Friday, September 27, 2024

ಪ್ರಾಯೋಗಿಕ ಆವೃತ್ತಿ

ಭಗತ್ ಸಿಂಗನ ಬಾಂಬು ಸ್ಪೋಟಿಸಲಿ, ಪ್ರತಿಮನದ ಪಡಸಾಲೆಯಲ್ಲಿ

ಶಿವಸುಂದರ್

ಭಗತ್ ಸಿಂಗ್ ಎಂದರೆ
ವ್ಯಕ್ತಿಯ ಹೆಸರೇನು ?
ಗತಿಸಿದ ಕಾಲವೇನು?

ಭಗತ್ ಸಿಂಗ್ ಎಂದರೆ..

ಪ್ರತಿಯುಗದ
ಪ್ರತಿಮನದ
ಪ್ರತಿಕ್ಷಣದ
ಕ್ರಾಂತಿಯ ಗಳಿಗೆ..

ಭಗತ್ ಸಿಂಗ್ ಎಂದರೆ..

ಬಿಳಿ ಸುಳ್ಳುಗಳು ಸೃಷ್ಟಿಸುವ
ಬೂದು ಮೌನವನ್ನು
ಬಾಂಬಿನ ಸದ್ದಿನಿಂದ
ಬೇಧಿಸಿದ ಕಡು ಸತ್ಯದ ಕ್ಷಣ…

ಭಗತ್ ಸಿಂಗ್ ಎಂದರೆ..

ಸಂಧಾನ ಸಂಭ್ರಮವನ್ನು
ಕ್ರಾಂತಿಘೋಷಣೆಯು
ಬಯಲು ಮಾಡಿದ ಗಳಿಗೆ ..

ಭಗತ್ ಸಿಂಗ್ ಎಂದರೆ

ಸಿಂಗರಿಸಿದ ಸುಳ್ಳುಗಳ ವಿರುದ್ಧ
ನಿಶಸ್ತ್ರ ಸತ್ಯಗಳ
ನಿರಂತರ ಸಮರ ..

ಇದೋ ಈಗ
ಇತಿಹಾಸ ಸುತ್ತು ಸುತ್ತಿ
ಮತ್ತೆ ಮರಳಿದೆ….

ಕರಿಬಿಳಿಯ ಕಲಬೆರಕೆಯ
ಮಬ್ಬುಗತ್ತಲಿಗೆ ..
ಸೂರ್ಯೋದಯವೆಂದು ಹೆಸರಿಡಲಾಗಿದೆ…!

ಕಾವಿಲ್ಲದ ಬೆಳಕಿಂದ
ಮತ್ತೆ
ಕತ್ತಲು ಹೆಪ್ಪುಗಟ್ಟುತ್ತಿದೆ…

ಭಗತ್ ಸಿಂಗನ ಗಳಿಗೆ
ಮತ್ತೆ ಮರಳಿದೆ..

ಸುಳ್ಳಿನ ಸಂಸತ್ತಿನಲ್ಲಿ
ಸತ್ಯ ಸ್ಪೋಟಿಸಬೇಕಿದೆ ..

ಬೆಚ್ಚಗಿನ ಕೆಂಪು
ಕಂಫರ್ಟ್ ಜೋನುಗಳಲ್ಲಿ
ತುಸುವಾದರೂ
ಚಡಪಡಿಕೆ ಹುಟ್ಟಬೇಕಿದೆ ..

ರಾಜೀಕೋರ
ಮೌನ ಸ್ಮಶಾನದಲ್ಲಿ

ಭಗತ್ ಸಿಂಗನ ಬಾಂಬು ಸ್ಪೋಟಿಸಿ
ಸತ್ಯ ಮಾತಾಡಬೇಕಿದೆ ..

ಭಗತ್ ಸಿಂಗನ ಗಳಿಗೆ
ಮತ್ತೆ ಮರಳಿದೆ

(ಇಂದು ಸೆಪ್ಟೆಂಬರ್ 27)
ಭಗತ್ ಸಿಂಗ್ ಅಂದರೆ ಕ್ರಾಂತಿ ಹುಟ್ಟಿದ ದಿನ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!