ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷೆ ಹಾಗೂ ರಾಜಮಂಡ್ರಿ ಸಂಸದೆ ದಗ್ಗುಬಾಟಿ ಪುರಂದೇಶ್ವರಿ ಅವರು 18ನೇ ಲೋಕಸಭೆಯ ಸ್ಪೀಕರ್ ಹುದ್ದೆಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ತೆಲಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರ ಸ್ವತಃ ನಾದಿನಿಯಾಗಿರುವ ಪುರಂದೇಶ್ವರಿ ಅವರು ಸ್ಪೀಕರ್ ಹುದ್ದೆಗೇರಿರುವುದು ಖಚಿತ ಎಂದು ದೆಹಲಿ ಮೂಲಗಳು ಖಚಿತ ಪಡಿಸಿವೆ.
ಟಿಡಿಪಿ ಮತ್ತು ಬಿಜೆಪಿ ಎರಡು ಪಕ್ಷಗಳು ಸ್ಪೀಕರ್ ಹುದ್ದೆಗೆ ಹಗ್ಗ ಜಗ್ಗಾಟ ನಡೆಸಿದ್ದು, ಈಗ ಎರಡು ಪಕ್ಷಗಳು ಪುರಂದೇಶ್ವರಿ ಅವರ ಹೆಸರಿಗೆ ಒಪ್ಪಿಗೆ ಸೂಚಿಸಿವೆ.
ಪುರಂದೇಶ್ವರಿ ಅವರು ಚಂದ್ರಬಾಬು ನಾಯ್ಡು ಅವರ ನಾದಿನಿ ಅದರೂ ಸಹ ಅವರು ಬಿಜೆಪಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ಬಿಜೆಪಿ ಮೂಲಗಳ ಪ್ರಕಾರ, ಮಾಜಿ ಕೇಂದ್ರ ಸಚಿವ ಮತ್ತು ಟಿಡಿಪಿ ಸಂಸ್ಥಾಪಕ ಎನ್ಟಿ ರಾಮರಾವ್ ಅವರ ಪುತ್ರಿ ಪುರಂದೇಶ್ವರಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸಂಪುಟದಿಂದ ಹೊರಗಿಡಲಾಗಿದೆ. ವಿಶೇಷವಾಗಿ ಅವರನ್ನು ಲೋಕಸಭೆಯ ಸ್ಪೀಕರ್ ಆಗಿ ನೇಮಿಸಬಹುದು ಎಂಬ ಮಾತು ಕೇಳಿಬರುತ್ತಿದೆ.
ಪುರಂದೇಶ್ವರಿ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದರೆ, ಸಂಸತ್ತಿನಲ್ಲಿ ಈ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಿದ ಆಂಧ್ರಪ್ರದೇಶದ ಎರಡನೇ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅವರಿಗಿಂತ ಮೊದಲು ಅಮಲಾಪುರಂನ ಮಾಜಿ ಸಂಸದ ಗಂಟಿ ಮೋಹನ್ ಚಂದ್ರ ಬಾಲಯೋಗಿ ಅವರು ಸ್ಪೀಕರ್ ಆಗಿದ್ದರು, ಅವರು 2002 ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.
ಪುರಂದೇಶ್ವರಿ ಅವರನ್ನು ಲೋಕಸಭಾ ಸ್ಪೀಕರ್ ಆಗಿ ಮಾಡುವುದರಿಂದ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ಭಾವಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೂ ಸಂತೋಷವಾಗುತ್ತದೆ ಎಂದು ಬಿಜೆಪಿ ನಂಬಿದೆ ಎಂದು ಮೂಲಗಳು ತಿಳಿಸಿವೆ. ವಿಶೇಷವೆಂದರೆ ನಾಯ್ಡು ಅವರ ಪತ್ನಿ ಮತ್ತು ಪುರಂದೇಶ್ವರಿ ಸಹೋದರಿಯರಾಗಿದ್ದಾರೆ.




