Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ರಾಜ್ಯಪಾಲರ ‘ಪ್ರಾಸಿಕ್ಯೂಷನ್’ ವಿರುದ್ಧ ಕಾಂಗ್ರೆಸ್ ‘ಪ್ರತಿಭಟನಾಸ್ತ್ರ’

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಮಂಡ್ಯನಗರದಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ಬೃಹತ್ ಪ್ರತಿಭಟನಾ ಧರಣಿ ನಡೆಸಿದರು.

ಮಂಡ್ಯನಗರದ ಕಾವೇರಿ ಉದ್ಯಾನವನದ ಮುಂಭಾಗದಲ್ಲಿ ಜಮಾಯಿಸಿದ ಸಾವಿರಾರು ಕಾರ್ಯಕರ್ತರು ರಾಜ್ಯಪಾಲರ ವಿರುದ್ದ ಘೋಷಣೆಗಳನ್ನು ಮೊಳಗಿಸಿ, ಕೇಂದ್ರದ ಏಜೆಂಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಕಿಡಿಕಾರಿದರು.

ಅಲ್ಲದೇ ರಾಜ್ಯಪಾಲ ತಾವರ್ ಚಂದ್ ಗೇಹ್ಲೋಟ್ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ದ ಪ್ಲೇಕಾರ್ಡ್ ಗಳನ್ನು ಪ್ರದರ್ಶನ ಮಾಡಿ ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್ ನಾಯಕರ ಪರ ಜಯಘೋಷಗಳ ಜೊತೆಗೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಹಾಗೂ ಕೇಂದ್ರದ ಎನ್ ಡಿ ಎ ಸರ್ಕಾರ, ಪ್ರಧಾನಿ ಮೋದಿ. ಸಚಿವರಾದ ಅಮಿತ್ ಷಾ, ಕುಮಾರಸ್ವಾಮಿ ವಿರುದ್ಧ ಘೋಷಣೆ ಗಳನ್ನು ಕೂಗಿದರು.

ರಾಷ್ಟ್ರಪತಿಗಳ ಪ್ರತಿನಿಧಿಯಾಗಿ ಸಂವಿಧಾನದ ರಕ್ಷಣೆ ಮಾಡಬೇಕಾದ ರಾಜ್ಯಪಾಲರು ಕೇಂದ್ರದ ಎನ್ ಡಿ ಎ ಸರ್ಕಾರದ ಕೈ ಗೊಂಬೆಯಂತೆ ವರ್ತಿಸುತ್ತ ಸುಪ್ರೀಂಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿರುವ ಪ್ರಕರಣಗಳು ಸಾಕಷ್ಟಿವೆ. ಆದರೆ ರಾಜ್ಯಪಾಲರು ವ್ಯಕ್ತಿಯೊಬ್ಬರ ಖಾಸಗಿ ದೂರು ಆಧರಿಸಿ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ತನಿಖೆಗೆ ಅನುಮತಿ ನೀಡುವ ಮೂಲಕ ಸಂವಿಧಾನ ದತ್ತವಾಗಿ ಆಯ್ಕೆಯಾದ ಸರ್ಕಾರವನ್ನು ಅಭದ್ರಗೊಳಿಸುವ ಸಂವಿಧಾನ ವಿರೋಧಿ ಕಾರ್ಯ ನಡೆಸಿದ್ದಾರೆ ಎಂದು ಕಿಡಿಕಾರಿದರು.

ಹಾಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಿ ಎಂ ಯಡಿಯೂರಪ್ಪ, ನಿರಾಣಿ, ಶಶಿಕಲಾ ಜೊಲ್ಲೆ ಸೇರಿದಂತೆ ಹಲವಾರು ನಾಯಕರ ವಿರುದ್ದ ತನಿಖಾ ಸಂಸ್ಥೆಗಳೇ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿ ತಿಂಗಳುಗಳೇ ಉರುಳುತ್ತಿದ್ದರೂ ಈವರೆಗೂ ಅನುಮತಿ ನೀಡದ ರಾಜ್ಯಪಾಲರು, ಸರ್ಕಾರದ ಯಾವ ತನಿಖಾ ಸಂಸ್ಥೆ ಅನುಮತಿ ಕೇಳದಿದ್ದರೂ ಕೇವಲ ಖಾಸಗಿ ವ್ಯಕ್ತಿ ಗಳ ದೂರು ಆಧರಿಸಿ ತನಿಖೆಗೆ ಅನುಮತಿ ನೀಡಿರುವುದು ಎನ್ ಡಿ ಎ ನಾಯಕರ ರಾಜಕೀಯ ಕುತಂತ್ರವಾಗಿದ್ದು ಇಂತಹ ಬೆದರಿಕೆಗೆ ಕಾಂಗ್ರೆಸ್ ಮಣಿಯುವುದಿಲ್ಲ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕಿ, ಚಿತ್ರನಟಿ ಭಾವನಾ, ಶಾಸಕರಾದ ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ರವಿಕುಮಾರ್,  ಮೈಷುಗರ್ ಹಾಗೂ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕೆ.ಪಿ.ಸಿ.ಸಿ ನಾಯಕ ದಡದಪುರ ಶಿವಣ್ಣ, ಮಾಜಿ ಶಾಸಕ ಎಂ.ಶ್ರೀನಿವಾಸ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ