Friday, October 18, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ದರಾಮಯ್ಯ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲಿ ಮಹತ್ವಾಕಾಂಕ್ಷಿ “ಕಾವೇರಿ ಐದನೇ ಹಂತದ ಯೋಜನೆ” ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬುಧವಾರ ಲೋಕಾರ್ಪಣೆಗೊಳಿಸಿದರು.

BBMP ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷಿ ಕಾವೇರಿ ಐದನೇ ಹಂತದ ಯೋಜನೆಗೆ ತೊರೆಕಾಡನಹಳ್ಳಿಯಲ್ಲಿನ ಬೆಂಗಳೂರು ಜಲಮಂಡಳಿ ಜಲಶುದ್ದೀಕರಣ ಘಟಕದ ಬಟನ್ ಪ್ರೆಸ್(ಗುಂಡಿ ಒತ್ತುವುದರ) ಮಾಡುವುದರ ಮೂಲಕ ಬುಧವಾರ ಲೋಕಾರ್ಪಣೆಗೊಳಿಸಿದರು. ಇದೇ ಸಂದರ್ಭದಲ್ಲಿ ತುಂಬಿದ ಕೊಡಗಳ ನೀರನ್ನು ಕಾವೇರಿ ಮಾತೆಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಜೈಕಾ ಪ್ರತಿನಿಧಿಗಳು, ಸಚಿವರುಗಳು,ಶಾಸಕರುಗಳು, ಚುನಾಯಿತ ಪ್ರತಿನಿಧಿಗಳು,ಅಧಿಕಾರಿಗಳು ಸೇರಿದಂತೆ ಅನೇಕರು ಇದ್ದರು. ಜೈಕಾ(ಜಪಾನ್ ಇಂಟರ್ ನ್ಯಾಷನಲ್ ಕೋ ಅಪರೇಶನ್ ಏಜೆನ್ಸಿ) ಸಹಭಾಗಿತ್ವದಲ್ಲಿ 4336 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಯೋಜನೆ ಇದಾಗಿದೆ.

ಲೋಕಾರ್ಪಣೆಗೊಳಿಸಿದ ನೆನಪಿಗಾಗಿ ಮುಖ್ಯಮಂತ್ರಿಗಳು,ಉಪಮುಖ್ಯಮಂತ್ರಿಗಳ ಜೊತಗೂಡಿ ಘಟಕದ ಆವರಣದಲ್ಲಿ ಸಸಿ ನೆಟ್ಟರು.

ಕಾವೇರಿ 5 ನೇ ಹಂತ ಕುಡಿಯುವ ನೀರಿನ ಯೋಜನೆ ಪ್ರಮುಖಾಂಶಗಳು

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ನೀರಿನ ಬೇಡಿಕೆಯನ್ನು ಸಮರ್ಪಕವಾಗಿ ಪೂರೈಸುವ ನಿಟ್ಟಿನಲ್ಲಿ ಈ ಯೋಜನೆ ಬಹಳ ಪ್ರಮುಖ್ಯತೆಯನ್ನು ಪಡೆದುಕೊಂಡಿದೆ. ಸುಮಾರು ಒಂದೂವರೆ ಕೋಟಿಯಷ್ಟು ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರು ನಗರಕ್ಕೆ ಅಗತ್ಯವಿರುವುದು 2,250 ಎಂ.ಎಲ್.ಡಿಯಷ್ಟು ನೀರು. ಆದರೆ ನಾಲ್ಕೂ ಹಂತಗಳ ಕಾವೇರಿ ನೀರಿನ ಯೋಜನೆಯಿಂದ ನಮಗೆ ಲಭ್ಯವಾಗುತ್ತಿದ್ದುದ್ದು ಕೇವಲ 1450 ಎಂ.ಎಲ್.ಡಿಯಷ್ಟು ಮಾತ್ರ. ಇದ್ದಂತಹ ನೀರಿನ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕಾವೇರಿ 5 ನೇ ಹಂತದ ಯೋಜನೆಯನ್ನು 2014 ರಲ್ಲಿ ಯೋಜಿಸಲಾಯಿತು. 4336 ಕೋಟಿ ರೂಪಾಯಿ ವೆಚ್ಚದ ಈ ಬೃಹತ್ ಯೋಜನೆ, ದೇಶದ ಅತಿದೊಡ್ಡ ಕುಡಿಯುವ ನೀರಿನ ಯೋಜನೆಯಾಗಿದೆ. ಒಂದೇ ಹಂತದಲ್ಲಿ ಅಗಾಧ 775 ಎಂ.ಎಲ್.ಡಿಯಷ್ಟು ನೀರನ್ನ ಸರಬರಾಜು ಮಾಡುವ ಸಾಮರ್ಥ್ಯ ಹೊಂದಿದೆ.

ಬೃಹತ್ ಬೆಂಗಳೂರು ವ್ಯಾಪ್ತಿಯಲ್ಲಿರುವ 110 ಹಳ್ಳಿಗಳಿಗೆ ಸಮರ್ಪಕ ನೀರು ಸರಬರಾಜು ಸಾಧ್ಯವಾಗಲಿದೆ. ಮನೆ ಮನೆಗೂ ಕಾವೇರಿ ನೀರು.. ಇದು ಸಮೃದ್ದ ಬೆಂಗಳೂರು ಧ್ಯೇಯವಾಕ್ಯದ ಅಡಿಯಲ್ಲಿ ಯೋಜನೆ ಲೋಕಾರ್ಪಣೆಯಾಗಿದೆ.

ಅತ್ಯಾಧುನಿಕ ಪ್ರವಾಹ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದರಿಂದ ನಿರಂತರವಾಗಿ ಕಾರ್ಯಾಚರಣೆ ಸಾಧ್ಯವಾಗಲಿದೆ. ಕಾವೇರಿ ಐದನೇ ಹಂತದ ಯೋಜನೆಯಲ್ಲಿ ಟಿ.ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಮೂರು ಅತ್ಯಾಧುನಿಕ ತಂತ್ರಜ್ಞಾನದ ಸುಧಾರಿತ ಬೂಸ್ಟರ್ ಪಂಪಿಂಗ್ ಕೇಂದ್ರಗಳನ್ನು ನಿರ್ಮಿಸಲಾಗಿದೆ.

ಈ ಪಂಪಿಂಗ್ ಕೇಂದ್ರಗಳ ಸಹಾಯದಿಂದ ಸುಮಾರು 110 ಕಿಲೋಮೀಟರ್ ದೂರದಿಂದ 500 ಹಾಗೂ 2200 ಎಂಎಂನಷ್ಟು ವ್ಯಾಸದ ಬೃಹತ್ ಉಕ್ಕಿನ ಪೈಪ್ಗಳ ಮೂಲಕ ಕಾವೇರಿ ನೀರನ್ನು 450 ಮೀಟರ್ ಎತ್ತರಕ್ಕೆ ಹರಿಸಿ (ಸುಮಾರು 50 ಅಂತಸ್ತಿನ ಕಟ್ಟಡದಷ್ಟು ಎತ್ತರ) ಬೆಂಗಳೂರು ನಗರಕ್ಕೆ ನೀರನ್ನು ಪೂರೈಸಲಾಗುತ್ತದೆ. ಕಾವೇರಿ 5ನೇ ಹಂತದ ಯೋಜನೆಗೆ 1,45,000 ಮೆಗಾ ಟನ್ ಸ್ಟೀಲ್ ಪ್ಲೇಟ್ಗಳ ಬಳಕೆ ಮಾಡಲಾಗಿದೆ. 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಕಾಂಕ್ಷೆಯ ಯೋಜನೆ ಪೂರೈಸಲು 2.4 ಕೋಟಿ ಮಾನವ ಗಂಟೆಗಳ ಶ್ರಮ ಬಳಕೆಯಾಗಿದೆ.

ಈ ಮಹತ್ವಾಕಾಂಕ್ಷಿ ಯೋಜನೆ ಬೃಹತ್ ಬೆಂಗಳೂರು ನಗರದ ನೀರಿನ ಬೇಡಿಕೆಯನ್ನ ಗಣನೀಯವಾಗಿ ನಿಭಾಯಿಸುವ ಸಾಮರ್ಥ್ಯ ಪಡೆದುಕೊಳ್ಳಲಿದೆ. ಅಲ್ಲದೇ, ಬೆಂಗಳೂರಿನ ಪ್ರತಿ ಮೂಲೆ ಮೂಲೆಗೂ, ಮನೆ ಮನೆಯ ಬಾಗಿಲಿಗೂ ಜೀವ ಜಲ ಕಾವೇರಿಯನ್ನು ತಲುಪಿಸಲಿದೆ.

ಕಾವೇರಿ 5ನೇ ಹಂತದ ಕುಡಿಯುವ ನೀರು ಯೋಜನೆ ಯಿಂದ ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಟಿ.ದಾಸರಹಳ್ಳಿ, ಮಹದೇವಪುರ, ಯಲಹಂಕ, ರಾಜರಾಜೇಶ್ವರಿನಗರ ಹಾಗೂ ಬೊಮ್ಮನಹಳ್ಳಿ ವಲಯದ ವಿವಿಧ ಹಳ್ಳಿಗಳ ಮನೆ ಮನೆಗೂ ಸೇರಿದಂತೆ ಬೆಂಗಳೂರಿನ ಮೂಲೆ ಮೂಲೆಗೂ ಕಾವೇರಿ ನೀರು ಸರಬರಾಜು ಆಗಲಿದೆ.

ಜಲ ಮಂಡಳಿಯಿಂದ ಬೆಂಗಳೂರು ನಗರದಲ್ಲಿ 10.64 ಲಕ್ಷ ಕಾವೇರಿ ನೀರಿನ ಸಂಪರ್ಕ ನೀಡಲಾಗಿದೆ. ಕಾವೇರಿ 5ನೇ ಹಂತದ ಯೋಜನೆ ಜಾರಿ ಬಳಿಕ 4 ಲಕ್ಷ ಹೊಸ ಸಂಪರ್ಕ ನೀಡಲಾಗುತ್ತಿದೆ.

ಇದುವರೆಗೆ ಪ್ರತಿ ತಿಂಗಳು ಬೆಂಗಳೂರಿನಲ್ಲಿ 1.58 ಟಿಎಂಸಿ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಕಾವೇರಿ 5ನೇ ಹಂತದ ಯೋಜನೆ ಅನುಷ್ಠಾನ ಬಳಿಕ ಮಾಸಿಕವಾಗಿ 2.4 ಟಿಎಂಸಿ ನೀರು ಸರಬರಾಜು ಆಗಲಿದೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!