Sunday, November 22, 2026

ಪ್ರಾಯೋಗಿಕ ಆವೃತ್ತಿ

ಸಣ್ಣ ನೀರಾವರಿ ಕಚೇರಿ ನಾಗಮಂಗಲಕ್ಕೆ ಸ್ಥಳಾಂತರ: ಸಚಿವರ ವಿರುದ್ದ ಶಾಸಕ ಕಿಡಿ

ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಸಣ್ಣ ನೀರಾವರಿ ಉಪ ವಿಭಾಗದ ಕಚೇರಿಯನ್ನು ಹುದ್ದೆಗಳ ಸಮೇತ ನಾಮಂಗಲ ಕೇಂದ್ರಕ್ಕೆ ಸ್ಥಳಾಂತರಿಸಿಕೊಂಡು, ನಮ್ಮ ತಾಲೂಕಿಗೆ ಸಂಬಂಧಿಸಿದ ಸಣ್ಣಪುಟ್ಟ ವಿಚಾರದಲ್ಲೂ ಹಸ್ತಕ್ಷೇಪದ ಜೊತೆಗೆ ನನ್ನ ಶಾಸಕ ಸ್ಥಾನಕ್ಕೆ ಚ್ಯುತಿ ಬರುವಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದು ಶಾಸಕ ಎಚ್.ಟಿ ಮಂಜು ಆರೋಪಿಸಿದ್ದಾರೆ.

ಕೆ.ಆರ್.ಪೇಟೆ ತಾಲೂಕು ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಆರ್.ಪೇಟೆ ತಾಲೂಕಿನಲ್ಲಿ ಹಲವು ಏತ ನೀರಾವರಿ ಯೋಜನೆ ಪೂರ್ಣಗೊಂಡು ಉಳಿದ ಯೋಜನೆಯ ಕಾಮಗಾರಿಗಳು ಚಾಲ್ತಿಯಲ್ಲಿವೆ, ಇಂತಹ ಸಂದರ್ಭದಲ್ಲಿ ಪ್ರಸ್ತುತ ಇರುವ ಇಲಾಖೆ ಹಾಗೂ ಅಧಿಕಾರಿಗಳ ಕೊರತೆ ಇದೆ ಎಂದು ಬಿ.ಎಸ್ ಯಡಿಯೂರಪ್ಪ ಅವರ ಅವಧಿಯಲ್ಲಿ ತಮ್ಮ ಹುಟ್ಟೂರು ಗ್ರಾಮವಾದ ಬೂಕನಕೆರೆ ಭಾಗದ ರೈತರ ಅನುಕೂಲಕ್ಕಾಗಿ ಸಣ್ಣ ನೀರಾವರಿ ಉಪ ವಿಭಾಗವನ್ನ ತರಲಾಗಿತ್ತು. ಆದರೆ ಪ್ರಸ್ತುತ ಸರ್ಕಾರದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ರೈತರ ಬೆನ್ನೆಲುಬಾಗಿ ನಿಲ್ಲಬೇಕು, ಆದರೆ ಅವರ ಸ್ವಾರ್ಥ ರಾಜಕಾರಣಕ್ಕಾಗಿ ಹಾಗೂ ಅಧಿಕಾರವ ಪ್ರಭಾವ ಬಳಸಿ ಕಚೇರಿಯನ್ನು ಕಿತ್ತುಕೊಳ್ಳುವ ಮನಸ್ಥಿತಿಗೆ ತಲುಪಿದ್ದಾರೆ ಎಂದು ಕಿಡಿಕಾರಿದರು.

ಸಾವಿರಾರು ರೈತ ಕುಟುಂಬಕ್ಕೆ ಅನುಕೂಲವಾಗುವ ಕಚೇರಿ ಮತ್ತು ಹುದ್ದೆಗಳ ಸಮೇತ ಸ್ವಕ್ಷೇತ್ರಕ್ಕೆ ಕೊಂಡೊಯ್ಯುವ ಉದ್ದೇಶವೇನು…? ಅವರ ಕ್ಷೇತ್ರಕ್ಕೆ ಇಲಾಖೆಯ ಉಪಕಚೇರಿ ಅವಶ್ಯಕತೆ ಇದ್ದರೆ, ಅವರು ಘನ ಸರ್ಕಾರದ ಪ್ರಭಾವಿ ಸಚಿವರು ,ಸ್ಥಳಾಂತರಕ್ಕೆ ಬಳಸುವ ಪ್ರಭಾವವನ್ನು ಪ್ರತ್ಯೇಕ ಕಚೇರಿಗೆ ಬಳಸಬೇಕಾಗಿತ್ತು. ಕೂಡಲೇ ಈ ಸರ್ಕಾರ ಈ ಆದೇಶವನ್ನು ಹಿಂಪಡೆಯಬೇಕು, ಇಲ್ಲದಿದ್ದರೆ ನಾನು ಒಳಗೊಂಡಂತೆ ತಾಲೂಕಿನ ಜನತೆಯ ಉಗ್ರ ಹೋರಾಟ ನಡೆಸಲು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.

ಸಚಿವರ ಹಸ್ತಕ್ಷೇಪ

ಮಂಡ್ಯ ಜಿಲ್ಲೆಯಲ್ಲೆ ಏಕೈಕ ಜೆಡಿಎಸ್ ಶಾಸಕ ಕೆ.ಆರ್.ಪೇಟೆ ಎಂಬ ಕಾರಣಕ್ಕೆ ನನ್ನ ಕ್ಷೇತ್ರದಲ್ಲಿ ರೈತಾಪಿ ವರ್ಗಕ್ಕೆ ಅನುಕೂಲವಾಗುವ ಸಣ್ಣ ಪುಟ್ಟ ವಿಚಾರದಲ್ಲೂ ಅಡ್ಡಗಾಲು ಹಾಕಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಹಕರಿಸದೆ ಹಲವು ಬಾರಿ ನನ್ನ ಶಾಸಕ ಸ್ಥಾನಕ್ಕೂ ಚ್ಯುತಿ ಬರುವಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ ಯಾರಿಗೂ ಅಧಿಕಾರ ಶಾಶ್ವತಲ್ಲ ಅವರು ಕೂಡ ವಿರೋಧ ಪಕ್ಷದಲ್ಲಿ ಶಾಸಕರಾಗಿದ್ದೆ ಎನ್ನುವ ಮನಸ್ಸಿನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಹಕರಿಸಿ ಕಾರ್ಯನಿರ್ವಹಿಸಬೇಕು ಎಂದು ಪರೋಕ್ಷವಾಗಿ ಗುಡುಗಿದರು.

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಅಶೋಕ್, ತಾ.ಪಂ ಮಾಜಿ ಸದಸ್ಯ ಹುಲ್ಲೆಗೌಡ,ಹೊ ಸಹೊಳಲು ರಾಜು, ಸಂತೆಬಾಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿ ಕುಮಾರ್,ಗ್ರಾ. ಪಂ ಅಧ್ಯಕ್ಷ ಶ್ಯಾಮ್ ಸುಂದರ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ  ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ