Monday, November 23, 2026

ಪ್ರಾಯೋಗಿಕ ಆವೃತ್ತಿ

ಎಲ್ಲಿಯ ಮನಮೋಹನ್ ಸಿಂಗ್…. ಎಲ್ಲಿಯ ಮೋದಿಜೀ… !

ಜಗದೀಶ್ ಕುಮಾರ್, ಮಂಡ್ಯ

ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಬಹುಶಃ 2006 ನೇ ಇಸವಿ ಇರಬೇಕು. ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ರೈತರ ಬೃಹತ್ ಹೋರಾಟವಿದ್ದ ಕಾರಣ ಸರಿ ಸುಮಾರು ಎಂಭತ್ತರಿಂದ ನೂರು ಜನರಷ್ಟು ರೈತಸಂಘ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮಂಡ್ಯದಿಂದ ದೆಹಲಿಗೆ ಹೋಗಿದ್ದೇವು. ದೆಹಲಿಗೆ ಹೋದ ಮೇಲೆ ಸುತ್ತಮುತ್ತಲಿನ ಹಲವು ಪ್ರವಾಸಿ ಸ್ಥಳಗಳನ್ನು ನೋಡದೇ ಇರಲು ಸಾಧ್ಯವೇ? ಹಾಗಾಗಿ ರ್‍ಯಾಲಿ ಮುಗಿದ ಮೇಲೆ ಎರಡು‌ ದಿವಸ ದೆಹಲಿಯಲ್ಲಿಯೇ ಉಳಿದು ದೆಹಲಿ ಸುತ್ತಮುತ್ತಲಿನ ಸ್ಥಳಗಳನ್ನು ನೋಡಿಕೊಂಡು ನಂತರ ಬೆಂಗಳೂರಿನ ರೈಲು ಹತ್ತುವ ಕಾರ್ಯಕ್ರಮ ಹಾಕಿ ಕೊಂಡೆವು.

ಈ ದೆಹಲಿಗೆ ಹೋಗಿದ್ದ ನಮಗೆ ಉಳಿಯಲು ಹೋಟೆಲ್ ಗಳಲ್ಲಿ ರೂಂ ಮಾಡಿಕೊಳ್ಳುವುದು ಸಾಧ್ಯವೂ ಇರಲಿಲ್ಲ, ಅವಕಾಶವೂ ಇರಲಿಲ್ಲ. ನಮ್ಮ ಮುಂದೆ ಇದ್ದ ಆಯ್ಕೆ ದೆಹಲಿಯ ಗುರುದ್ವಾರಗಳು.

ಈ ಗುರುದ್ವಾರಗಳಲ್ಲಿ ಊಟದ ವ್ಯವಸ್ಥೆಯು ಆಗುತ್ತಿತ್ತು.ಜೊತೆಗೆ ಶುಭ್ರವಾದ ಶೌಚಾಲಯಗಳ ಕಾರಣದಿಂದ ಸ್ನಾನ‌ ಸಹ ಮುಗಿದು ಹೋಗುತ್ತಿತ್ತು. ನಾವು ಒಂದು ಎಂಭತ್ತರಷ್ಟು ಜನ ಪಾರ್ಲಿಮೆಂಟ್ ಭವನದ ಬಳಿಯಲ್ಲಿದ್ದ ಗುರುದ್ವಾರದಲ್ಲಿ ಉಳಿದುಕೊಂಡಿದ್ದೆವು. ( ಹೆಸರು ಮರೆತು ‌ಹೋಗಿದೆ ) ಈ ಗುರುದ್ವಾರ ಉಳಿದ ಗುರುದ್ವಾರಗಳಿಗಿಂತ ಹೈಟೆಕ್ ಆಗಿತ್ತು ಮತ್ತು ಸಾಕಷ್ಟು ವಿಶಾಲವಾಗಿತ್ತು. ಅಮೃತಶಿಲೆಯ ಒಂದು ದೊಡ್ಡ ವರಾಂಡವಿತ್ತು. ಅದರಲ್ಲಿಯೇ ನಮ್ಮ ಮೂರ್ನಾಲ್ಕು ದಿನಗಳ ವಾಸ್ತವ್ಯ.

ಒಂದು ದಿನ ದೆಹಲಿಯ ಇಂಡಿಯಾ ಗೇಟ್, ರಾಷ್ಟ್ರಪತಿ ಭವನ, ಪಾರ್ಲಿಮೆಂಟ್,‌ಕೆಂಪುಕೋಟೆ, ಜಾಮೀಯಾ ಮಸೀದಿ ಎಲ್ಲಾ ನೋಡಿಕೊಂಡು ಬಂದು ಗುರುದ್ವಾರದಲ್ಲಿ ಊಟ ಮಾಡಿ ರಾತ್ರಿ ಹತ್ತು ಗಂಟೆಗೆ ಮಲಗಿದ್ರೆ ಗಾಢ‌ನಿದ್ರೆ.ಸರಿಸುಮಾರು ಬೆಳಗ್ಗಿನ ನಾಲ್ಕು ಗಂಟೆ ಸಮಯದಲ್ಲಿ ಏನೋ ಶಬ್ದ ಕೇಳಿಸಿ ಎದ್ದೇಳಲು ಪ್ರಯತ್ನಿಸಿದರೆ SPG ಪೋಲಿಸಿನವರು ( ಹುಟ್ನಾ ನಯೀ ಐಸೇಯೀ ಸೋತೆ ರಹೇನಾ ) ಎಂದು ಎದ್ದೇಳಲು ಬಿಡದೆ ಮಲಗಿಸಿದರು.

ನಮ್ಮ ಜೊತೆಯಲ್ಲಿ ಬಂದ ಬಹಳಷ್ಟು ಜನ ಬೆಳಗ್ಗೆ ಎಲ್ಲಾ ದೆಹಲಿ ಸುತ್ತಿದ್ದ ಕಾರಣ ಯಾರಿಗೂ ಎಚ್ಚರವೇ ಇರಲಿಲ್ಲ. ಬಹುತೇಕರು ಗಾಢ ನಿದ್ರೆಯಲ್ಲಿದ್ದರೂ, ನಾನು ಮತ್ತು ನನ್ನ ಒಂದಿಬ್ಬರು ಮಾತ್ರ ಎಚ್ಚರಗೊಂಡು ಎದ್ದೇಳಲು ನೋಡಿದ್ರೆ ನಾವು ಮಲಗಿದ್ದ ಜನರ ಸುತ್ತ ಹತ್ತು ಜನ SPG ಪೋಲಿಸಿನವರು, ನಮಗೆ ಎದ್ದೇಳಲು ಬಿಡುತ್ತಿಲ್ಲ. ದೂರದ ಗುರುದ್ವಾರದ ಮಂದಿರದ ಬಳಿ ಕಾರುಗಳ ಓಡಾಟ, ಕತ್ತಲಿನಲ್ಲಿ ಯಾವುದು ಅಸ್ಪಷ್ಟ ‌ಹೇಗೋ ಕಷ್ಟಪಟ್ಟು ಹರಕು ಮುರುಕು ಹಿಂದಿಯಲ್ಲಿ ಪಕ್ಕದಲ್ಲಿ ನಿಂತಿದ್ದ SPG ಪೋಲಿಸಿನವನಿಗೆ ಕೌನ್ ಹೈ ಅಂತಹ ಕೇಳಿದೆ. ಅದಕ್ಕೆ ಅವನು ಪ್ರೈಮ್ ಮಿನಿಸ್ಟರ್ ಮನಮೋಹನ್ ಸಿಂಗ್ ಸಾರ್ ಆಯಾ ಹೈ ಗುರುದ್ವಾರಕೋ, ಹುಟ್ನ ನಯೀ ಹೆಸೇ ಸೋತೆಯಿ ರಹನಾ ಅದಾ ಘಂಟೆಮೇ ಚಲೇ ಜಾಯೇಗಾ, ಊಸಕೇ ಬಾದ್ ಹುಟ್ನಾ ಎಂದು ಹೇಳಿದ.

ನಾನು ಮತ್ತು ನನ್ನ ಸ್ನೇಹಿತರು ಮಲಗಿದ ರೀತಿಯಲ್ಲಿಯೇ ಮನಮೋಹನ್ ಸಿಂಗ್ ನೋಡಲು ಪ್ರಯತ್ನಿಸಿದರೂ ಸಹ ಕೇವಲ ಓಡಾಡುತ್ತಿದ್ದ ಆಕೃತಿಗಳು ಕಾಣಿಸಿದವೇ ಹೊರತು ಕತ್ತಲಿನಲ್ಲಿ ಬೇರೆ ಯಾರು ಕಾಣಿಸಲಿಲ್ಲ. ಸರಿಯಾಗಿ ಇಪ್ಪತ್ತು ನಿಮಿಷಕ್ಕೆ ಕಾರುಗಳು, ಪೋಲಿಸಿನವರು ಎಲ್ಲರೂ ಹೊರಟು ಹೋದರು.

ನಾವು ಬೆಳಿಗ್ಗೆ ಎದ್ದು ಗಾಢ ನಿದ್ರೆಯಲ್ಲಿದ್ದ ಜೊತೆಗಾರರಿಗೆ ಮನನೋಹನ್ ಸಿಂಗ್ ಬಂದು‌ಹೋದ ವಿಚಾರ ಹೇಳಿದಾಗ ಕೆಲವರು ನಂಬಿಕೊಂಡರು. ಮತ್ತೆ‌ ಕೆಲವರು ತಮಾಷೆ ಮಾಡುತ್ತಿರಬೇಕು ಅಂತಹ ಅಂದುಕೊಂಡರು. ಅವತ್ತಿಗೆ ಇದು ನನಗೂ ಏನು ಅನ್ನಿಸಲಿಲ್ಲ, ಪಾರ್ಲಿಮೆಂಟ್ ಹತ್ತಿರ ಇರುವ ಗುರುದ್ವಾರ ಆಗಿರುವ ಕಾರಣ ಪ್ರೈಮ್ ಮಿನಿಸ್ಟರ್ ಅವರು ಪ್ರಾರ್ಥನೆ ಮಾಡಲು‌ ಬಂದಿರಬೇಕು ಅನ್ನುವ ನಿರ್ಲಿಪ್ತ ಭಾವದಲ್ಲಿ ಇದನ್ನು ಮರೆತು ಬಿಟ್ಟಿದ್ದೆ.

ಆದರೆ ಇವತ್ತು ಮೋದಿಜೀ ಹತ್ತು ಹಲವು ಕ್ಯಾಮೆರಾಗಳ ಜೊತೆ ಪೋಟೋಶೂಟ್ ಮಾಡುತ್ತಾ, ಧ್ಯಾನ ಮಾಡುತ್ತಿರುವ ಪೋಟೋಗಳ ನೋಡಿದಾಗ ಇಪ್ಪತ್ತು ವರ್ಷದ ಹಳೆಯ ಘಟನೆ ನೆನಪಿಗೆ ಬಂತು, ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಬೆಳಗ್ಗೆ 4 ಗಂಟೆಗೆ ಬಂದು ಪ್ರಾರ್ಥನೆ ಮಾಡಿ ಹೋಗುತ್ತಿದ್ದ ಮನಮೋಹನ್ ಸಿಂಗ್ ಎಲ್ಲಿ, ಜನರಿಗೆ ತೊಂದರೆ ಕೊಟ್ಟುಕೊಂಡು ಪೋಟೋಶೂಟ್ ಮಾಡಿಸುತ್ತಿರುವ ಮೋದಿಜೀ ಎಲ್ಲಿ ಎಂದು!

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

1 COMMENT

  1. ಮೋದಿ ಅವಧಿ ಉದ್ದಕ್ಕೂ ಜನರ ತೆರಿಗೆ ಹಣದಲ್ಲಿ ಶೂಟಿಂಗ್ ಮಾಡಿಕೊಂಡು ಸ್ವಂತ ಪ್ರಚಾರಕ್ಕೆ ಸಮಯ ಹಾಳುಮಾಡಿ ಬಡಜನರ ಬದುಕು ಮೂರಾಬಟ್ಟೆ ಮಾಡಿದ,,, ಆದರೂ ಮುಖ್ಯ ವಾಹಿನಿ ಟೀವಿ ಗಳು,,ಅಂಧಭಕ್ತರು ತಮ್ಮ ಮೆದುಳನ್ನು ಹಾವಿನಪುರದ ಐಸಿಯು ನಲ್ಲಿಟ್ಟು ದೇಶಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ