಗ್ರಾಮದಲ್ಲಿ ನಡೆಯುವ ಸಭೆಯಲ್ಲಿ ದಲಿತರ ಹಕ್ಕುಗಳಿಗೆ ಸಂಬಂಧಿಸಿದಂತೆ ನ್ಯಾಯ ಸಿಗಲಿದೆ… ಗ್ರಾಮದಲ್ಲಿ ಪ್ರಜ್ಞಾವಂತರು ಇದ್ದಾರೆ ಎಂದು ಭಾವಿಸಿದ್ದೇನೆ..ನಮಗೆ ದ್ವೇಷ ಇಲ್ಲ, ಸಮಸ್ಯೆ ಇಲ್ಲೇ ಬಗೆಹರಿದು ಸೌಹಾರ್ದತೆ ನಿರ್ಮಾಣವಾಗುತ್ತದೆ ಎಂಬ ಅತೀವ ನಂಬಿಕೆಯಿದೆ ಎಂದು ವಕೀಲ ಲಕ್ಷ್ಮಣ್ ಚೀರನಹಳ್ಳಿ ತಿಳಿಸಿದ್ದಾರೆ.
ತಹಶೀಲ್ದಾರ್ ಎಚ್ಚರಿಕೆ
ದೇವಸ್ಥಾನಕ್ಕೆ ಎಲ್ಲ ಜಾತಿ, ಜನಾಂಗದವರಿಗೆ ಮುಕ್ತ ಅವಕಾಶ ನೀಡಬೇಕು, ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು, ಇದಕ್ಕೆ ಪ್ರತಿಕ್ರಿಯಿಸಿದ ಅರ್ಚಕ, ಊರಿನ ಮುಖಂಡರೇ ಕುಳಿತು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ ಎಂದರು, ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಸೂಚಿಸಿದರೆಂದು ತಿಳಿದು ಬಂದಿದೆ.




