ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೋಣಸಾಲೆ ಗ್ರಾಮದಲ್ಲಿ ದಲಿತ ಕುಟುಂಬವನ್ನು ಜೀತಕ್ಕಿಟ್ಟುಕೊಂಡು ಆ ಕುಟುಂಬದ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿರುವ ಆರೋಪಿ ಮುರಳಿ ಎಂಬಾತನನ್ನು ಕೂಡಲೇ ಬಂಧಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆಗ್ರಹಪಡಿಸಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಜೀತ ಮತ್ತು ಸಾವು ಪ್ರಕರಣದ ಆರೋಪಿ ಮುರಳಿ ಅವರನ್ನು ಬಂಧಿಸಿ ಸಂತ್ರಸ್ತ ದಲಿತ ಕುಟುಂಬಕ್ಕೆ ಪುನರ್ ವಸತಿ ಕಲ್ಪಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಆಗ್ರಹ ಪಡಿಸಿದರು.
ಮದ್ದೂರು ತಾಲೂಕಿನ ಕೋಣಸಾಲೆ ಗ್ರಾಮದಲ್ಲಿ ಮುರಳಿ ಎಂಬಾತ ಹಂದಿ ಸಾಕಾಣಿಕ ಕೇಂದ್ರದಲ್ಲಿ ದಲಿತ ಕುಟುಂಬವನ್ನು ಜೀತಕ್ಕಿರಿಸಿಕೊಂಡು ಬಲವಂತವಾಗಿ ದುಡಿಮೆ ಮಾಡಿಸಿ ಕೊಂಡಿರುವುದರ ಜೊತೆಗೆ ಊಟ ಉಪಚಾರ ಮಾಡದೆ ಆ ಕುಟುಂಬ ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡಿದ್ದಾರೆ ಎಂದು ದೂರಿದರು.
ಆ ಕುಟುಂಬದ ವ್ಯಕ್ತಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಧಾರಣವಾಗಿ ಸಾವನ್ನಪ್ಪಿದ್ದು ಇದಕ್ಕೆ ಮುರಳಿ ಎಂಬಾತನೆ ಕಾರಣವಾಗಿದ್ದಾನೆ .ಆದ್ದರಿಂದ ಕೂಡಲೇ ಆತನನ್ನು ಬಂಧಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಪುನರ್ವಸತಿ ಕಲ್ಪಿಸಬೇಕು .ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ನೀಡಬೇಕು. ಅವರ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ಜೊತೆಗೆ ಐದು ಎಕರೆ ಜಮೀನು ನೀಡಬೇಕು. ಆರೋಪಿಯಿಂದ ಆಸ್ತಿ ಜಪ್ತಿ ಮಾಡಿ, ಜೀತ ಬಿಡುಗಡೆಗೊಂಡ ಕುಟುಂಬಕ್ಕೆ ನೀಡಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಬಿ ಆನಂದ್ , ಅನಿಲ್ ಕುಮಾರ್, ಸುರೇಶ್ ಕುಮಾರ್ ಮತ್ತಿತರರಿದ್ದರು.




