Friday, November 20, 2026

ಪ್ರಾಯೋಗಿಕ ಆವೃತ್ತಿ

ಮಕ್ಕಳು- ಕುಟುಂಬಕ್ಕಾಗಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ: ಚಲುವರಾಯಸ್ವಾಮಿ

ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗರಿಗೆ ಕಾಂಗ್ರೆಸ್ ಎಂಟು ಸೀಟುಗಳನ್ನು ಕೊಟ್ಟಿದೆ. ಕಾಂಗ್ರೆಸ್ ಪಕ್ಷದಲ್ಲಿ ಒಕ್ಕಲಿಗರು, ಹಿಂದುಳಿದವರ್ಗ ಸೇರಿದಂತೆ ಎಲ್ಲಾ ವರ್ಗದವರಿಗೆ ಭವಿಷ್ಯವಿದೆ. ಕಾಂಗ್ರೆಸ್ ಪಕ್ಷ ಜಾತ್ಯತೀತ. ಆದರೆ ಜೆಡಿಎಸ್ ಪಕ್ಷವು ಮಕ್ಕಳು, ಕುಟುಂಬಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದರು.

ನಾಗಮಂಗಲದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಅತ್ಯಂತ ಪ್ರಮುಖ. ನೀವು ಒಂದು ತಿಂಗಳು ಕಷ್ಟಪಟ್ಟರೆ ನಾಲ್ಕು ವರ್ಷ ಕ್ಷೇತ್ರ, ಜಿಲ್ಲೆಯ ಅಭಿವೃದ್ಧಿಗೆ ದುಡಿದು ಜನರ ಋಣ ತೀರಿಸಲಾಗುವುದು ಎಂದರು.

ಎಂಟು ತಿಂಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಾವು ಮಾಡಿದಷ್ಟು ಅಭಿವೃದ್ಧಿ ಕಾರ್ಯವನ್ನು ಈ ಹಿಂದಿನವರು ಐದು ವರ್ಷದಲ್ಲಿ ಮಾಡಲಿಲ್ಲ. ಮೋದಿ ಗ್ಯಾರಂಟಿ ಯಾವುದು ಗೊತ್ತಿಲ್ಲ. ಆದರೆ ಕರ್ನಾಟಕದ ಗ್ಯಾರಂಟಿ ಮನೆಮನೆಗೆ ತಲುಪಿದೆ ಎಂದು ತಿಳಿಸಿದರು.

ಒಳ್ಳೆ ಕೆಲಸ ಮಾಡೊದಷ್ಟೇ ನಮ್ಮ ಉದ್ದೇಶ

ಸುದ್ದಿಯಲ್ಲಿ ಇರಲು ಕೆಲವರು ಮಾತನಾಡ್ತಾರೆ. ನಾವು ಯಾರನ್ನೂ ಟೀಕೆ ಮಾಡಿಲ್ಲ, ಮಾಡೋದಿಲ್ಲ. ಒಳ್ಳೆ ಕೆಲಸ ಮಾಡೊದಷ್ಟೇ ನಮ್ಮ ಉದ್ದೇಶ. ಕಾಂಗ್ರೆಸ್ ನಲ್ಲಿ ಒಮ್ಮತದಿಂದ ಅಭ್ಯರ್ಥಿ ಆಯ್ಕೆ ಮಾಡಲಾಗಿದ್ದು ಅವರನ್ನು ಗೆಲ್ಲಿಸುವುದೇ ನಮ್ಮ ಗುರಿ ಎಂದರು.

ಇದೇ (ನಾಗಮಂಗಲ) ತಾಲೂಕಿನವರನ್ನು ಲೋಕಸಭೆಗೆ ಕಳುಹಿಸುವ ಅವಕಾಶ ನಿಮ್ಮ ಕೈಲಿದೆ. ತಾಲೂಕಿನ ಗೌರವ, ಸ್ವಾಭಿಮಾನ ಉಳಿಸಿ. ಜನರ ಕೈಗೆ ಸಿಗುವವರು ನಾವು. ವೆಂಕಟರಮಣೇಗೌಡ ಜನರ ಮಧ್ಯೆ ಇದ್ದು ಜನಸೇವೆ ಮಾಡ್ತಾರೆ, ಉದ್ಯಮಿಯಾಗಿ ಯಶಸ್ವಿಯಾಗಿರುವ. ಸ್ಟಾರ್ ಚಂದ್ರು ಜನ ಸೇವೆ ಮಾಡಲೆಂದು ಬಂದಿದ್ದಾರೆ ಎಂದು ಹೇಳಿದರು.

ನಿಜವಾದ ಮಣ್ಣಿನ ಮಕ್ಕಳ ಗೆಲುವಾಗಬೇಕು

ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಮಾತನಾಡಿ, ಈ ಚುನಾವಣೆಯಲ್ಲಿ ನಿಜವಾದ ಮಣ್ಣಿನ ಮಕ್ಕಳ ಗೆಲುವಾಗಬೇಕು. ನಾವೆಲ್ಲ ಉತ್ತು ಬಿತ್ತಿದ್ದೇವೆ. ಸುಗ್ಗಿ ಮಾಡಿದ್ದೀವೆ. ಆದರೆ ಏನೂ ಮಾಡದವರು ಮಣ್ಣಿನ ಮಕ್ಕಳು ಹೇಗಾಗುತ್ತಾರೆ ಎಂದು ಪ್ರಶ್ನಿಸಿದರು.

ಗ್ಯಾರಂಟಿಗಳಿಂದ ನಾಡಿನ ಜನರ ಬದುಕು ಹಸನಾಗಿದೆ. ನಾವು ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ವೋಟ್ ಕೇಳ್ತಿದ್ದೇವೆ ಹೊರತು ನಾಟಕ ಮಾಡಿಕೊಂಡು ಬರ್ತಿಲ್ಲ. ಬದಲಾವಣೆಯತ್ತ ಮಂಡ್ಯ ತಿರುಗಿದೆ ಎಂದು ಹೇಳಿದರು.

ರೈತ ಕುಟುಂಬದಿಂದ ಬಂದವನು

ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಾತನಾಡಿ, ನಾನು ಇದೇ ಜಿಲ್ಲೆಯವನು. ರೈತ ಕುಟುಂಬದಿಂದ ಬಂದವನು. ಎಲ್ಲಾ‌ ನಾಯಕರು ನನ್ನನ್ನು ಒಮ್ಮತದಿಂದ ಆಯ್ಕೆ ಮಾಡಿದ್ದು ಚುನಾವಣೆಯಲ್ಲಿ ನಿಮ್ಮ ಬೆಂಬಲ ಬೇಕು ಎಂದು ಮನವಿ ಮಾಡಿದರು.

ಬಡವರಿಗೆ ಉಪಯುಕ್ತ

ಮಾಜಿ ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ತಿಂಗಳಿಗೆ 4-5 ಸಾವಿರ ತಲುಪುತ್ತಿದೆ. ಬರಗಾಲದ ಈ ಸಮಯದಲ್ಲಿ ಬಡವರಿಗೆ ಉಪಯುಕ್ತವಾಗಿದೆ ಎಂದು ಹೇಳಿದರು.

ಜನತೆಯ ಆರ್ಥಿಕ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಕೊಡುಗೆ ನೀಡಿದೆ. ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್ ಸರ್ಕಾರ. ಮಂಡ್ಯ ಜಿಲ್ಲೆಯ ಜನತೆ ಸ್ವಾಭಿಮಾನಿಗಳು. ದೇಶದ ಗಮನ ಸೆಳೆಯುವ ಲೋಕಸಭಾ ಕ್ಷೇತ್ರದಲ್ಲಿ ಮಂಡ್ಯ ಕೂಡ ಒಂದು. ಬಿಜೆಪಿ ಅವರು ಕಾರ್ಯಕ್ರಮ ಹೇಳಲ್ಲ. ಮೋದಿ ಮುಖ ನೋಡಿ ವೋಟ್ ಕೇಳ್ತಾರೆ. ಆದರೆ ಕಾಂಗ್ರೆಸ್ ನವರು ಕಾರ್ಯಕ್ರಮಗಳನ್ನು ಹೇಳಿ ವೋಟ್ ಕೇಳ್ತಾರೆ ಎಂದರು.

ವೈಮನಸ್ಸು ಮರೆತು ಚಂದ್ರು ಗೆಲ್ಲಿಸಿ

ಅಪ್ಪಾಜಿಗೌಡ ಮಾತನಾಡಿ, ಜೆಡಿಎಸ್ ನವರು ಚುನಾವಣೆ ಗೆದ್ದಾಗ ಅದರ ಕ್ರೆಡಿಟ್ ಅವರಿಗೆ, ಸೋತಾಗ ನಮ್ಮ ತಲೆ ಮೇಲೆ ಹಾಕ್ತಾರೆ. ಸ್ಥಳೀಯ ಪ್ರತಿಷ್ಠೆಗಳಿಂದ ಸಾಕಷ್ಟು ಸೋಲಾಗಿದೆ. ಭಿನ್ನಾಭಿಪ್ರಾಯ, ವೈಮನಸ್ಸು ಮರೆತು ಚಂದ್ರು ಅವರನ್ನು ಗೆಲ್ಲಿಸಬೇಕು ಎಲ್ಲ ಕರೆಕೊಟ್ಟರು.

ಮಾಜಿ‌ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿದರು. ಸಭೆಯಲ್ಲಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅಂಜನಾ ಶ್ರೀಕಾಂತ್
ಮಂಡ್ಯ ಜಿಲ್ಲಾ ಕಾರ್ಯದ್ಯಕ್ಷ ಚಿದಂಬರಂ,ಹುಚ್ಚೇಗೌಡ, ವಸಂತಮಣಿ, ಹೆಚ್.ಡಿ.ಕೃಷ್ಣೇಗೌಡ, ಶಿವಣ್ಣ, ಪ್ರಸನ್ನ, ಮಹಮ್ಮದ್ ಯಾಸೀನ್, ಸುನೀಲ್ ಸೇರಿದಂತೆ ತಾಲೂಕಿನ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ