ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಹೊಟ್ಟೆಗೆ ಊಟವಿಲ್ಲದೆ, ಕೈಯಲ್ಲಿ ಹಣವಿಲ್ಲದೆ ನೂರಾರು, ಸಾವಿರಾರು ಕಿಲೋಮೀಟರ್ ದೂರದ ದೆಹಲಿ, ನೋಯ್ಡಾ, ಮುಂಬೈ,ಬೆಂಗಳೂರು, ಚೆನ್ನೈಯಿಂದ ನಡೆದುಕೊಂಡು ಬಂದು ರಸ್ತೆಯಲ್ಲಿ ಪೋಲಿಸರ ಕೈಯಲ್ಲಿ ಲಾಠಿ ಏಟು ತಿಂದು, ಸಾಕಷ್ಟು ಕಷ್ಟನಷ್ಟ ಅನುಭವಿಸಿ ಉತ್ತರ ಪ್ರದೇಶ, ಬಿಹಾರದಲ್ಲಿರುವ ಮನೆ ಸೇರಿದ್ದರು ವಲಸೆ ಕಾರ್ಮಿಕರು ಮತ್ತವರ ಕುಟುಂಬಗಳು.
ಅಂತಹ ಸಹಸ್ರಾರು ಸಂಖ್ಯೆಯ ವಲಸೆ ಕಾರ್ಮಿಕರೇ ಇಂದು ಉತ್ತರ ಪ್ರದೇಶ ಮತ್ತು ಬಿಹಾರದ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಅಖಿಲೇಶ್ ಯಾದವ್, ತೇಜಸ್ವಿ ಯಾದವ್ ಮತ್ತು ರಾಹುಲ್ ಗಾಂಧಿ ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಪೂಲ್ಪುರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಸಾವಿರಾರು ಯುವಕರು ಬ್ಯಾರಿಕೇಡ್ ಗಳನ್ನು ಕಿತ್ತೆಸೆದು ಅಖಿಲೇಶ್ ಯಾದವ್ ಹಾಗೂ ರಾಹುಲ್ ಗಾಂಧಿಯವರಿದ್ದ ವೇದಿಕೆಯತ್ತ ಅಭಿಮಾನದಿಂದ ನುಗ್ಗಿದರು. ಪೋಲಿಸರು ಮತ್ತು ಭದ್ರತಾ ಸಿಬ್ಬಂದಿಗಳು ಯುವಜನರನ್ನು ನಿಯಂತ್ರಿಸಲು ಸಾಧ್ಯವಾಗಲೇ ಇಲ್ಲ.
ಈ ಸಂದರ್ಭದಲ್ಲಿ ಜನರು ಕಾಲ್ತುಳಿತಕ್ಕೆ ಸಿಲುಕ ಬಾರದೆಂದು ಕೇವಲ ಹತ್ತು ನಿಮಿಷಕ್ಕೆ ರ್ಯಾಲಿ ಮುಕ್ತಾಯ ಮಾಡಿದ್ದರು. ಇದೇ ರೀತಿ ಬಿಹಾರದಲ್ಲಿ ಕೂಡ ರಾಹುಲ್ ಗಾಂಧಿ ಹಾಗೂ ತೇಜಸ್ವಿ ಯಾದವ್ ರ್ಯಾಲಿಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದರು.
ಅದೇ ರೀತಿ ಮತದಾನದ ದಿನದಂದು ಸಹ ವಲಸೆ ಕಾರ್ಮಿಕರು ಕುಟುಂಬದೊಂದಿಗೆ ಬಂದು ಶಿಸ್ತಿನಿಂದ ಸರದಿ ಸಾಲುಗಳಲ್ಲಿ ನಿಂತು ಚಲಾಯಿಸುತ್ತಿರುವ ಮತ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದಿರಲಿ, ಅಧಿಕಾರದ ಹತ್ತಿರಕ್ಕೂ ಸಹ ಬಿಡದೆ ಸೇಡು ತೀರಿಸಿ ಕೊಂಡ್ರು ಎಂದು ರಾಜಕೀಯ ವಿಶ್ಲೇಷಕರು ವಿಮರ್ಶೆ ಮಾಡುತ್ತಿದ್ದಾರೆ.




