ರೈತರ, ಕಾರ್ಮಿಕರ, ದಲಿತರ ವಿರೋಧಿಯಾದ ಎನ್.ಡಿ.ಎ ಮೈತ್ರಿಕೂಟ ಅಧಿಕಾರಕ್ಕೆ ಬರುವುದನ್ನು ತಡೆಯಲು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳನ್ನು ಸೋಲಿಸಿ- ರೈತ ಸಮುದಾಯವನ್ನು ಉಳಿಸಿ ಎಂಬ ಘೋಷಣೆಯಡಿ ರಾಜ್ಯಾದ್ಯಂತ ಪ್ರಚಾರ ನಡೆಸಲು ಕರ್ನಾಟಕ ರಾಜ್ಯ ರೈತಸಂಘವು ಸರ್ವಾನುಮತದಿಂದ ತೀರ್ಮಾನ ಕೈಗೊಂಡಿದೆ.
ಈ ಕುರಿತು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ರೈತಸಂಘದ ನಿಲುವನ್ನು ಸ್ಪಷ್ಟಪಡಿಸಿದ ಕರ್ನಾಟಕ ರಾಜ್ಯ ರೈತಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು, ರೈತ ವಿರೋಧಿ ಎನ್ ಡಿ ಎ ಒಕ್ಕೂಟವು ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಲು ರೈತಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಕೃಷಿ ಕ್ಷೇತ್ರವನ್ನೇ ಕಾರ್ಪೋರೇಟ್ ವಲಯದ ಮಾಡಿದ ಮೋದಿ
10 ವರ್ಷದ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಆಡಳಿತದಲ್ಲಿ ರೈತ ಸಮುದಾಯವನ್ನು ನಿರ್ಲಕ್ಷ್ಯ ಮಾಡಿ ಇಡೀ ಕೃಷಿ ಕ್ಷೇತ್ರವನ್ನೇ ಕಾರ್ಪೋರೇಟ್ ವಲಯಕ್ಕೆ ಒಪ್ಪಿಸುವಂತಹ ಕೆಟ್ಟ ನೀತಿಗಳು ರೂಪುವುಗೊಂಡಿವೆ. ಮತ್ತೆ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ ಡಿ ಎ ಒಕ್ಕೂಟ ಅಧಿಕಾರಕ್ಕೆ ಮರಳಿದಲ್ಲಿ ರೈತ ಕುಲ ಸಂಪೂರ್ಣ ನಾಶವಾಗುತ್ತದೆ. ಕಳೆದ ಮಾ.14ರಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆದ ಬೃಹತ್ -ರೈತ-ಕಾರ್ಮಿಕ ಮಹಾಪಂಚಾಯತ್ ನಲ್ಲಿ ಎನ್ ಡಿ ಎ ಯನ್ನು ಅಧಿಕಾರದಿಂದ ಕಿತ್ತೊಗೆಯಲು ದೇಶದ ರೈತರು ನಿರ್ಣಯ ಕೈಗೊಂಡಿದ್ದಾರೆ. ಈ ತೀರ್ಮಾನವನ್ನು ರಾಜ್ಯ ರೈತಸಂಘ ಮಂಡ್ಯ ಲೋಕಸಭಾ ಕ್ಷೇತ್ರದ ಪ್ರತಿ ಹಳ್ಳಿಗೂ, ಪ್ರತಿ ಕುಟುಂಬಕ್ಕೂ ತಲುಪಿಸಿ ಎನ್ ಡಿ ಎ ವಿರುದ್ಧ ಮತ ಚಲಾಯಿಸಲು ರೈತ ಸಮುದಾಯಕ್ಕೆ ಕರೆ ನೀಡುತ್ತದೆ ಎಂದರು.
ಜಾತ್ಯಾತೀತ ಜನತಾದಳವು ರೈತಪರವಲ್ಲ
ಎನ್ ಡಿ ಎ ಒಕ್ಕೂಟದಲ್ಲಿರುವ ಜಾತ್ಯಾತೀತ ಜನತಾದಳವೂ ಕೂಡ ರೈತಪರ ಪಕ್ಷವಾಗಿ ಉಳಿದಿಲ್ಲ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರೈತ ಸಮುದಾಯಕ್ಕೆ ಮರಣ ಶಾಸನವಾದ ಭೂ ಸುಧಾರಣೆ ತಿದ್ದುಪಡಿ ಕಾಯಿದೆಗೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯಿದೆಗೆ ಬೆಂಬಲ ವ್ಯಕ್ತಪಡಿಸಿ ತನ್ನ ರೈತ ವಿರೋಧಿ ನೀತಿಯನ್ನು ಬಹಿರಂಗವಾಗಿ ಪ್ರದರ್ಶಿಸಿದೆ. ಮಣ್ಣಿನ ಮಗ ಎಂದು ಹೇಳಿಕೊಳ್ಳುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಾಗಲಿ ಮಣ್ಣಿನ ಮೊಮ್ಮಗನಾದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಗಲಿ ಅಥವಾ ಅವರ ಪಕ್ಷ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ದೆಹಲಿ ಸುತ್ತಮುತ್ತ ನಡೆದ ರೈತ ಆಂದೋಲನವನ್ನು ಬೆಂಬಲಿಸಲಿಲ್ಲ ಎಂದು ದೂರಿದರು.
ಮಂಡ್ಯದಲ್ಲಿ ಕಬ್ಬಿನ ಬೆಲೆಗಾಗಿ ಒತ್ತಾಯಿಸಿ ನೂರು ದಿನಗಳಿಗಿಂತಲೂ ಹೆಚ್ಚು ದಿನಗಳ ಕಾಲ ರೈತರು ಅಹೋ ರಾತ್ರಿ ಧರಣಿ ನಡೆಸಿದ ಸಂದರ್ಭದಲ್ಲೂ ಜಿಲ್ಲೆಯಲ್ಲಿದ್ದ 7 ಶಾಸಕರ ಪೈಕಿ ಎಂ.ಶ್ರೀನಿವಾಸ್ ಹೊರತು ಪಡಿಸಿ ಮಿಕ್ಕವರಾರೂ ಸೌಜನ್ಯಕ್ಕಾದರೂ ಒಂದು ದಿನವೂ ಬಂದು ಬೆಂಬಲಿಸಿಲ್ಲ. ಜೆಡಿಎಸ್ ರೈತರ ಪಕ್ಷವೂ ಅಲ್ಲ ಜ್ಯಾತ್ಯಾತೀತ ಪಕ್ಷವೂ ಅಲ್ಲ. 2023ರಲ್ಲಿ ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ರೈತ ಸಂಘಟನೆಗಳು-ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ ಯುವ ಜನ, ವಿದ್ಯಾರ್ಥಿ ಮತ್ತು ಪ್ರಗತಿ ಪರ ಸಂಘಟನೆಗಳು ಪರಸ್ಪರ ಸಮನ್ವಯತೆಯಿಂದ ಮಾಡಿದ ಸಂಘಟನಾತ್ಮಕ ಪ್ರಯತ್ನದ ಪರಿಣಾಮವೂ ಕೂಡ ಬಿಜೆಪಿಯನ್ನು ವಿಧಾನಸೌಧದಿಂದ ತೊಲಗಿಸಲು ಕಾರಣವಾಗಿದೆ. ಈ ಲೋಕಸಭಾ ಚುನಾವಣೆಯಲ್ಲಿಯೂ ಈ ಪ್ರಯತ್ನವನ್ನು ಮತ್ತಷ್ಟು ವಿಸ್ತಾರದ ನೆಲೆಯಲ್ಲಿ ಮಾಡಲಾಗುವುದು ಎಂದರು.
1 ಲಕ್ಷದ 474 ಜನ ರೈತರು ಆತ್ಮಹತ್ಯೆ
10 ವರ್ಷದ ಮೋದಿ ಆಡಳಿತ ರೈತ-ಕಾರ್ಮಿಕ ಮತ್ತು ಜನ ಸಾಮಾನ್ಯರ ನೆಮ್ಮದಿಗೆ ಭಂಗ ತಂದಿದೆ. ಮತ್ತೆ ಇವರು ಅಧಿಕಾರಕ್ಕೆ ಏರಿದರೆ ದುಡಿಯುವ ವರ್ಗದ ಬದುಕು ಶಾಶ್ವತವಾಗಿ ನಾಶವಾಗುತ್ತದೆ. ನರೇಂದ್ರ ಮೋದಿಯವರ 10 ವರ್ಷದ ಆಡಳಿತದಲ್ಲಿ 1ಲಕ್ಷದ 474 ಜನ ರೈತರು ಆತ್ಮಹತ್ಯೆಗೆ ಒಳಗಾಗಿದ್ದಾರೆ. ಎಂಎಸ್ಪಿ ಹಿಂದೆಯೂ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ ಎಂದು ನರೇಂದ್ರ ಮೋದಿ ರವರು ಹೇಳುತ್ತಿದ್ದಾರೆ. ಆದರೆ 2014 ರ ಚುನಾವಣೆಯಲ್ಲಿ ಬಿಜೆಪಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಸ್ವಾಮಿನಾಥನ್ ವರದಿ ಅನ್ವಯ( ಸಿ2+50%) ಕೃಷಿ ಉತ್ಪನ್ನಗಳಿಗೆ ಎಂಎಸ್ ಪಿ ನೀಡುವುದಾಗಿ ಹೇಳಿತ್ತು. ಚುನಾವಣಾ ಪ್ರಚಾರದ ನೂರಾರು ಸಭೆಗಳಲ್ಲಿ ಇದನ್ನು ನರೇಂದ್ರ ಮೋದಿಯವರು ಪದೇ ಪದೇ ಹೇಳಿ ರೈತ ಸಮುದಾಯದ ಓಟು ಪಡೆದು ಅಧಿಕಾರಕ್ಕೆ ಏರಿದ ನಂತರ ಸ್ವಾಮಿನಾಥನ್ ವರದಿಯನ್ವಯ ಎಂಎಸ್ಪಿಯನ್ನು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಕೋರ್ಟ್ ಮುಂದೆ ಪ್ರಮಾಣ ಪತ್ರ ಸಲ್ಲಿಸಿ ರೈತರಿಗೆ ಮೋಸ ಮಾಡಿದ್ದಾರೆ ಎಂದು ದೂರಿದರು.
ಮಾತಿಗೆ ತಪ್ಪಿದ ಮೋದಿ ಸರ್ಕಾರದ ನೀತಿಯನ್ನು ವಿರೋಧಿಸಿ 2020ರಿಂದ 2021ರ ನವೆಂಬರ್ ವರೆಗೆ ದೆಹಲಿ ಸುತ್ತಾಮುತ್ತಾ ನಡೆದ ರೈತ ಆಂದೋಲನವನ್ನು ಹಿಮ್ಮೆಟ್ಟಿಸಲು ಮಾಡಬಾರದ ಕೆಲಸಗಳನ್ನು ಮಾಡಿ ಕೊನೆಗೆ ಚಳವಳಿಗೆ ಮಣಿದು ರೈತ ಸಮುದಾಯದ ಮುಂದೆ ಕ್ಷಮೆಯನ್ನು ಕೋರಿದ ಮೋದಿಯವರು, ರೈತ ವಿರೋಧಿ 3 ಕಾಯಿದೆಗಳನ್ನು ವಾಪಸ್ ಪಡೆದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರಿಗೆ ನೀಡಿದ ಲಿಖಿತ ಭರವಸೆಯನ್ನು ಈಡೇರಿಸದೆ ರೈತರಿಗೆ ದ್ರೋಹವೆಸಗಿದ್ದಾರೆ. ಈ ದ್ರೋಹದ ವಿರುದ್ಧ ಸಿಡಿದೆದ್ದ ರೈತರು ದೆಹಲಿಗೆ ಪ್ರತಿಭಟನೆಗೆ ಮತ್ತೆ ಹೋಗಲು ಮುಂದಾದಾಗ ಅದನ್ನು ಹಿಮ್ಮೆಟ್ಟಿಸಲು ಪ್ರಜಾಪ್ರಭುತ್ವ ವಿರೋಧಿ ನೀತಿಗಳನ್ನು ಅನುಸರಿಸಿದ್ದಾರೆ. ಮೊದಲು ನಡೆದ ಚಳವಳಿಯಲ್ಲಿ 750 ರೈತರು ಅಸುನೀಗಿದ್ದಾರೆ. ಈಗ ನಡೆಯುತ್ತಿರುವ ಚಳವಳಿಯಲ್ಲಿ 10 ಸಾವಿಗೀಡಾಗಿದ್ದಾರೆ, ಇದರ ಹೊಣೆಯನ್ನು ಮೋದಿ ಸರ್ಕಾರವೇ ಹೊರಬೇಕು ಎಂದು ಹೇಳಿದರು.
ವಿದ್ಯುತ್ ಚ್ಛಕ್ತಿ ತಿದ್ದುಪಡಿ ಕಾಯಿದೆಯನ್ನು ರೈತರ ಮುಖಂಡರ ಒಪ್ಪಿಗೆ ಇಲ್ಲದೆ ಸಂಸತ್ ನಲ್ಲಿ ಮಂಡಿಸುವುದಿಲ್ಲ ಎಂದು ಲಿಖಿತ ಭರವಸೆ ನೀಡಿತ ಮೋದಿ ಸರ್ಕಾರ ಸಂಸತ್ ನಲ್ಲಿ ಮಂಡಿಸಿ ಮಾತಿಗೆ ತಪ್ಪಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್ ಬೆಲೆ ದುಬಾರಿ ಮಾಡಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಿದ್ದಾರೆ. ಸಂವಿಧಾನ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿದ್ದಾರೆ. ಒಂದೇ ದೇಶ- ಒಂದೇ ಚುನಾವಣೆ, ಒಂದೇ ದೇಶ-ಒಂದೇ ನೊಂದಣಿ ಕೋಮುವಾದಿ ದೃವೀಕರಣ ಮುಂತಾದ ಸಂವಿಧಾನ ವಿರೋಧಿ ನೀತಿಗಳಿಗೆ ಒತ್ತು ಕೊಟ್ಟು ವೈವಿಧ್ಯಮಯದಿಂದ ಕೂಡಿದ ಏಕತೆಯ ಉದ್ದೇಶಕ್ಕೆ ಭಂಗತರುತ್ತಿದ್ದಾರೆ. ಇವುಗಳಲ್ಲದೆ ಇನ್ನು ಹತ್ತಾರು ಜನ ವಿರೋಧಿ ನೀತಿಗಳಿಂದ ಅಸಮಾನತೆ ಸೃಷ್ಠಿಯಾಗಿದೆ. ಮೋದಿ ಆಡಳಿತದ ದುರಾಳಿತದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ, ದಲಿತ, ಕಾರ್ಮಿಕ ಇತರೆ ಪ್ರಗತಿ ಪರ ಸಂಘಟನೆಗಳೊಡಗೂಡಿ ಎನ್ ಡಿ ಎ ವಿರುದ್ಧ ಮತ ಚಲಾಯಿಸಲು ಮತದಾರರದಲ್ಲಿ ಜಾಗೃತಿ ಮೂಡಿಸಲು ನಿರ್ಣಯ ಕೈಗೊಂಡಿದ್ದೇವೆ ಎಂದರು.
ಗೋಷ್ಠಿಯಲ್ಲಿ ರೈತಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ತಗ್ಗಹಳ್ಳಿ ಪ್ರಸನ್ನ, ಪ್ರಶಾಂತ್, ಲಿಂಗಪ್ಪಾಜಿ, ನಾಗರಾಜು, ಹೊಸೂರು ಕುಮಾರ್, ಎಸ್.ಬಿ.ಶೇಖರ್, ರಂಗೇಗೌಡ ಹಾಗೂ ಮಲ್ಲೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




