ಪ್ರಸ್ತುತ ಹಲವರು ತಮ್ಮ ಜನ್ಮದಿನವನ್ನು ಸಾಕಷ್ಟು ಹಣ ಖರ್ಚು ಮಾಡಿ ಅದ್ದೂರಿಯಾಗಿ ಆಚರಿಸಿಕೊಳ್ಳುವವರ ಮಧ್ಯೆ ಸಾಹಿತಿ, ಶಿಕ್ಷಕ ಡಾ.ಬಿ.ಸಿ.ವಿಜಯ್ ಕುಮಾರ್ ಬಲ್ಲೇನಹಳ್ಳಿ ಅವರು ಅನಾಥಶ್ರಮದ ಮಕ್ಕಳ ಜೊತೆ ಆಚರಣೆ ಮಾಡಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಮೈಸೂರಿನ ವಿ.ವಿ.ಪುರಂ ಪೊಲೀಸ್ ಠಾಣೆಯ ವೃತ್ತ ಆರಕ್ಷಕ ನಿರೀಕ್ಷಕ ವಿವೇಕಾನಂದ ನುಡಿದರು.
ಮೈಸೂರಿನ ಸವಿನೆನಪು ಫೌಂಡೇಶನ್ ಆವರಣದಲ್ಲಿ ಪ್ರಗತಿ ಸೇವಾ ಟ್ರಸ್ಟ್ (ರಿ) ಪಾಂಡವಪುರ ಹಾಗೂ ಸವಿ ನೆನಪು ಫೌಂಡೇಷನ್ ಮೈಸೂರು ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಶಿಕ್ಷಕ, ಸಾಹಿತಿ ಡಾ.ಬಿ.ಸಿ ವಿಜಯಕುಮಾರ್ ಬಲ್ಲೇನಹಳ್ಳಿ ಅವರ ಹುಟ್ಟು ಹಬ್ಬ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ಹಲವರು ಜನ್ಮದಿನದ ಆಚರಣೆಯ ನೆಪದಲ್ಲಿ ಮೋಜು- ಮಸ್ತಿಯಲ್ಲಿ ತೊಡಗಿಕೊಂಡಿದ್ದಾರೆ.ಇನ್ನು ಕೆಲವರು ರಸ್ತೆ ಮಧ್ಯದಲ್ಲಿ ಕೇಕ್ ಕತ್ತರಿಸಿಕೊಂಡು ಪಟಾಕಿ ಸಿಡಿಸಿ ವಿಚಿತ್ರವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ.ಇಂತಹ ದಿನಮಾನದಲ್ಲಿ ಅನಾಥ ಮಕ್ಕಳ ಆಶ್ರಮದಲ್ಲಿ ಮಕ್ಕಳೊಂದಿಗೆ ಬೆರತು ಮಕ್ಕಳೊಂದಿಗೆ ಆಟವಾಡಿ, ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವುದು ವಿಶೇಷವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ರಾಗಿಮುದ್ದನಹಳ್ಳಿ ನಾಗೇಶ್, ಇಂತಹ ಮೌಲ್ಯಯುತ ಮಾದರಿಗಳು ಸಮಾಜಕ್ಕೆ ಅಗತ್ಯ.ಇದರಿಂದ ಉತ್ತಮ ಸಂದೇಶವನ್ನು ಸಮಾಜಕ್ಕೆ ಸಾರಿದಂತಾಗುತ್ತದೆ ಎಂದರು.
ದೇಶಕ್ಕೆ ಸತ್ಪ್ರಜೆಗಳ ಅವಶ್ಯಕತೆ ಇದೆ. ಇಲ್ಲಿನ ಮಕ್ಕಳು ಮುಂದೆ ಉತ್ತಮ ಹುದ್ದೆಗಳನ್ನು ಅಲಂಕರಿಸಿ ಈ ಆಶ್ರಮವನ್ನು ಪೋಷಣೆ ಮಾಡುತ್ತಿರುವ ಮಾನಸರವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಂಜುಳಾ, ಆಡಳಿತ ಕ್ಷೇತ್ರದಲ್ಲಿ ಕೃಷ್ಣ, ಸಮಾಜ ಸೇವಾ ಕ್ಷೇತ್ರದಲ್ಲಿ ಪುಷ್ಪಾವತಿ, ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಎಂ. ಸಿ. ದೀಪು ಹಾಗೂ ಎಂ. ಸಿ. ಸುದೀಪ್ ರವರಿಗೆ ಸಾಧನಾ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ನೇಗಿಲಯೋಗಿ ಸಮಾಜದ ಸಂಸ್ಥಾಪಕ ರವಿಕುಮಾರ್, ರಾಜ್ಯ ಆರ್ಟಿಓ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ವಿಶ್ರಾಂತ ಪ್ರಾಧ್ಯಾಪಕ ವೆಂಕಟೇಶ್, ಮಾನಸ, ವಿನಯ್ ಗೌಡ ಹಾಗೂ ಎಮ್.ಎಚ್. ವಿಜಯ್ ಕುಮಾರ್ ಮಲ್ಲಿಗೆರೆ ಸೇರಿದಂತೆ ಹಲವರು ಭಾಗಿಯಾಗಿದ್ದರು.




