ಮಂಡ್ಯ ನಗರಸಭೆ ಚುನಾವಣೆಯಲ್ಲಿ ಅಧಿಕಾರ ‘ಕೈ’ವಶ ಮಾಡಿಕೊಳ್ಳುವ ಭರದಲ್ಲಿ ಆತುರ ಪಟ್ಟ ಕಾಂಗ್ರೆಸ್ ಮುಗ್ಗರಿಸಿದೆ. ಆಡಳಿತ ರೂಢ ಕಾಂಗ್ರೆಸ್ ಪಕ್ಷದ ಅತಿಯಾದ ಆತ್ಮವಿಶ್ವಾಸ ಹಾಗೂ ಹುಂಬತನವೇ ಕಾಂಗ್ರೆಸ್ ಗೆ ಮುಳುವಾಗಿದೆ.
ನಗರಸಭೆ ಆಡಳಿತ ಚುಕ್ಕಾಣಿ ಹಿಡಿದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸೆಡ್ಡು ಹೊಡೆಯಲು ಹೋದ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ಗಣಿಗ ರವಿಕುಮಾರ್ ತಾವೇ ಮುಜುಗರ ಅನುಭವಿಸುವಂತಾಗಿದೆ. ಅತಿಯಾದ ಆತ್ಮವಿಶ್ವಾಸ ಹಾಗೂ ಹುಂಬತನದಿಂದ ನಗರಸಭೆ ಅಧಿಕಾರ ಹಿಡಿಯಲು ಹೊರಟ ಕಾಂಗ್ರೆಸ್ ಗೆ ಅದೇ ಮುಳುವಾಗಿದೆ.
ನಗರಸಭೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತವಿತ್ತು. ಮೊದಲ ಅವಧಿಗೆ ಜೆಡಿಎಸ್ ನ ಎಚ್.ಎಸ್. ಮಂಜು ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದರು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್.ಎಸ್. ಮಂಜು ಕಾಂಗ್ರೆಸ್ ಪಕ್ಷ ದಲ್ಲಿ ಗುರುತಿಸಿಕೊಂಡಿದ್ದರು. ಜಿಲ್ಲಾ ಕಾಂಗ್ರೆಸ್ ನಾಯಕರು ನಗರಸಭೆ ಅಧಿಕಾರವನ್ನು ಹಿಡಿದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಮುಜುಗರ ಉಂಟು ಮಾಡುವ ತಂತ್ರಕ್ಕೆ ಎಚ್. ಎಸ್. ಮಂಜು ತಾನೇ ದಾಳವಾಗಿ ಮುಂದೆ ಬಂದರು. ಅವರನ್ನು ಮುಂದಿಟ್ಟುಕೊಂಡು ನಗರಸಭೆ ಅಧಿಕಾರ ಹಿಡಿಯಲು ಶಾಸಕ ಗಣಿಗ ರವಿಕುಮಾರ್ ದಾಳ ಉರುಳಿಸಿದರು.

ಗುತ್ತಿಗೆದಾರ ಎಚ್.ಎಸ್. ಮಂಜು ಕೂಡ ತಾನು ಸೇರಿದಂತೆ ಇಬ್ಬರನ್ನು ತನ್ನೆಡೆಗೆ ಸೇರಿಸಿಕೊಂಡು ಪಕ್ಷೇತರರ ಜೊತೆಗೂಡಿ ಅಧಿಕಾರ ಹಿಡಿಯಲು ಮುಂದಾದರು. ಇದಕ್ಕೆ ಕಾಂಗ್ರೆಸ್ ನ ಹಿರಿಯ ಸದಸ್ಯ ಟಿ.ಕೆ. ರಾಮಲಿಂಗಯ್ಯ ವಿರೋಧ ವ್ಯಕ್ತಪಡಿಸಿ, ಜೆಡಿಎಸ್ ಸದಸ್ಯ ಮಂಜು ಮತ್ತೆ ಕಾಂಗ್ರೆಸ್ ಪಕ್ಷದ ಮೂಲಕ ಅಧ್ಯಕ್ಷನಾಗುವುದಕ್ಕೆ ಬೆಂಬಲ ನೀಡಲ್ಲ ಎಂದು ಜೆಡಿಎಸ್ ಪಾಳಯ ಸೇರಿಕೊಂಡರು. ಇದಾದ ನಂತರ ನಗರಸಭೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯವಿದ್ದ 19 ಸದಸ್ಯರ ಪೈಕಿ 18 ಸಂಖ್ಯೆ ಮಾತ್ರ ಇತ್ತು. ಇಷ್ಟಾದರೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದೇ ತರ್ತೇನೆ ನೋಡ್ತೀರಿ ಎಂದು ಮಂಜು ಹೇಳಿದ್ದನ್ನೇ ಕೇಳಿಕೊಂಡ ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ಗಣಿಗ ರವಿಕುಮಾರ್ ಕೂಡ ನಗರಸಭೆ ಅಧಿಕಾರ ಕಾಂಗ್ರೆಸ್ ಗೆ ಖಚಿತ ಎಂದು ಭಾವಿಸಿದ್ದರು.
ಜೆಡಿಎಸ್ ಪಾಳೆಯದಲ್ಲಿದ್ದ ಒಬ್ಬ ಸದಸ್ಯ ಚುನಾವಣೆಯ ದಿನ ತಮ್ಮ ಪಾಳೆಯ ಸೇರುತ್ತಾರೆ ಎಂದು ಮಂಜು ಕೂಡ ಭರವಸೆ ನೀಡಿದ್ದರು. ಈ ಹಿನ್ನಲೆಯಲ್ಲಿ ಸಚಿವ ಮತ್ತು ಶಾಸಕರು ಭಾರೀ ವಿಶ್ವಾಸ ಹೊಂದಿದ್ದರು.ಅವರ ಅತಿಯಾದ ಆತ್ಮವಿಶ್ವಾಸ ಚುನಾವಣೆಯ ಹಿಂದಿನ ದಿನದವರೆಗೂ ಇತ್ತು.
ಆದರೆ ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಅಧಿಕಾರ ಹಿಡಿಯಲಿದೆ ಎಂಬ ಭರವಸೆ ದೊರೆತ ಮೇಲೆಯೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಖಾಡಕ್ಕೆ ಇಳಿದರು.ಕೆಲ ದಿನಗಳ ಹಿಂದೆ ನಾಗಮಂಗಲ ಪುರಸಭೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಇದ್ದರೂ ಸಚಿವ ಚಲುವರಾಯಸ್ವಾಮಿ ಅಖಾಡಕ್ಕೆ ಇಳಿದು ಜೆಡಿಎಸ್ ಸದಸ್ಯರನ್ನು ತಮ್ಮ ಪಾಳೆಯಕ್ಕೆ ಸೆಳೆದು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಡಿಸುವ ಮೂಲಕ ಜೆಡಿಎಸ್ ವರಿಷ್ಟ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಸುರೇಶ್ ಗೌಡರಿಗೆ ಮುಖಭಂಗ ಮಾಡಿದ್ದರು. ಈ ಬಗ್ಗೆ ಗೊತ್ತಿದ್ದ ಕುಮಾರಸ್ವಾಮಿ ಅಲ್ಲಿಗೆ ಹೋಗಿ ಮತ ಚಲಾಯಿಸಿರಲಿಲ್ಲ.
ಆದರೆ ಮಂಡ್ಯ ನಗರಸಭೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಕೂಟ ಅಧಿಕಾರಕ್ಕೆ ಬರುವ ಮುನ್ಸೂಚನೆ ದೊರೆತ ಕುಮಾರಸ್ವಾಮಿ ಕೂಡ ಕಣಕ್ಕೆ ಇಳಿದು ತಮ್ಮ ಪಕ್ಷದ ಎಂ.ವಿ. ಪ್ರಕಾಶ್(ನಾಗೇಶ್) ಅವರನ್ನು ಅಧ್ಯಕ್ಷ ರನ್ನಾಗಿ,ಬಿಜೆಪಿಯ ಅರುಣ್ ಕುಮಾರ್ ಅವರನ್ನು ಉಪಾಧ್ಯಕ್ಷರಾಗಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗ ಆಗುವಂತೆ ಮಾಡಿದ್ದಾರೆ. ನಗರಸಭೆ ಚುಕ್ಕಾಣಿ ಹಿಡಿಯುವ ಮೂಲಕ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ಮುಜುಗರ ಸೃಷ್ಟಿಸಲು ಹೊರಟಿದ್ದ ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ಗಣಿಗ ರವಿಕುಮಾರ್ ಸ್ವತಃ ತಾವೇ ಮುಜುಗರಕ್ಕೆ ಒಳಗಾಗಿದ್ದಾರೆ.ಕಾಂಗ್ರೆಸ್ ನಾಯಕರ ಅತಿಯಾದ ಆತ್ಮವಿಶ್ವಾಸ ಹಾಗೂ ಹುಂಬತನದಿಂದ ನಗರಸಭೆ ಅಧಿಕಾರ ಕೈ ತಪ್ಪಿದೆ.




