ವಾಲ್ಮೀಕಿ ಅಭಿವದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ, ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದ್ದು, ಇದೇ ವೇಳೆ ಮೂರು ವಿಧೇಯಕಗಳನ್ನು ಮಂಡನೆ ಮಾಡಲಾಯಿತು.
ವಾಲ್ಮೀಕಿ ಅಭಿವದ್ಧಿ ನಿಗಮದಲ್ಲಿ ನಡೆದಿದೆ ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಂಜಸ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿಪಕ್ಷಗಳು ಶುಕ್ರವಾರ ಅಧಿವೇಶನ ಆರಂಭವಾಗುತ್ತಿದ್ದಂತೆ ಪ್ರತಿಭಟನೆ ಮತ್ತೆ ಮುಂದುವರಿಸಿದರು. ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗೆ ಇಳಿದು ಧರಣಿ ನಡೆಸಿದರು.
ವಿಪಕ್ಷಗಳ ಪ್ರತಿಭಟನೆ ನಡುವೆ ವಿಧಾನಸಭೆಯಲ್ಲಿ ಸರಕು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ, ಸಿನಿ ಸಾಂಸ್ಕೃತಿಕ ಕ್ಷೇಮಾಭಿವೃದ್ದಿ ವಿದೇಯಕ ಸೇರಿ ಮೂರು ಮಸೂದೆಗಳನ್ನ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಮಂಡಿಸಿದರು. ಸಭಾಧ್ಯಕ್ಷ ಯು ಟಿ ಖಾದರ್ ಅವರು ಧ್ವನಿ ಮತದ ಮೂಲಕ ಮೂರು ವಿಧೇಯಕಗಳನ್ನು ಅಂಗೀಕರಿಸಿದರು.