ಮಂಡ್ಯ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಅಕ್ರಮ ಜೂಜು ಅಡ್ಡೆಗಳು ಕ್ರಿಕೆಟ್ ಬೆಟ್ಟಿಂಗ್, ಹುಕ್ಕಾ ಸರಬರಾಜು ಹಾಗೂ ಜೂಜು ದಂಧೆಗಳನ್ನು ತಡೆಗಟ್ಟುವಂತೆ ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಮಂಡ್ಯದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು.
ಕರುನಾಡು ಸೇವಕರು ಸಂಘಟನೆಯ ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣ, ನಗರ ಸಂಚಾಲಕ ಚಂದ್ರು, ಮೃತನ ತಂದೆ ಮಾದಪ್ಪ, ಚಿತ್ರಕೂಟದ ಅರವಿಂದ ಪ್ರಭು, ಕೆಂಪೇಗೌಡ ಒಕ್ಕಲಿಗರ ಸಂಘದ ಸತ್ಯಮೂರ್ತಿ, ಸಿಐಟಿಯು ಸಿ.ಕುಮಾರಿ, ಕೃಷ್ಣೇಗೌಡ, ಬೂದನೂರು ಸತೀಶ್, ವಕೀಲ ರಾಮಯ್ಯ, ಬಾಬು ಸೇರಿದಂತೆ ವಿವಿಧ ಸಂಘಟನೆಯ ಕಾರ್ಯಕರ್ತರು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ, ನಂತರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.

ಮಂಡ್ಯ ತಾಲೂಕಿನ ಬೂದನೂರು ಗ್ರಾಮದ ತ್ಯಾಗ ಎಂಬ ಯುವಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಸುಲಭವಾಗಿ ತಳ್ಳಿ ಹಾಕಬಿಡಬಹುದಾದ ಪ್ರಕರಣ ಎನಿಸಿಬಹುದಾದರೂ, ಆತ್ಮಹತ್ಯೆಗೆ ಕಾರಣವಾಗಿರುವ ಅಂಶಗಳು ನಾಗರೀಕ ಸಮಾಜದ ಸ್ವಾಸ್ಥ್ಯವನ್ನು ಒಳಗಿನಿಂದಲೇ ಹಾಳು ಮಾಡುವಂತವು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಕ್ರಿಕೆಟ್ ಬೆಟ್ಟಿಂಗ್ ಗದ್ದೆ ಬಯಲುಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ಇಸ್ಪೀಟು ಜೂಜುಗಳು ನಗರ ಹಾಗೂ ಗ್ರಾಮೀಣಾ ಭಾಗದ ಸಾವಿರಾರು ಯುವಕರನ್ನು ಲಕ್ಷಾಂತರ ರೂಪಾಯಿ ಸಾಲದ ಬಲೆಗೆ ಕೆಡವಿದೆ. ಮೃತ ತ್ಯಾಗ ಸಹ ಈ ರೀತಿಯ ಕರಾಳ ದಂಧೆ ಗೆ ಸಿಲುಕಿ ಸರಿಸುಮಾರು ಒಂದುವರೆ ಕೋಟಿ ರೂಪಾಯಿ ಸಾಲದ ಬಲೆಗೆ ಸಿಲುಕಿದ್ದ. ಕೊನೆಗೆ ಬೆಟ್ಟಿಂಗ್ ಧಂಧೆಕೋರರು, ಇಸ್ಪೀಟು ಜೂಜು ಮಾಫಿಯದವರ ಒತ್ತಡ ತಾಳಲಾರದೆ ಕಡೆಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕಿಡಿಕಾರಿದರು.
ಮಂಡ್ಯ ಜಿಲ್ಲೆಯಲ್ಲಿ ಅತ್ಯಂತ ವ್ಯವಸ್ಥಿತ ಹಾಗೂ ಸಂಘಟಿತವಾಗಿ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಗದ್ದೆ ಬಯಲುಗಳ ಜೂಜು ಅಡ್ಡೆಗಳಿಗೆ ರಾಜಕೀಯ ನಾಯಕರು ಹಾಗೂ ಪೋಲಿಸ್ ಇಲಾಖೆಯೇ ಮಹಾ ಪೋಷಕರು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿರುವುದು ಸುಳ್ಳೇನಲ್ಲ. ಈ ದಂಧೆಕೋರರಿಂದ ನಿಯಮಿತವಾದ ಕಪ್ಪ ಕಾಣಿಕೆ ಪೋಲಿಸ್ ಠಾಣೆಗಳಿಗೆ ಸಂದಾಯವಾಗುತ್ತಿರುವುದರಿಂದಲೆ ಈ ಧಂಧೆಗಳನ್ನು ಸುಗಮವಾಗಿ ನಡೆಸಲು ಸಾಧ್ಯವಾಗಿದೆ ಎಂಬುದು ಜಿಲ್ಲೆಯ ಜನರ ಗ್ರಹಿಕೆಯಾಗಿದೆ. ಇದಲ್ಲದೆ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ವ್ಯಾಪಕವಾಗಿರುವ ಅಕ್ರಮ ಮದ್ಯ ಮಾರಾಟ, ಹುಕ್ಕಾ ಸರಬರಾಜು ನಾಗರೀಕ ಸಮಾಜವನ್ನು ದಿಗ್ಬ್ರಮೆ ಹುಟ್ಟಿಸುವಂತೆ ಮಾಡಿದೆ ಎಂದು ಕಿಡಿಕಾರಿದರು.
ಮಂಡ್ಯದ ರೈತರು ಕೃಷಿ ನಷ್ಟದ ಜತೆಗೆ ವ್ಯವಸ್ಥೆ ಸೃಷ್ಟಿಸಿರುವ ಈ ಹೊಡೆತದಿಂದಲೂ ಬಲಿಪಶುವಾಗುತ್ತಿದ್ದಾರೆ. ಈದಂಧೆಕೋರರ ಹಾವಳಿಯಿಂದ ರೈತಾಪಿಗಳು ತಮ್ಮ ವಂಶಪಾರಂಪರ್ಯ ಕೃಷಿ ಭೂಮಿಯನ್ನು ಕಳೆದುಕೊಳ್ಳುವಂತ ಸ್ಥಿತಿ ಸೃಷ್ಟಿಯಾಗಿದೆ. ಸಾವಿರಾರು ಯುವಕರು ಊರು ತೊರೆಯುವಂತ ಇಲ್ಲವೆ ಆತ್ಮಹತ್ಯೆಯ ದಾರಿ ಹಿಡಿಯುವಂತ ವಾತಾವರಣ ನಿರ್ಮಾಣವಾಗಿದೆ. ನಾಗರೀಕರಿಗೆ ಆತ್ಮವಿಶ್ವಾಸ ತುಂಬಬೇಕಿರುವ ಇಲಾಖೆಯೆ ಅಪಾದಿತರ ಜತೆ ನಿಂತಿರುವುದು ನಾಚಿಕೆಗೇಡಿನ ಪರಮಾವಧಿಯಾಗಿದೆ ಎಂದು ಕಿಡಿಕಾರಿದರು.
ಅಮಾನತ್ತಿಗೆ ಆಗ್ರಹ
ಬೂದನೂರು ಯುವಕನ ಆತ್ಮಹತ್ಯೆ ಘಟನೆಯಲ್ಲಿ ಪೋಲಿಸರ ವೈಫಲ್ಯದ ಕಾರಣಕ್ಕೆ ಗ್ರಾಮಾಂತರ ಠಾಣೆ ಅರಕ್ಷಕ ನಿರೀಕ್ಷಕರನ್ನು ಅಮಾನತ್ತು ಮಾಡಬೇಕು, ಈ ಮೂಲಕ ಬೆಟ್ಟಿಂಗ್ ಹಾಗೂ ಜೂಜು ಮಾಫಿಯಾಕ್ಕೆ ಬಲವಾದ ಸಂದೇಶ ರವಾನಿಸಬೇಕು ಎಂದು ಆಗ್ರಹಿಸಿದರು.
ಬೆಟ್ಟಿಂಗ್ ಧಂದೆಕೋರರು ಹಾಗೂ ಗದ್ದೆ ಬಯಲು ಜೂಜೂಕೋರರರನ್ನು ಮುಂದಿನ ಹದಿನೈದು ದಿನಗಳೊಳಗೆ ತಹಬದಿಗೆ ತರಬೇಕು. ತಪ್ಪಿದಲ್ಲಿ ಮಂಡ್ಯ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳೊಗೂಡಿ ಅನಿರ್ದಿಷ್ಟವಧಿ ಧರಣಿ ಆರಂಭಿಸಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಅಲ್ ಇಂಡಿಯಾ ಲಾಯರ್ಸ್ ಯೂನಿಯನ್ ಮಂಡ್ಯ ಜಿಲ್ಲಾಧ್ಯಕ್ಷ ಬಿ.ಟಿ.ವಿಶ್ವನಾಥ್, ರೈತ ಸಂಘದ ತಾಲ್ಲೂಕ ಅಧ್ಯಕ್ಷ ಚಂದ್ರುಶಿವಳ್ಳಿ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಹೆಚ್.ಡಿ. ಜಯರಾಂ, ರೈತರ ಶಾಲೆ ಸಂಸ್ಥಾಪಕ ಪ್ರೊ.ಸತ್ಯಮೂರ್ತಿ ಗಂಜಾಂ ಸೇರಿದಂತೆ ರೃತ ಸಂಘದ ಕಾರ್ಯಕರ್ತರು ಪಾಲ್ಲೊಂಡಿದ್ದರು.




