Saturday, November 21, 2026

ಪ್ರಾಯೋಗಿಕ ಆವೃತ್ತಿ

”ಗಾಂಜಾ ಹೊಡೆಯುವ ಜನರಿಗೆ ಗಾಂಧೀ ಅರ್ಥವಾಗುವುದಿಲ್ಲ” ; ವಿವೇಕಾನಂದ

ಇತ್ತೀಚಿನ ದಿನಗಳಲ್ಲಿ ಕೆಲವು ಕಿಡಿಗೇಡಿ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಗಾಂಧಿಯನ್ನು ಕುರಿತು ಅವಹೇಳನಕಾರಿಯಾದ ಪೋಸ್ಟ್ ಗಳನ್ನು ಹರಿಯ ಬಿಡುತ್ತಿದ್ದಾರೆ, ಇಂತಹ ಗಾಂಜಾ ಹೊಡೆಯುವ ಯುವಕರಿಗೆ ಗಾಂಧಿ ಎಂದಿಗೂ ಅರ್ಥವಾಗುವುದಿಲ್ಲ ಎಂದು ಸಾಮಾಜಿಕ ಚಿಂತಕ ಹೆಚ್.ಕೆ. ವಿವೇಕಾನಂದ ಮಾರ್ಮಿಕವಾಗಿ ನುಡಿದರು.

ಮಂಡ್ಯನಗರದ ಗಾಂಧಿಭವನದಲ್ಲಿ ಚಿತ್ರಕೂಟದ ವತಿಯಿಂದ ಭಾನುವಾರ ಸಂಜೆ ನಡೆದ ಹಾಡು, ಹಸೆ, ಕವಿತೆಗಳ ಜತೆ ಮಾತುಕತೆ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಕೇವಲ 75-80 ವರ್ಷಗಳ ಹಿಂದೆ ಇಂದು ಕಾರ್ಯಕ್ರಮಕ್ಕೆ ಗಾಂಧೀಜಿ ಬರ್‍ತಾರೆ ಅಂದ್ರೆ ಲಕ್ಷಾಂತರ ಜನರು ಸೇರುತ್ತಿದ್ದರು, ಆದರೆ ಈಗ ಗಾಂಧಿ ಕಾರ್ಯಕ್ರಮ ಮಾಡಿದರೆ ಮಂಡ್ಯದಲ್ಲಿ 60 ಜನ ಸೇರಿದ್ಧಾರೆ, ಈಗ ಜನರು ಬಿಗ್ ಬಾಸ್, ಕಾಮಿಡಿ ಕಿಲಾಡಿಗಳಂತಹ ಕಾರ್ಯಕ್ರಮಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಸೇರುತ್ತಾರೆ, ಇಂದಿನ ಯುವಜನತೆ ಗಾಂಜಾ ಹೊಡೆಯುವ ಹಂತಕ್ಕೆ ಬಂದು ನಿಂತಿದ್ದು, ಅವರಿಗೆ ಗಾಂಧಿ ಹೇಗೆ ಅರ್ಥವಾಗಲು ಸಾಧ್ಯ ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎಳನೀರು ಕುಡಿಯುತ್ತಿದ್ದ, ನಂತರ ದಶಕಗಳಲ್ಲಿ ಪೆಪ್ಸಿ, ಕೋಕೋ ಕೋಲಾ ಗಳನ್ನು ಕುಡಿಯವಲು ಪ್ರಾರಂಭಿಸಿದರು, ಈಗ ಅವುಗಳ ಜಾಗದಲ್ಲಿ ಬಿಯರ್, ಬ್ರಾಂದಿಗಳು ಬಂದು ಕೂತಿವೆ, ಇಂತಹ ಗಾಂಜಾ ಹೊಡೆಯುವ ಜನರಿಗೆ ಹೇಗೆ ಗಾಂಧಿ ಆರ್ಥವಾಗುತ್ತಾರೆ ಎಂದು ಪ್ರಶ್ನಿಸಿದರು.

ಇವತ್ತು ಗಾಂಧಿಯ ಪರಿಚಯವೇ ಇಲ್ಲದ 20 ವರ್ಷದ ಅಸುಪಾಸಿನಲ್ಲಿರುವ ವ್ಯಕ್ತಿ ಗಾಂಧಿ ಕುರಿತು ಅವಹೇಳನ ಮಾಡುತ್ತಾನೆ, ಇಂತಹ ಕಲ್ಮಶ ತುಂಬಿರುವ ವ್ಯಕ್ತಿಗೆ ಗಾಂಧಿ ಹೇಗೆ ಅರ್ಥವಾಗುತ್ತಾರೆ ಎಂದು ಕಿಡಿಗೇಡಿಗಳ ವಿರುದ್ದ ಹರಿಹಾಯ್ದರು.

ಪ್ರಸ್ತುತ ದೇಶದ ಅತ್ಯುನ್ನತ ಪರೀಕ್ಷೆಯಾದ ಎಎಎಸ್, ಐಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಧಿಕಾರಿಗಳಾದ 25ರ ವಯಸ್ಸಿನ ಯುವಕರು, ಭಿಕ್ಷಾಟನೆ ಹಾಗೂ ವೇಶ್ಯಾವಾಟಿಕೆ ಮಾಡುವವರಿಂದ ಲಂಚಕ್ಕೆ ಕೈಯೊಡ್ಡುತ್ತಾರೆ. ಇಂತಹ ವ್ಯವಸ್ಥೆಯನ್ನು ಸರಿಪಡಿಸಲು ಗಾಂಧಿ ಮಾರ್ಗದಿಂದ ಮಾತ್ರ ಸಾಧ್ಯವೆಂದು ಹೇಳಿದರು.

ಶಿಕ್ಷಣ ತಜ್ಞ ವೋಡೇ ಪಿ.ಕೃಷ್ಣ ಸಮಾರಂಭ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರಂಗಾಯಣ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ, ಲಂಕೇಶ್ ಪತ್ರಿಕೆ ಅಂಕಣಕಾರ ಬಿ. ಚಂದ್ರೇಗೌಡ, ನಾಟಕ ಅಕಾಡೆಮಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಮಹಾಮನೆ ಭಾಗವಹಿದ್ದರು.

,ಈ ದಿನ.ಕಾಮ್ ವಿಭಾಗ ಮುಖ್ಯಸ್ಥ ಡಾ.ಬಿ.ಸಿ. ಬಸವರಾಜು ಹಾಗೂ ಸಹ ಪ್ರಾಧ್ಯಾಪಕರಾದ ಡಾ. ಶಿಲ್ಪಶ್ರೀ ಹರವು ವಿಶೇಷ ಉಪನ್ಯಾಸ ನೀಡಿದರು. ಹರವು ದೇವೇಗೌಡರು ಕಾರ್ಯಕ್ರಮದ ನಿರೂಪಣೆ ಮಾಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ