ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆಗಳು ಹೆಚ್ಚುತ್ತಿದ್ದು, ಮಂಡ್ಯ ಜಿಲ್ಲೆಗೆ ಶಾಪವಾಗಿ ಪರಿಣಮಿಸುತ್ತಿದೆ. ಇದಕ್ಕೆ ಕಾರಣ ಗಂಡು ಮಕ್ಕಳ ಮೇಲಿನ ವ್ಯಾಮೋಹ ಮತ್ತು ಹೆಣ್ಣೆಂದರೆ ಹೊರೆ, ಹೆಣ್ಣೆಂದರೆ ಕಡಿಮೆ, ಕೀಳು ಎಂಬ ಮನೋಭಾವ ನಮ್ಮ ಸಮಾಜದಲ್ಲಿ ತುಂಬಾ ಆಳವಾಗಿ ಬೇರೂರಿದೆ, ಇದನ್ನು ಹೋಗಲಾಡಿಸಿ ಉತ್ತಮ ಸಮಾಜ ನಿರ್ಮಿಸುವ ಅಗತ್ಯವಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹೇಳಿದರು.
ಮಹಿಳಾ ಮುನ್ನಡೆ ಮತ್ತು ಅತ್ಯಾಚಾರ ವಿರೋಧಿ ಆಂದೋಲನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಪ್ತಾಹದ ಅಂಗವಾಗಿ ಮಂಡ್ಯನಗರದ ದೇವರಾಜು ಅರಸು ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ನಡೆದ ‘ಹೆಣ್ಣುಭ್ರೂಣ ಹತ್ಯೆ ಮತ್ತು ಅತ್ಯಾಚಾರಗಳ ವಿರುದ್ಧ ಅರಿವಿನ ಅಭಿಯಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಲ್ಲಿ ನೆರೆದಿರುವ ಹೆಣ್ಣು ಮಕ್ಕಳ ತಂದೆ ತಾಯಂದಿರು ಒಳ್ಳೆಯ ಮನಸ್ಥಿತಿಯನ್ನು ಹೊಂದಿದವರು. ಈ ಕಾರಣಕ್ಕೆ ನಿಮಗೆ ಜನ್ಮಕೊಟ್ಟು ಹೆಣ್ಣು ಮಕ್ಕಳಿಗೂ ಶಿಕ್ಷಣ ಕೊಡಬೇಕೆಂಬ ಮನೋಭಾವದಿಂದ ನಿಮ್ಮಗೆ ಶಿಕ್ಷಣ ಕಲಿಯಲು ಅವಕಾಶ ಮಾಡಿಕೊಟ್ಟಿದ್ದಾರೆ, ಜೊತೆಗೆ ನಿಮ್ಮ ಮೇಲೆ ಭರವಸೆ ಇಟ್ಟು ತಮ್ಮ ಮಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬಹುದೆಂಬ ಕನಸ್ಸನ್ನು ಕಟ್ಟಿಕೊಂಡಿರುತ್ತಾರೆ, ಅವರ ಕನಸನ್ನು ನನಸು ಮಾಡುವ ಕಡೆಗೆ ನಿಮ್ಮ ಪ್ರಯತ್ನ ಸಾಗಬೇಕು ಎಂದು ಸಲಹೆ ನೀಡಿದರು.

ಯಾವುದೇ ರೀತಿಯ ಆಕರ್ಷಣೆಗೆ ಒಳಗಾಗಿ ಬದುಕನ್ನು ಹಾದಿ ತಪ್ಪದೇ, ಇವತ್ತು ಕೈಯಲ್ಲಿ ಇರುವ ಮೊಬೈಲ್ ಜಗತ್ತಿನಿಂದಾಗಿ ಅತಿಯಾದ ಸೋಶಿಯಲ್ ಮೀಡಿಯಾದ ದುರ್ಬಳಕೆಯಿಂದಾಗಿ ಯುವ ಜನತೆ ದಾರಿ ತಪ್ಪಿ, ಸೈಬರ್ ಕ್ರೈಂ ಗಳು ಹೆಚ್ಚುತ್ತಿವೆ. ವಿದ್ಯಾವಂತರಾದ ನೀವು ಇಂತಹ ಅನಾಹುತಗಳಿಂದ ದೂರ ಇರಬೇಕು. ನಿಮ್ಮ ಜೀವನ ಹಲವು ಹೆಣ್ಣು ಮಕ್ಕಳಿಗೆ ಮಾದರಿಯಾಗಬೇಕು. ಇನ್ನೂ ಹೆಚ್ಚು ಹೆಣ್ಣು ಮಕ್ಕಳನ್ನು ಪೋಷಕರು ಯಾವುದೇ ಭೀತಿಗೆ ಒಳಗಾಗದೆ ಶಿಕ್ಷಣ ಕಲಿಯಲು ಯಾವುದೇ ಊರಿಗೆ ನಂಬಿಕೆ ಭರವಸೆಯಿಂದ ಹೊರಗೆ ಕಳಿಸುವ ವಾತಾವರಣ ನಿರ್ಮಾಣವಾಗುವಂತಾಗಬೇಕು ಎಂದರು.
ಮಕ್ಕಳೊಂದಿಗೆ ಸಂವಾದ ನಡೆಸಿದ ಮಹಿಳಾ ಮುನ್ನಡೆ ಮತ್ತು ಅತ್ಯಾಚಾರ ವಿರೋಧಿ ಆಂದೋಲನದ ಪೂರ್ಣಿಮ ಅವರು, ಇವತ್ತಿನ ಪ್ರಸ್ತುತ ಸನ್ನಿವೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಮತ್ತು ಹೆಣ್ಣುಭ್ರೂಣ ಹತ್ಯೆಗಳು ಸಮಾಜದಲ್ಲಿ ಉಂಟು ಮಾಡುತ್ತಿರುವ ಪರಿಣಾಮದ ಬಗ್ಗೆ ತಿಳಿಸಿದರು.
ದೇಶದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ಮತ್ತು ಭದ್ರತೆಯ ಮಟ್ಟ ಕುಸಿಯುತ್ತಿದ್ದು, ಹೆಣ್ಣುಮಕ್ಕಳಿಗೆ ಮಾತ್ರ ವಲ್ಲದೆ ಹೊರದೇಶಗಳಿಂದ ಬರುವ ಹೆಣ್ಣು ಮಕ್ಕಳಿಗೂ ಸುರಕ್ಷತೆ ಇಲ್ಲದ ವಾತವರಣ ಉಂಟಾಗಿರುವುದು ದುರಂತ. ಹೆಣ್ಣುಭ್ರೂಣ ಹತ್ಯೆಗಳು ಹೆಚ್ಚುತ್ತಿದ್ದು, ಹೆಣ್ಣು ಸಂತತಿ ವಿನಾಶದ ಕಡೆಗೆ ಸಾಗುತ್ತಿದೆ, ಲಿಂಗಾನುಪಾತ ಕುಸಿಯುತ್ತಿದೆ, ಪ್ರಸ್ತುತ ಸನ್ನಿವೇಶದಲ್ಲಿ ಗಂಡು ಮಕ್ಕಳಿಗೆ ಮದುವೆಯಾಗಲು ಹೆಣ್ಣುಗಳೇ ಸಿಗದ ಪರಿಸ್ಥಿತಿ ಉಂಟಾಗಿದೆ, ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಹೆಣ್ಣು ಮಕ್ಕಳನ್ನು ಪೆಟ್ಟಿಗೆಯಲ್ಲಿ ಹಾಕಿ ಭದ್ರಗೊಳಿಸುವ, ಮನೆಯಲ್ಲಿ ಕೂ ಡಿಹಾಕುವ ಹೀನಾಯ ಪರಿಸ್ಥಿತಿ ಬಂದೊದಗುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಸ್ತುತ ದಿನಗಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಯುವಜನರು ಕೆಟ್ಟ ಚಟಗಳಿಗೆ ದಾಸರಾಗುತ್ತಿದ್ದಾರೆ.
ಪುಟ್ಟ ಮಕ್ಕಳು ಅತ್ಯಾಚಾರಗಳಿಗೆ ಬಲಿಯಾಗುತ್ತಿವೆ, ಹಾಗೆಯೇ ಚಿಕ್ಕವಯಸ್ಸಿನ ಗಂಡು ಮಕ್ಕಳು ಬಾಲ ಅಪರಾಧಿಗಳಾಗಿ ಶಿಕ್ಷಗೆ ಒಳಪಡುತ್ತಿದ್ದಾರೆ. ಇಂತಹ ಅನಿಷ್ಟ ಕ್ರೌರ್ಯಗಳ ವಿರುದ್ಧ ಯುವಜನತೆ ಜಾಗೃತರಾಗಿ ಧ್ವನಿ ಎತ್ತಬೇಕು. ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಬಿ.ಸಿ.ಎಂ ವಸತಿ ನಿಲಯದ ತಾಲ್ಲೂಕು ನಿರ್ವಹಣಾಧಿಕಾರಿ ಶ್ರೀನಿವಾಸ್ ಟಿ.ಎಂ ಅಧ್ಯಕ್ಷತೆ ವಹಿಸಿದ್ದರು. ನಿಲಯ ಪಾಲಕರಾದ ಅವಿತ ಹೆಚ್ ಎಂ, ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಹಿಳಾ ಮುನ್ನಡೆ ಕಾರ್ಯದರ್ಶಿ ಶಿಲ್ಪರವರು ‘ನೀಲಿ ರಿಬ್ಬನ್’ ಕಿರು ನಾಟಕ ಪ್ರದರ್ಶಿಸಿದರು.




