ದೇವಾಲಯದ ಜಾಗವನ್ನು ದೇವಾಲಯದ ಅರ್ಚಕನೇ ತಮ್ಮ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಸಿಕೊಂಡು ವಂಚಿಸಿರುವುದಾಗಿ ಆರೋಪಿಸಿ ಗ್ರಾಮಸ್ಥರು ತಹಶೀಲ್ದಾರ್ಗೆ ದೂರು ನೀಡಿ ಕೂಡಲೇ ಅಕ್ರಮ ಖಾತೆಯನ್ನು ವಜಾಗೊಳಿಸುವಂತೆ ಒತ್ತಾಯಿಸಿದರು.
ಶ್ರೀರಂಗಪಟ್ಟಣ ತಾಲೂಕಿನ ಅಚಪ್ಪನ ಕೊಪ್ಪಲು ಗ್ರಾಮದ ಪುರಾತನ ಶ್ರೀಆಂಜನೇಯಸ್ವಾಮಿ ದೇವಾಲಯಕ್ಕೆ ಸೇರಿದ ಸರ್ವೆ ನಂ.152ರಲ್ಲಿ 16 ಗುಂಟೆ, ಸರ್ವೆ 02ರಲ್ಲಿ 21 ಗುಂಟೆ, ಹಾಗೂ ಸರ್ವೆ ನಂ. 02ರಲ್ಲಿ 38 ಗುಂಟೆ ಜಮೀನನ್ನು ಈ ಹಿಂದೆ ಇದ್ದ ಅರ್ಚಕ ವೆಂಕಟ ಸುಬ್ಬಾ ಜೋಯಿಸ್ ಎಂಬುವರು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಖಾತೆ ವಗೈರಿ ಜೊತೆಗೆ ಅನ್ಯಕಾಂತ ಕೂಡ ಮಾಡಿಸಿಕೊಂಡಿದ್ದಾರೆಂದು ಗ್ರಾಮಸ್ಥರು ದೂರಿದರು.

ಸರ್ವೆ ನಂ 152ರಲ್ಲಿರುವ 16ಗುಂಟೆ ಜಮೀನಲ್ಲಿ ಗ್ರಾಮಕ್ಕೆ ಸೇರಿದ ಶ್ರೀಆಂಜನೇಯ ದೇವಾಲಯವಿದ್ದು ದೇವಾಲಯದ ಸುತ್ತಲೂ ಸರ್ಕಾರದ ವತಿಯಿಂದ ಸಮುದಾಯ ಭವನ, ದೇವಾಲಯದ ಸುತ್ತಲೂ ಗ್ರಾಮ ಪಂಚಾಯಿತಿಯಿಂದ ಕಾಂಪೌಂಡ್ ನಿರ್ಮಿಸಿ, ಜಿಪಂ ವತಿಯಿಂದ ಗ್ರಾಮಕ್ಕೆ ಕುಡಿಯುವ ನೀರಿನ ಟ್ಯಾಂಕ್ ಕೂಡ ನಿರ್ಮಿಸಲಾಗಿದೆ. ಇದಲ್ಲದೆ ಕೃಷಿ ಸಹಾಯಕರ ಕಚೇರಿ, ಟ್ಯಾಂಕ್ ಬಳಿ ಗ್ರಾಪಂ ವತಿಯಿಂದ ಕಿರು ನೀರು ಸರಬರಾಜು ಘಟಕ, ಪಕ್ಕದಲ್ಲೇ ದೇವಾಲಯದ ಕೊಳ ಇದೆ. ಇಷ್ಟಿದ್ದರೂ ಈಗಿರುವ ಅರ್ಚಕ ಪ್ರಸನ್ನ ಎಂಬುವರು ಸರ್ವೆ ನಂ 192ರಲಿರುವ 16ಗುಂಟೆ ಜಮೀನನ್ನು ಗ್ರಾಮಕ್ಕೆ ಸೇರಿದ್ದು ಎಂಬುದಾಗಿ ಬರೆದುಕೊಟ್ಟಿದ್ದಾರೆ. ಇದೀಗ ಜಮೀನು ದೇವಾಲಯ ನಮ್ಮದೇ ಎಂಬುದಾಗಿ ಹೇಳುತ್ತಿದ್ದಾರೆ. ಆದ್ದರಿಂದ ಕೂಡಲೇ ಈ ಖಾತೆಯನ್ನು ರದ್ದುಗೊಳಿಸಿ ಗ್ರಾಮಕ್ಕೆ ಸೇರಿರುವ ಜಮೀನನ್ನು ಗ್ರಾಮದ ಜನರ ಉಪಯೋಗಕ್ಕೆ ಬಿಡಿಸಿಕೊಡುವಂತೆ ಒತ್ತಾಯಿಸಿ ತಹಶೀಲ್ದಾರ್ ಪರುಶುರಾಮ್ ಅವರಿಗೆ ಮನವಿ ಮಾಡಿದ್ದಾರೆ.
ಗ್ರಾಮದ ಯಜಮಾನರಾದ ಪಟೇಲ್ ಪಿ ಬೋರೇಗೌಡ, ಕೃಷ್ಣಗೌಡ, ನಾರಾಯಣ, ಲೋಕೇಶ್, ರಮೇಶ್, ಬಸವರಾಜು, ನಿಂಗರಾಜು, ತಮ್ಮಣ್ಣ, ಕರೀಗೌಡ, ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ರವಿಲಕ್ಷ್ಮಣ ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಆಗಮಿಸಿ ತಹಸೀಲ್ದಾರ್ ಪರಶುರಾಮ್ ಅವರಿಗೆ ಮನವಿ ಸಲ್ಲಿಸಿದರು.




