ಉತ್ತಮ ಕ್ರೀಡಾಪಟುಗಳಿಗೆ ಉಜ್ವಲ ಭವಿಷ್ಯವಿದೆ, ಶಾಲಾ ಹಂತದಲ್ಲೇ ಕ್ರೀಡಾ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಿ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವರಾಮೇಗೌಡ ಹೇಳಿದರು.
ಮಂಡ್ಯನಗರದ ಸರ್ ಎಂ ವಿ ಕ್ರೀಡಾಂಗಣದಲ್ಲಿ ಶ್ರೀ ಲಕ್ಷ್ಮಿಜನಾರ್ಧನ ಶಿಕ್ಷಣ ಸಮಿತಿ ಟ್ರಸ್ಟ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವರು ಆಯೋಜಿಸಿದ್ದ ಮಂಡ್ಯ ನಗರ 2ನೇ ವೃತ್ತ ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮತನಾಡಿದರು.
ಆರೋಗ್ಯಕರ ಮನೋಭಾವ ಹೆಚ್ಚಿಸಿಕೊಳ್ಳಲು ಕ್ರೀಡೆಗಳು ಸಹಕಾರಿ, ಉತ್ತಮ ಕ್ರೀಡಾಪಟುಗಳಿಗೆ ಉಜ್ವಲಭವಿಷ್ಯವಿದೆ, ಸಾಧನೆ ಮಾಡುವ ಹಂಬಲ, ಹಠ ಮುಖ್ಯ, ಇಂದಿನಿಂದಲೇ ಗುರಿ ಇರಿಸಿಕೊಂಡು ಸಾಧನೆಗೆ ಮುಂದಾಗಿ ಎಂದು ನುಡಿದರು.
ಶ್ರೀಲಕ್ಷ್ಮಿಜನಾರ್ಧನ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಮಾತನಾಡಿ, ಶಾಲಾ ಶಿಕ್ಷಣ ಇಲಾಖೆಯು ನಮ್ಮ ಶಾಲೆಗೆ ಮಂಡ್ಯ ನಗರ 2ನೇ ವೃತ್ತ ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟ ಜವಾಬ್ದಾರಿ ನೀಡಿರುವುದು ಶ್ಲಾಘನೀಯ, ಮುಂದಿನ ದಿನಗಳಲ್ಲೂ ಇಲಾಖೆ ಕಾರ್ಯಗಳನ್ನು ಮಾಡಲು ಸಿದ್ದರಿದ್ದೇವೆ ಎಂದರು.
ಸೋಲು ಗೆಲುವು ಸಹಜ, ಭಾಗವಹಿಸುವುದು ಕ್ರೀಡಾ ಮನೋಭಾವ ಹೆಚ್ಚಿಸುತ್ತದೆ, ಸೋತವರು ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಗೆಲ್ಲಲು ಪ್ರಯತ್ನಿಸಿ, ಗೆದ್ದವರು ಹಿಗ್ಗದೆ, ಸೋತವರನ್ನು ಹಿಯಾಳಿಸಬಾರದು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಇಲಾಖೆ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು ಹಾಗೂ ಶ್ರೀ ಲಕ್ಷ್ಮಿ ಜನಾರ್ಧನ ಶಿಕ್ಷಣ ಸಮಿತಿ ಟ್ರಸ್ಟ್ ಟ್ರಸ್ಟಿಗಳಾದ ಹಾಲಹಳ್ಳಿ ಅಶೋಕ್, ಡಾ.ಸುರೇಶ್, ದೈಹಿಕ ಶಿಕ್ಷಣ ಇಲಾಖೆಯ ಸುದರ್ಶನ್, ಉಮೇಶ್, ರಮೇಶ್, ಮುಖ್ಯ ಶಿಕ್ಷಕಿರಾದ ಧನಲಕ್ಷ್ಮಿ, ಚಂದ್ರಮ್ಮ, ಹಿರಿಯ ಶಿಕ್ಷಕಿ ಪದ್ಮ ಶ್ರೀನಿವಾಸ್, ಆಶಾಲತಾ ಹಾಗೂ ದೈಹಿಕ ಶಿಕ್ಷಣ ಇಲಾಖೆಯ ಶಿಕ್ಷಕರು ಹಾಜರಿದ್ದರು




