ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಕಾಲಭೈರವೇಶ್ವರ ದೇವಸ್ಥಾನಕ್ಕೆ ದಲಿತರು ಪ್ರವೇಶ ಮಾಡಿ ಪೂಜೆ ಸಲ್ಲಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸವರ್ಣೀಯರು ದೇಗುಲದಲ್ಲಿದ್ದ ಉತ್ಸವ ಮೂರ್ತಿಯನ್ನು ಹೊರಗೆ ತಂದಿದ್ದಲ್ಲದೆ, ದೇವಸ್ಥಾನದ ನಾಮಫಲಕವನ್ನು ಒಡೆದು ಹಾಕಿ ಕ್ರೂರ ಅಸ್ಪೃಶ್ಯತೆ ಆಚರಿಸಿದ್ದಾರೆ.
ಹನಕೆರೆಯ ಕಾಲಭೈರವೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿದ್ದು, ಎಲ್ಲಾ ಜಾತಿ, ಧರ್ಮದವರು ಪ್ರವೇಶ ಮಾಡಬಹುದು. ಹೀಗಿದ್ದರೂ ಹನಕೆರೆ ಗ್ರಾಮದ ಸವರ್ಣೀಯರು ದಲಿತರು ಈ ದೇವಾಲಯಕ್ಕೆ ಪ್ರವೇಶ ಮಾಡಬಾರದು ಎಂದು ಪಟ್ಟು ಹಿಡಿದು ಗಲಾಟೆ ಮಾಡಿದ್ದಾರೆ. ಇದಕ್ಕೆ ಕ್ಯಾರೇ ಎನ್ನದ ದಲಿತರು ದೇವಾಲಯ ಪ್ರವೇಶಿಸುತ್ತಿದ್ದಂತೆ ಆಕ್ರೋಶಗೊಂಡ ಸವರ್ಣೀಯರು ಹಾಗೂ ಯುವಕರು ದೇವಾಲಯದ ಒಳ ನುಗ್ಗಿ ದೇವರ ಉತ್ಸವಮೂರ್ತಿಯನ್ನು ಹಾಗೂ ದೇವಾಲಯಕ್ಕೆ ಅಳವಡಿಸಲು ತಂದಿದ್ದ ಶಿಲಾಫಲಕವನ್ನು ದೇವಾಲಯದ ಎದುರೇ ಒಡೆದು ಹಾಕಿರುವುದು ಅವರಲ್ಲಿ ಜಾತಿ ಶ್ರೇಷ್ಠತೆಯ ವ್ಯಸನ ಯಾವ ಮಟ್ಟದಲ್ಲಿದೆ ಎಂಬುದನ್ನು ತೋರಿಸುತ್ತದೆ. ಅಲ್ಲದೆ ಈ ದೇಶದಲ್ಲಿ ಇನ್ನೂ ಅಸ್ಪೃಶ್ಯತೆ ಎಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಅಸ್ಪೃಶ್ಯತೆ ಜೀವಂತ
ಕಳೆದ ಅಕ್ಟೋಬರ್ 4 ರಂದು ಕನಕಪುರ ತಾಲೂಕಿನ ಕಸಬಾ ಹೋಬಳಿಯ ಕುಣೂರು ಗ್ರಾಮದಲ್ಲಿ ಬಸವೇಶ್ವರ ಮತ್ತು ಮಾರಮ್ಮ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಗಲಭೆ ಉಂಟಾಗಿತ್ತು. ಹಾಗೆಯೇ ಕಳೆದ ನವಂಬರ್ 3 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮಲ್ಲಾತಹಳ್ಳಿಯಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಿದ್ದರಿಂದ ಗಲಭೆ ನಡೆದು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ದಿನನಿತ್ಯ ಈ ರೀತಿಯ ಅಸ್ಪೃಶ್ಯತೆ ಆಚರಣೆಯ ಪ್ರಕರಣಗಳು ವರದಿಯಾಗುತ್ತಲೇ ಇರುವುದನ್ನು ನೋಡಿದರೆ ಈ ದೇಶದಲ್ಲಿ ದಲಿತರ ಸ್ಥಿತಿ ಯಾವ ಅಪಾಯಕಾರಿ ಮಟ್ಟದಲ್ಲಿದೆ ಎಂಬುದು ಗೊತ್ತಾಗುತ್ತದೆ.
ಹಿಂದೂ ವೀರರೆಲ್ಲಿ?
‘ ಹಿಂದೂ ನಾವೆಲ್ಲ ಒಂದು-ನಾವೆಲ್ಲಾ ಬಂಧು’ ಹಿಂದೂ ಧರ್ಮ ಅಪಾಯದಲ್ಲಿದೆ ಇಂದು ಗಂಟಲು ಬಿರಿದುಕೊಂಡು ಕೂಗಾಡುವ ಈ ಹಿಂದೂ ವೀರಾಗ್ರಹಣಿಗಳಿಗೆಲ್ಲ ಮಂಡ್ಯ ತಾಲೂಕಿನ ಹನಕೆರೆಯಲ್ಲಿ ನಡೆದಿರುವ ಈ ಘೋರ ಅಸ್ಪೃಶ್ಯತೆ ಕೃತ್ಯ ಕಣ್ಣಿಗೆ ಕಾಣುತ್ತಿಲ್ಲವೇ? ಅವರೆಲ್ಲ ಏಕಿನ್ನೂ ಹನಕೆರೆಗೆ ಬಂದಿಲ್ಲ. ದಲಿತರ ಪರವಾಗಿ ಏಕೆ ಪಾದಯಾತ್ರೆ ಮಾಡಿಲ್ಲ. ಸರ್ವ ಜನಾಂಗದ ಭಕ್ತಿಯ ಕೇಂದ್ರವಾಗಿರುವ ದೇವಸ್ಥಾನದೊಳಗೆ ದಲಿತರನ್ನು ಬಿಟ್ಟುಕೊಳ್ಳುವುದಿಲ್ಲ ಎಂಬ ಅಸ್ಪೃಶ್ಯತೆಯನ್ನು ಏಕೆ ಖಂಡಿಸುತ್ತಿಲ್ಲ? ಬದಲಿಗೆ ಅದನ್ನು ಸಮರ್ಥಿಸುತ್ತಾರೆಂದರೆ ಅವರೆಷ್ಟು ವಿಕೃತ ಎಂಬುದು ಅರ್ಥವಾಗುತ್ತದೆ.

ಹನಕೆರೆ ಗ್ರಾಮದ ಕಾಲಭೈರವೇಶ್ವರ ಸ್ವಾಮಿ ದೇವಾಲಯ ಪ್ರವೇಶಕ್ಕೆ ಪರಿಶಿಷ್ಟರು ಕಳೆದ ಎರಡು ತಿಂಗಳುಗಳಿಂದಲೂ ಪ್ರಯತ್ನ ನಡೆಸಿದ್ದರು. ಆದರೆ ಸವರ್ಣೀಯರು ಇದಕ್ಕೆ ಅವಕಾಶ ನೀಡಿರಲಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಎಸ್ಸಿ,ಎಸ್ಟಿ ಸಭೆಯಲ್ಲಿಯೂ ಹನಕೆರೆಯ ಕಾಲಭೈರವೇಶ್ವರ ದೇವಾಲಯದ ಪ್ರವೇಶ ಕುರಿತು ದಲಿತ ಮುಖಂಡರು ಗಮನ ಸೆಳೆದಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಅಧಿಕಾರಿಗಳನ್ನು ಕಳಿಸಿ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಮನವೊಲಿಸಲು ಮುಂದಾಗಿದ್ದರೂ ಸವರ್ಣೀಯರು ಒಪ್ಪಿರಲಿಲ್ಲ.ಹನಕೆರೆ ಗ್ರಾಮದವರೇ ಆದ ಮಾಜಿ ಶಾಸಕ ಎಂ.ಶ್ರೀನಿವಾಸ್ ಹೇಳಿದರೂ ಕೇಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಪೋಲಿಸ್ ಭದ್ರತೆಯೊಂದಿಗೆ ದಲಿತರು ದೇವಾಲಯ ಪ್ರವೇಶ ಮಾಡಲು ಜಿಲ್ಲಾಡಳಿತ ಅವಕಾಶ ನೀಡಿತು. ಮಾಜಿ ಶಾಸಕ ಎಂ.ಶ್ರೀನಿವಾಸ್, ತಹಶೀಲ್ದಾರ್ ಶಿವಕುಮಾರ ಬಿರಾದಾರ್, ಸಮಾಜ ಕಲ್ಯಾಣ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸಮ್ಮುಖದಲ್ಲಿ ಭಾನುವಾರ ಪರಿಶಿಷ್ಟರು ದೇಗುಲ ಪ್ರವೇಶಿಸಿ ಪೂಜೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿಯೇ ಸವರ್ಣೀಯರು ಪೊಲೀಸರ ಎದುರೇ ದೇವಾಲಯದೊಳಗಿಂದ ಕಾಲಭೈರವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಹೊರಗೆ ತಂದದ್ದಲ್ಲದೆ, ದೇವಸ್ಥಾನಕ್ಕೆ ಅಳವಡಿಸಲು ತಂದಿದ್ದ ಶಿಲಾಫಲಕವನ್ನು ಒಡೆದು ಹಾಕಿದ್ದರು ಎಂದರೆ ಇವರಲ್ಲಿನ ಜಾತಿ ವ್ಯಸನ ಯಾವ ಮಟ್ಟ ಮುಟ್ಟಿದೆ ಎಂಬುದು ತಿಳಿಯುತ್ತದೆ.

ಹನಕೆರೆ ಗ್ರಾಮದಲ್ಲಿ ನಡೆದಿರುವ ಈ ದುರ್ಘಟನೆ ವಿರುದ್ಧ ಹಿಂದೂ ವೀರಾಗ್ರಣಿಗಳಿಗೆ ಗೊತ್ತಿದ್ದರೂ ಅವರ್ಯಾರು ಅತ್ತ ತಲೆ ಹಾಕಿಲ್ಲ. ಏಕೆಂದರೆ ದಲಿತರ ವಿರುದ್ಧ ನಿಂತವರು ಸವರ್ಣೀಯರೇ ಹೊರತು ಮುಸಲ್ಮಾನರಲ್ಲ. ಒಂದು ವೇಳೆ ಮುಸ್ಲಿಮರು ತೊಂದರೆ ಕೊಟ್ಟಿದ್ದರೆ ಈ ಹಿಂದೂ ವೀರಾಗ್ರಣಿಗಳು ತಮ್ಮ ಬತ್ತಳಿಕೆಯಲ್ಲಿದ್ದ ಕತ್ತಿ, ಗುರಾಣಿಗಳನ್ನೆಲ್ಲಾ ಹೊತ್ತುಕೊಂಡು ಹನಕೆರೆಗೆ ಲಗ್ಗೆ ಇಟ್ಟು ವೀರಾವೇಶದ ಭಾಷಣ ಬಿಗಿದು ಜನರನ್ನು ಪ್ರಚೋದಿಸಿ ಬೆಂಕಿ ಹಚ್ಚುತ್ತಿದ್ದರು. ಆದರೆ ಇಲ್ಲಿ ದಲಿತರನ್ನು ದೇವಾಲಯಕ್ಕೆ ಬಿಟ್ಟು ಕೊಳ್ಳದ ಸವರ್ಣೀಯರು ತಮ್ಮದೇ ಹಿಂದೂ ಬಂಧುಗಳು ಆದ್ದರಿಂದ ಅವರು ಬಾಯಿ ಮುಚ್ಚಿಕೊಂಡು ಒಡಾಡುತ್ತಿದ್ದಾರೆ.
ಎಲ್ಲಿ ಅವಿತಿದ್ದಾರೋ
ಈ ಹಿಂದೆ ಕೆರಗೋಡು ಗ್ರಾಮದಲ್ಲಿ ಭಗವಾ ಧ್ವಜ ಹಾರಿಸಲು ಬಿಟ್ಟಿಲ್ಲದ್ದರಿಂದ ಹಿಂದೂ ಧರ್ಮಕ್ಕೆ ಅಪಾಯವಾಗಿದೆ ಎಂದು ಬಾಯಿ ಬಾಯಿ ಬಡಿದುಕೊಂಡು ಕೆರಗೋಡಿನಿಂದ ಮಂಡ್ಯದವರಿಗೆ ಪಾದಯಾತ್ರೆ ಮಾಡಿದ್ದ ಬಿಜೆಪಿ-ಜೆಡಿಎಸ್ ಮುಖಂಡರಾಗಲಿ, ಆರ್ ಎಸ್ ಎಸ್, ವಿಶ್ವ ಹಿಂದೂ ಪರಿಷತ್, ಬಜರಂಗ ದಳದಂತಹ ಹಿಂದೂ ವೀರಾಗ್ರಣಿಗಳು ಹನಕೆರೆಗೆ ಪಾದ ಬೆಳೆಸದೆ ತೆಪ್ಪಗೆ ಎಲ್ಲಿ ಅವಿತು ಕುಳಿತಿದ್ದಾರೋ? ಹನಕೆರೆಯಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ನಡೆದ ಈ ಗಲಾಟೆ ಪ್ರಕರಣ ಮಂಡ್ಯ ಸಂಸದ ಹೆಚ್. ಡಿ.ಕುಮಾರಸ್ವಾಮಿ ಅವರಿಗೂ ಗೊತ್ತಿದೆ. ಅವರು ತಮ್ಮ ಮಗನ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಬ್ಯುಸಿಯಾಗಿದ್ದರು. ಈಗ ಚುನಾವಣೆ ಮುಗಿದಿದೆ. ನಾಳೆಯಾದರೂ ಹನಕೆರೆಗೆ ಭೇಟಿ ನೀಡಿ ಒಕ್ಕಲಿಗರಿಗೆ ಸಾಂವಿಧಾನಿಕ ಆಶಯಗಳ ಬಗ್ಗೆ ತಿಳಿಸಿ ಹೇಳಬೇಕಿದೆ. ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ನಾವು ಇನ್ನೂ ಈ ಸಾಮಾಜಿಕ ಪಿಡುಗಿನ ವಿರುದ್ಧ ಅರಿವು ಮೂಡಿಸಬೇಕಾಗಿರುವುದು ದುರಾದೃಷ್ಟದ ಸಂಗತಿಯಾಗಿದೆ.
ಈ ದೇಶದಲ್ಲಿ ತಮ್ಮ ಜಾತಿಯೇ ಶ್ರೇಷ್ಠ ಎನ್ನುವ ವ್ಯಸನಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಧರ್ಮ-ಧರ್ಮಗಳ ನಡುವೆ ಎತ್ತಿ ಕಟ್ಟಿ ರಾಜಕೀಯ ಅಧಿಕಾರ ಹಿಡಿಯುವ ಈ ಕುತಂತ್ರ ರಾಜಕಾರಣಿಗಳ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು. ಇಲ್ಲದ್ದಿದ್ದರೆ ಸರ್ವ ಜನಾಂಗದ ತೋಟ ಕರ್ನಾಟಕ ಸದಾ ಅಶಾಂತಿಯ ನಾಡಾಗುತ್ತದೆ. ಕೊಪ್ಪಳ ಜಿಲ್ಲೆಯ ಮರಕುಂಬಿ ಗ್ರಾಮದಲ್ಲಿ 2014ರಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಅವರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕೊಪ್ಪಳ ಸತ್ರ ನ್ಯಾಯಾಲಯ 98 ಜನರಿಗೆ ಜೀವಾವಧಿ ಶಿಕ್ಷೆ ನೀಡಿದ ಪ್ರಕರಣದ ಬಗ್ಗೆ ಗೊತ್ತಿದ್ದೂ, ಹನಕೆರೆ ಪ್ರಕರಣ ನಡೆಯುತ್ತದೆ ಎಂದರೆ, ಈ ಜಾತಿ ವ್ಯಸನಿಗಳಿಗೆ ಕಾನೂನಿನ ಭಯ ಸ್ವಲ್ಪವೂ ಇಲ್ಲ ಎಂಬುದು ಗೊತ್ತಾಗುತ್ತದೆ. ಹನಕೆರೆ ಪ್ರಕರಣದಲ್ಲಿ ಜಾತಿ-ಜಾತಿಗಳ ನಡುವೆ ಒಡಕುಂಟುಮಾಡಿ ಬೆಂಕಿ ಹಚ್ಚಿ ಜನರನ್ನು ದಲಿತರ ವಿರುದ್ಧ ಪ್ರಚೋದನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಿ. ಇನ್ನಾದರೂಈ ನಾಡಿನಲ್ಲಿ ದಿನನಿತ್ಯ ದಲಿತ ಸಮುದಾಯದ ಮೇಲೆ ಸವರ್ಣೀಯರು ನಡೆಸುತ್ತಿರುವ ಅಸ್ಪೃಶ್ಯತೆ ಆಚರಣೆಗಳು ನಿಲ್ಲಲಿ. ಸಮ ಸಮಾಜದ ನಿರ್ಮಾಣವಾಗಲಿ.
ಶಾಂತಿಸಭೆ ನಡೆಸಲಿ
ಹನಕೆರೆ ಗ್ರಾಮದಲ್ಲಿ ಸವರ್ಣೀಯರು ಹಾಗೂ ದಲಿತರ ನಡುವೆ ದೇವಾಲಯ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ವೈಮನಸ್ಯವುಂಟಾಗಿದ್ದು, ಗ್ರಾಮದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಹಾಗೂ ಶಾಸಕ ಗಣಿಗ ರವಿಕುಮಾರ್ ಶಾಂತಿಸಭೆ ನಡೆಸುವ ಅಗತ್ಯವಿದೆ.




