Friday, September 27, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ವೈಯಕ್ತಿಕ ಸ್ವಚ್ಚತೆಯಿಂದ ಉತ್ತಮ ಆರೋಗ್ಯ : ರಶ್ಮಿ

ವೈಯಕ್ತಿಕ ಸ್ವಚ್ಚತೆ ಇದ್ದರೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಸ್ವಚ್ಚತೆ ಮತ್ತು ಶುಚಿತ್ವ ಮನೋಭಾವನೆಯನ್ನು ಬೆಳೆಸಿಕೊಂಡರೆ, ಉತ್ತಮ ಆರೋಗ್ಯ ಹೊಂದಬಹುದು  ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ರಶ್ಮಿ ಎಸ್ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಸರ್ಕಾರಿ ಬಾಲಕರ ಬಾಲ ಮಂದಿರದ ವತಿಯಿಂದ ಮಂಡ್ಯದ ಬಾಲಕರ ಬಾಲ ಮಂದಿರದಲ್ಲಿ ಸ್ವಚ್ಚತಾ ಕ್ರಿಯಾ ಯೋಜನೆಯಡಿಯಲ್ಲಿ ನಡೆದ ಮಕ್ಕಳಿಗೆ ಸ್ವಚ್ಚತಾ ಅರಿವು ಮೂಡಿಸುವ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಕಲಿಕೆಯ ಜೊತೆಗೆ ಉತ್ತಮವಾದಂತಹ ಆರೋಗ್ಯಕ್ಕಾಗಿ ಪ್ರತಿನಿತ್ಯ ಸ್ನಾನ ಮಾಡುವುದು ಶುಭ್ರವಾದ ಬಟ್ಟೆಯನ್ನು ಧರಿಸುವುದರಿಂದ ಮನಸ್ಸು ಯಾವಾಗಲೂ ಉಲ್ಲಾಸ ಭರಿತವಾಗಿರುತ್ತದೆ. ಬೇರೆಯವರು ನಮ್ಮನ್ನು ನೋಡಿದಾಗ ನಾವು ಸ್ವಚ್ಚವಾಗಿದ್ದೇವೆಂದು ಭಾವಿಸುತ್ತಾರೆ ಎಂದು ತಿಳಿ ಹೇಳಿದರು.

ಬಾಲಕರ ಬಾಲಮಂದಿರದ ಅಧೀಕ್ಷಕರಾದ ಎಂ.ಪ್ರತಿಮಾ ಮಾತನಾಡಿ, ಶುಚಿಯಾಗಿರಬೇಕು, ನೀವು ಲಕ ಲಕ ಎಂದು ಹೊಳೆಯುತ್ತಿರಬೇಕು, ಹಾದಿ ಬೀದಿಯಲ್ಲಿ ಉಗುಳದೇ, ಪ್ರತಿಯೊಬ್ಬರು ಪರಿಸರವನ್ನು ಸ್ವಚ್ಚವಾಗಿಡಬೇಕು. ಕಡ್ಡಾಯವಾಗಿ ಪ್ಲಾಸ್ಟಿಕ್ ಅನ್ನು ನಿಷೇಧ ಮಾಡುತ್ತೇವೆಂದು ಪ್ರತಿಜ್ಞೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂದಿನ ಕಾಲಘಟ್ಟಕ್ಕೆ ಆರೋಗ್ಯ ಮುಖ್ಯವಾಗಿದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದರಿಂದ ಆಸ್ಪತ್ರೆಯಿಂದ ದೂರವಿರಬಹುದು ಎಂದು ತಿಳಿಸಿದರು.

ನಂತರ ಹನಿಯಂಬಾಡಿ ಸೌಹಾರ್ದ ಸಾಂಸ್ಕೃತಿಕ ಕಲಾಸಂಘದ ಎನ್.ಶೇಖರ್ ನೇತೃತ್ವದಲ್ಲಿ ಮಕ್ಕಳಿಗೆ ಸ್ವಚ್ಚತೆ, ಶುಚಿತ್ವ, ಶಿಕ್ಷಣದ ಮಹತ್ವ, ಪರಿಸರ, ನೀರಿನ ಸದ್ಬಳಕೆ ಬಗ್ಗೆ ನೃತ್ಯ, ಹಾಡು, ನಾಟಕದ ಮೂಲಕ ಅರಿವು ಮೂಡಿಸಲಾಯಿತು. ಕಲಾವಿದರಾದ ಹೆಚ್.ಪಿ.ವೈರಮುಡಿ, ಎಸ್.ಬಸವರಾಜು, ವೈ.ವಿ.ಹೊನ್ನೇಶ್, ಹೆಚ್.ಬಿ.ರಾಮಕೃ‍ಷ್ಣ, ಬಿ.ಸಿ.ಅನುಸೂಯ ಕಾರ್ಯಕ್ರಮ ನಡೆಸಿಕೊಟ್ಟರು.

ವೇದಿಕೆಯಲ್ಲಿ ಜಾನಪದ ವಿ.ವಿ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಅಶ್ವತ್ ನಾರಾಯಣ್, ಸದಸ್ಯರಾದ ಅನುಪಮ ಕೆ.ಸಿ, ಸ್ವಾಮಿ, ಆಪ್ತ ಸಮಾಲೋಚಕರಾದ ಅಶೋಕ್ ಪಿ, ಗೃಹ ಪಾಲಕರಾದ ಪ್ರತಿಭಾ, ಮಕ್ಕಳ ಕಲ್ಯಾಣ ಸಮಿತಿಯ ಡಿಇಓ ರೂಪಶ್ರೀ, ಸಿಬ್ಬಂದಿ ಕೌಶಿಕ್, ಮಂಜುಳಮ್ಮ, ಸೌಮ್ಯ, ರಾಧ, ಪುನೀತ್ ಕುಮಾರ್, ಸುಮಂತ್, ಚನ್ನೇಶ್ ಹಾಗೂ ನವೀನ್ ಉಪಸ್ಥಿತರಿದ್ದರು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!