ಸಂಸದೆ ಸುಮಲತಾ ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿಯಾಗಿ ಸುಮಲತಾ ಅವರು ಸ್ಪರ್ಧಿಸುವ ಅವಕಾಶ ಇನ್ನೂ ಇದೆ. ಇಂದು ಕೂಡ ದೊಡ್ಡ ನಾಯಕರೊಬ್ಬರನ್ನು ಸುಮಲತಾ ಅಂಬರೀಶ್ ಭೇಟಿಯಾಗುತ್ತಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರವಾಗಿಯಾದರೂ ಸುಮಲತಾ ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.
ಜಿ.ಡಿ ದೇವೇಗೌಡರ ಹೇಳಿಕೆಗೆ ಖಂಡನೆ
ಅಂಬರೀಶ್ ಅವರ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ತಂದಿದ್ದೇ 2019ರ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ಕುಮಾರಸ್ವಾಮಿ ಸೋಲಿಗೆ ಕಾರಣವೆಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಜಿ.ಟಿ.ದೇವೇಗೌಡರು ನೀಡಿರುವ ಹೇಳಿಕೆ ಖಂಡನೀಯ ಎಂದರು.
ಮಂಡ್ಯದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅಂಬರೀಶ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕೆಂದು ಕಾರ್ಯಕರ್ತರೇ ಕೂಗಿ ಹೋಗುತ್ತಿದ್ದರೂ ಅದನ್ನು ಲೆಕ್ಕಿಸದೆ ಜಿ.ಟಿ.ದೇವೇಗೌಡರು ಉದ್ದೇಶಪೂರ್ವಕವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದರು.
ಸಂಸದೆ ಸುಮಲತಾ ಅಂಬರೀಶ್ ಅವರು ಪ್ರಬುದ್ಧ ರಾಜಕಾರಣಿಯಾಗಿ ಹೊರಹೊಮ್ಮುತ್ತಿರುವುದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ. ಅಂಬಿ ದೇಹವನ್ನು ಮಂಡ್ಯಗೆ ತೆಗೆದುಕೊಂಡು ಹೋಗಬಾರದೆಂದು ಸುಮಲತಾ ತಡೆದಿದ್ದರೆಂಬ ಆರೋಪ ಸತ್ಯಕ್ಕೆ ದೂರವಾದುದು. ಪತಿಯ ಸಾವಿನ ದುಃಖದಲ್ಲಿ ಸುಮಲತಾ ಅಂಬರೀಶ್ ಏನನ್ನೂ ಮಾತನಾಡಿಲ್ಲ. ಆದರೆ, ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮಂಡ್ಯಗೆ ತೆಗೆದುಕೊಂಡು ಹೋಗಲೇಬೇಕೆಂದು ಆಗಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರ ಮೇಲೆ ಒತ್ತಡ ಹಾಕಿದ್ದೇ ಅಭಿಷೇಕ್ ಅಂಬರೀಶ್ ಎಂದು ಹೇಳಿದರು.
ಕಾರ್ಯಕರ್ತರ ಸಭೆಯಲ್ಲಿ ಒಂದೆಡೆ ಎಚ್ಡಿಕೆ ಅವರು ಸುಮಲತಾ ಅವರನ್ನು ತಮ್ಮ ಅಕ್ಕ ಎಂದರೆ, ನಿಖಿಲ್ಕುಮಾರಸ್ವಾಮಿ ಅವರು ಸ್ವಾಭಿಮಾನದ ಬಗ್ಗೆ ಅಪಸವ್ಯವಾಗಿ ಮಾತನಾಡಿದ್ದಾರೆ. ವಿಷಯಾಧಾರಿತವಾಗಿ ಚುನಾವಣೆ ನಡೆಸಲಿ. ಆಗ ಮಾತ್ರ ನಾವು ಮೈತ್ರಿ ಧರ್ಮ ಪಾಲಿಸುತ್ತೇವೆ. ಇಲ್ಲದಿದ್ದರೆ ಈ ಬಾರಿಯೂ 2019ರ ಫಲಿತಾಂಶವೇ ಮರುಕಳಿಸಲಿದೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಅಂಬರೀಶ್ ಅಭಿಮಾನಿಗಳಾದ ಶ್ರೀನಿವಾಸ್, ದಾಸಣ್ಣ, ಚನ್ನೇಗೌಡ, ಸುರೇಶ್ ಹಾಜರಿದ್ದರು.




