ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲಾ ಕಾಲೇಜು ಶಿಕ್ಷಕರರು ಮತ್ತು ನೌಕರರ ಸಂಘದ ವತಿಯಿಂದ ನಾಳೆ ನ. 1ರಂದು ಕರಾಳ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಹಮ್ಮಿಕೊಳ್ಳಲಾಗಿದೆ.
ನವೆಂಬರ್ ತಿಂಗಳು ಬಂದಾಗ ಕರ್ನಾಟಕ ಸರ್ಕಾರಕ್ಕೆ ಮತ್ತು ಕರ್ನಾಟಕದಲ್ಲಿರುವ ಎಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಇನ್ನಿತರೆ ಎಲ್ಲಾ ಕನ್ನಡಪರ ಸಂಘಟನೆ ಗಳಿಗೆ ಕನ್ನಡಭಾಷೆಯ ಮೇಲೆ ಅಪಾರವಾದ ಅಭಿಮಾನ ಮತ್ತು ಸ್ವಾಭಿಮಾನ ತುಂಬಿ ಬರುತ್ತದೆ. ಆದರೆ ಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನೇ ಉಳಿಸುತ್ತಿಲ್ಲ, ಹೀಗಿರುವಾಗ ಯಾವ ಅಭಿಮಾನದ ಕನ್ನಡ ರಾಜ್ಯೋತ್ಸವ ? ಆಚರಣೆ ಮಾಡಬೇಕೆಂದು ಶಿಕ್ಷಕರು ಪ್ರಶ್ನಿಸಿದ್ದಾರೆ.
ಅನುದಾನ ರಹಿತ ಕನ್ನಡ ಮಾದ್ಯಮ ಶಾಲಾ ಕಾಲೇಜುಗಳಿಗೆ ಅನುದಾನವನ್ನು ಕೊಡದೆ 29 (1995 ರಿಂದ) ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಸಹ ಆ ಶಾಲೆಗಳ ಸಮಸ್ಯೆಯನ್ನು ಬಗೆ ಹರಿಸದೆ ಕನ್ನಡ ಶಾಲೆಗಳು ಪ್ರತಿವರ್ಷ ಮುಚ್ಚುತ್ತಿವೆ. ಆ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕರು ಬೀದಿ ಪಾಲಗಿದ್ದಾರೆ. ಆ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳಾದ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ, ಮೊಟ್ಟೆ, ಇತರೆ ಯಾವುದು ದೊರೆಯುತ್ತಿಲ್ಲ. ಇಂತಹ ಸನ್ನಿವೇಶ ಕರ್ನಾಟಕದಲ್ಲಿರುವಾಗ ನಾವೇಕೆ ಕನ್ನಡ ರಾಜ್ಯೋತ್ಸವ ಆಚರಿಸಬೇಕು ? ಎಂದು ಕಿಡಿಕರಿದ್ದಾರೆ.
ಸರ್ಕಾರದ ಮಂತ್ರಿಗಳಿಗಾಗಲಿ, ಇಲಾಖೆಯ ಅಧಿಕಾರಿಗಳಾಗಲಿ ಈ ಕನ್ನಡ ಶಾಲೆಗಳ ಮೇಲೆ ಸ್ವಲ್ಪವೂ ಕಾಳಜಿ ಇಲ್ಲ. ನಮ್ಮ ಸಂಘಟನೆಯು ನಿರಂತರವಾಗಿ 15 ವರ್ಷದಿಂದ ಹೋರಾಟ ಮಾಡಿದರೂ ಯಾವುದೇ ಕ್ರಮಕೈಗೊಂಡಿಲ್ಲ.ಆದ್ದರಿಂದ ನವೆಂಬರ್ 1 ರಂದು ಕರ್ನಾಟಕ ರಾಜ್ಯಾದ್ಯಂತ ಕಪ್ಪು ಭಾವುಟ ಹಾರಿಸುವ ಮೂಲಕ ಕರಾಳ ಕನ್ನಡ ರಾಜ್ಯೋತ್ಸವವನ್ನು ರಾಜ್ಯದ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಆಚರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




