Saturday, November 21, 2026

ಪ್ರಾಯೋಗಿಕ ಆವೃತ್ತಿ

ನಾಲೆಗಳಿಗೆ ನೀರು ಹರಿಸಿ; ಇಲ್ಲವೇ ರಾಜೀನಾಮೆ ನೀಡಿ: ರವೀಂದ್ರ ಶ್ರೀಕಂಠಯ್ಯ ಒತ್ತಾಯ

ಕನ್ನಂಬಾಡಿ ಅಣೆಕಟ್ಟೆಯಲ್ಲಿ ಸಾಕಷ್ಟು ನೀರು ಲಭ್ಯವಿದ್ದರೂ ನಾಲೆಗಳಿಗೆ ನೀರು ಹರಿಸದ ಹಿನ್ನೆಲೆಯಲ್ಲಿ ಜನ-ಜಾನುವಾರುಗಳು ನರಕಯಾತನೆ ಅನುಭವಿಸುವಂತಾಗಿದೆ. ಕೃಷಿ ಚಟುವಟಿಕೆ ನಾಶವಾಗಿದ್ದು, ಜಿಲ್ಲೆಯ ಹಿತ ಕಾಯದ ನೀವು ಕೃಷಿ ಸಚಿವರಾಗಿರಲು ಅನರ್ಹರು, ಕೂಡಲೇ ರಾಜೀನಾಮೆ ನೀಡಿ, ಅಧಿಕಾರದಿಂದ ಕೆಳಗಿಳಿಯಿರಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಮಾಜಿ ಶಾಸಕ ಎ.ಎಸ್. ರವೀಂದ್ರ ಶ್ರೀಕಂಠಯ್ಯ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಸಿಲ ಬೇಗೆ ತಾರಕಕ್ಕೇರಿದೆ, ಕೆರೆ-ಕಟ್ಟೆಗಳು ಬರಿದಾಗಿವೆ, ಕಳೆದ ಎರಡೂವರೆ ತಿಂಗಳಿಂದ ನಾಲೆಗಳಿಗೆ ನೀರು ಹರಿಸದೆ, ನಾಲ್ಕಾರು ವರ್ಷಗಳಿಂದ ಬೆಳೆದಿರುವ ತೆಂಗು, ಅಡಿಕೆ ಸೇರಿದಂತೆ ಹಲವು ತೋಟಗಾರಿಕೆ ಬೆಳೆಗಳು ಒಣಗುತ್ತಿವೆ, ಕಬ್ಬಿನ ಫಸಲು ಒಣಗಿ ನಿಂತಿದೆ. ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ರೈತರು ಆತ್ಮಹತ್ಯೆಯ ದಾರಿ ಹಿಡಿಯಬೇಕಾಗುತ್ತದೆ, ಇದು ತಮಗೆ ಅರಿವಿಲ್ಲವೇ ಎಂದು ಪ್ರಶ್ನಿಸಿದರು.

ಕೆ.ಆರ್.ಎಸ್.ನಲ್ಲಿ ಪ್ರಸ್ತುತ 86.05 ಅಡಿ ಅಂದರೆ 13.09 ಟಿಎಂಸಿಗೂ ಹೆಚ್ಚು ನೀರು ಬಳಕೆಗೆ ಲಭ್ಯವಿದ್ದು, ವಿ.ಸಿ.ನಾಲೆ, ವಿರಿಜಾ, ಮಾಧವಮಂತ್ರಿ ಸೇರಿದಂತೆ ಇತರೆ ನಾಲೆಗಳಿಗೆ ನೀರು ಹರಿಸಿದರೆ ಕೇವಲ ಒಂದೂವರೆ ಟಿಎಂಸಿಯಷ್ಟು ನೀರು ಸಾಕು. 74 ಅಡಿ ಸಾಮರ್ಥ್ಯದ ನೀರಿದ್ದರೆ ಕೃಷಿ ಚಟುವಟಿಕೆಗೆ ಬಳಸಬಹುದು ಎಂಬ ಕಾನೂನು ಇದೆ. ನೀರನ್ನು ಇಟ್ಟುಕೊಂಡಿರುವುದಾದರೂ ಏಕೆ? ತಮಿಳುನಾಡಿನವರು ನೀರು ಕೇಳಿದರೆ ಬಿಡಲೇ ಎಂದು ವ್ಯಂಗ್ಯವಾಡಿದರು.

ಬೆಳೆದು ನಿಂತಿರುವ ಬೆಳೆ ಹಾಗೂ ಜಾನುವಾರುಗಳಿಗೆ ಕುಡಿಯಲು ಅಗತ್ಯಕ್ಕೆ ಕೇವಲ 5 ದಿನವಾದರೂ ನಾಲೆಗಳಿಗೆ ನೀರು ಹರಿಸಿ ಕೆರೆ-ಕಟ್ಟೆ ತುಂಬಿಸುವ ಮೂಲಕ ಜನ-ಜಾನುವಾರುಗಳನ್ನು ರಕ್ಷಿಸಬೇಕು. ಕೃಷಿ ನಂತರದಲ್ಲಿ ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಜಿಲ್ಲೆಯ ರೈತರು ನೀರಿಲ್ಲದ ಕಾರಣ ಮೇವು ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಹೈನುಗಾರಿಕೆ ಮೇಲೆ ತೀವ್ರ ಹೊಡೆತ ಬಿದ್ದಿದೆ. ನೀವು ಜಾನುವಾರುಗಳನ್ನು ಸಾಕಿದ್ದರೆ, ಅದರ ಕಷ್ಟ ಏನೆಂದು ಗೊತ್ತಾಗುತ್ತಿತ್ತು. ನಿಮಗೆ ಇದಾವುದರ ಅರಿವಿಲ್ಲದ ಕಾರಣ ನೀರು ಹರಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ನೈತಿಕತೆ ಇಲ್ಲ

ಇಂಡಿಯಾ ಒಕ್ಕೂಟದ ಮಿತ್ರ ಪಕ್ಷವಾಗಿರುವ ಡಿಎಂಕೆ ಮೇಕೆದಾಟು ಯೋಜನೆ ಮಾಡಲು ಬಿಡುವುದಿಲ್ಲ ಎಂದು ಪ್ರಣಾಳಿಕೆ ಹೊರಡಿಸಿದ್ದರೂ ನೀವು ತುಟಿ ಬಿಚ್ಚುತ್ತಿಲ್ಲ. ನಾಲೆಗಳಿಗೆ ನೀರು ಬಿಡದ ನೀವು ಯಾವ ಮುಖ ಹೊತ್ತುಕೊಂಡು ಹಳ್ಳಿಗಳಿಗೆ ತೆರಳಿ ಮತ ಕೇಳುತ್ತೀರಿ? ತಾವು ಮಾಡಿರುವ ತಪ್ಪಿನ ಅರಿವಾದರೆ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಜನರ ಬಳಿಗೆ ಹೋಗಿ ಮತ ಕೇಳಿ ಎಂದು ಆಗ್ರಹಿಸಿದರು.

ಬೆಂಗಾಡಾದ ಕನ್ನಂಬಾಡಿ ಬಯಲು

ತಮಗೆ ಸಿಕ್ಕಿರುವ ಕೃಷಿ ಖಾತೆಯ ಹುದ್ದೆಯನ್ನು ಸಮರ್ಪಕವಾಗಿ ನಿಭಾಯಿಸಲು ಬಾರದ ನೀವು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಟೀಕೆ ಮಾತನಾಡುತ್ತೀರಾ? ಜಿಲ್ಲೆಯ ಅಭಿವೃದ್ಧಿ ಬಗ್ಗೆ ಯೋಚಿಸದೆ ಪ್ರತಿ ದಿನ ಕೇವಲ ರಾಜಕೀಯವನ್ನೇ ಮಾಡುತ್ತೀರಾ? ಮತ ನೀಡಿರುವ ಜನತೆಯನ್ನು ಕಂಡರೆ ನಿಮಗೆ ಭಯವಿಲ್ಲವೇ? ಸ್ವಾರ್ಥವಿಲ್ಲದ ಜಿಲ್ಲೆ ಮಂಡ್ಯ. ಕೃಷಿ ಪ್ರಧಾನ ಜಿಲ್ಲೆ ಮಂಡ್ಯದವರು ಕೃಷಿ ಸಚಿವರಾಗಿದ್ದಾರೆ ಎಂದರೆ ಒಂದು ಕಾಲದಲ್ಲಿ ಹೆಮ್ಮೆ ಇತ್ತು. ಆದರೆ, ನೀವು ನೀರು ಕೊಡದೆ ಹಸಿರು ಜಿಲ್ಲೆಯನ್ನು ಬೆಂಗಾಡಾಗಿ ಪರಿವರ್ತಿಸಿದ್ದೀರಿ? ಇದಕ್ಕೆ ನೀವು ಕೃಷಿ ಸಚಿವರಾಗಿರಬೇಕೇ? ಮಂಡ್ಯ ಜಿಲ್ಲೆಯ ರೈತರ ಹಿತ ಕಾಯದೆ, ತಮಿಳುನಾಡಿನವರ ಹಿತ ಕಾಯಲು ಹೊರಟಿರುವ ನೀವು ಕೃಷಿ ಸಚಿವ ಸ್ಥಾನದಲ್ಲಿರಬಾರದು ಎಂದು ಛೇಡಿಸಿದರು.

ಸಾಧನೆ ಏನು?

ಕೃಷಿ ಸಚಿವರಾಗಿ ಮಂಡ್ಯ ಜಿಲ್ಲೆಗೆ ಬಹಳ ಅನ್ಯಾಯ ಮಾಡಿ, ಬರ ಪರಿಸ್ಥಿತಿ ತಂದೊಡ್ಡಿದ್ದೀರಿ. ಚುನಾವಣೆ ಹಿನ್ನೆಲೆಯಲ್ಲಿ ಸಭೆ ಮೇಲೆ ಸಭೆ ಮಾಡುತ್ತಿರುವ ನೀವು ಒಂದು ದಿನವಾದರೂ ರೈತರ ಕಷ್ಟಗಳನ್ನು ಆಲಿಸಿದ್ದೀರಾ? ನಿಮಗೆ ಕಾಂಗ್ರೆಸ್ ಪಕ್ಷದ ಸಭೆಯೇ ಮುಖ್ಯವಾಯಿತೇ? 8 ತಿಂಗಳಲ್ಲಿ ನಿಮ್ಮ ಸರ್ಕಾರದ ಸಾಧನೆ ಏನು? 20 ರೂ. ಇದ್ದ ಸ್ಟಾಂಪ್ ಪೇಪರ್ ಅನ್ನು 120 ರೂ. ಮಾಡಿದ್ದೀರಿ, ಉಚಿತ ವಿದ್ಯುತ್ ನೆಪದಲ್ಲಿ ವಿದ್ಯುತ್ ಬಿಲ್ಲನ್ನು ದುಪ್ಪಟ್ಟು ಮಾಡಿದ್ದೀರಿ, ಶಕ್ತಿ ಯೋಜನೆಯಡಿ ಉಚಿತ ಬಸ್ ನೀಡುವ ಮೂಲಕ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಸಿಗದಂತೆ ಮಾಡಿದ್ದೀರಿ, ಪುರುಷರು ಬಸ್‌ಗಳಲ್ಲಿ ಪ್ರಯಾಣಿಸಲಾಗುತ್ತಿಲ್ಲ | ಇದು ನಿಮ್ಮ ಸಾಧನೆಯೇ ಎಂದು ತಿರುಗೇಟು ನೀಡಿದರು.

ಗೋಷ್ಠಿಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು ಜಾ.ದಳ ಕಾರ್ಯಾಧ್ಯಕ್ಷ ತಗ್ಗಹಳ್ಳಿ ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಶಂಕರೇಗೌಡ, ಕಾರ್ಯಾಧ್ಯಕ್ಷ ತಿಲಕ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ