ಮಂಡ್ಯ ಜಿಲ್ಲಾ ಉಸ್ತುವಾರಿ ಮಂತ್ರಿ, ಜಿಲ್ಲಾಧಿಕಾರಿಗಳ ಸಲಹೆ ಹಾಗೂ ಆದೇಶದ ಮೇರೆಗೆ ಸಮ್ಮೇಳನ ನಡೆಯುವ ಸ್ಥಳ ನಿಗದಿ ಮಾಡಲಾಗಿದೆಯೇ ಹೊರತು ಸ್ಥಳ ನಿಗದಿಗೂ ಮಹೇಶ್ ಜೋಷಿಗೂ ಸಂಬಂಧವಿಲ್ಲ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿಯ ಸದಸ್ಯ ಪ್ರೊ.ಎಚ್.ಎಚ್.ಮುದ್ದೇಗೌಡ ಸಮರ್ಥಿಸಿಕೊಂಡರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮ್ಮೇಳನ ನಡೆಸಲು ಬೇಕಾಗುವ ಸ್ಥಳ ನಗರದಲ್ಲಿ ದೊರೆಯಲಿಲ್ಲ, ೯೦೦ ಮಳಿಗೆ, ಊಟಕ್ಕೆ ದೊಡ್ಡ ಸ್ಥಳ, ಮುಖ್ಯ ವೇದಿಕೆ, ಎರಡು ಸಮನಾಂತರ ವೇದಿಕೆ, ಪಾರ್ಕಿಂಗ್ ವ್ಯವಸ್ಥೆಗೆ ಒದಗಿಸುವಷ್ಟು ದೊಡ್ಡ ಸ್ಥಳ ನಗರದಲ್ಲಿ ಇದರ ಕಾರಣ ನಗರದಿಂದ ಹೊರಗಿನ ಸ್ಥಳವನ್ನು ಆಯ್ಕೆ ಮಾಡಲಾಗಿದೆಯೆಂದರು.
ಮಂಡ್ಯ ಸಮ್ಮೇಳವನ್ನು ಬಹಿಷ್ಕರಿಸುವ ಮೂಲಕ ಜಗದೀಶ್ ಕೊಪ್ಪ ಅವರು ಪ್ರತಿಭಟನೆ ಮಾಡುತ್ತಿದ್ದು, ಸಮ್ಮೇಳನ ಯಶಸ್ವಿಗೊಳಿಸಲು ದುಡಿಯುತ್ತಿರುವ ಶ್ರಮಕ್ಕೆ ನೀರು ಚೆಲ್ಲುತ್ತಿದ್ದಾರೆ. ಮಂಡ್ಯ ಸಮ್ಮೇಳನವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡ ಮಹೇಶ್ ಜೋಷಿ ಅವರನ್ನು ಏಕ ವಚನದಲ್ಲಿ ಜರಿದಿರುವುದು ಸರಿಯಲ್ಲ ಎಂದು ಮುದ್ದೇಗೌಡ ಹೇಳಿದರು.
ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ತರಲು ಸಾಕಷ್ಟು ಕಷ್ಟಪಟ್ಟಿದ್ದು, ಚುನಾವಣಾ ಪೂರ್ವದಲ್ಲಿ ಮಹೇಶ್ ಜೋಷಿ ಮಂಡ್ಯಕ್ಕೆ ಸಮ್ಮೇಳನ ತರುವುದಾಗಿ ಹೇಳಿಕೆ ಕೊಟ್ಟು, ತಾವಾಡಿದ ಮಾತನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿದರು.
ಸಮ್ಮೇಳನದ ಬಗ್ಗೆ ಟೀಕೆ ಟಿಪ್ಪಣಿಗಳು ಬರುತ್ತಿದ್ದು, ಅದು ಹಿತವಲ್ಲ, ಅದರ ಅಗತ್ಯವೂ ಇಲ್ಲ. ರಾಜ್ಯಾಧ್ಯಕ್ಷರಿಗೆ ಅವರದ್ದೇ ಗೌರವಿದ್ದು, ಅವರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಎಲ್ಲದಕ್ಕೂ ಅವರನ್ನೇ ಗುರಿಯಾಗಿಸಿಕೊಳ್ಳುವುದು ಸರಿಯಲ್ಲ, ಸಮ್ಮೇಳನದ ಅಂಗವಾಗಿ ರಚನೆಯಾದ ಸಮಿತಿಗಳಿಗೂ ಮಹೇಶ್ ಜೋಷಿ ಅವರಿಗೂ ಸಂಬಂಧವಿಲ್ಲ. ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಸಮಿತಿ ರಚಿಸಿದ್ದು, ಅದಕ್ಕೆ ರಾಜ್ಯಾಧ್ಯಕ್ಷರು ಸಹಿ ಹಾಕಿದ್ದಾರಷ್ಟೆ ಎಂದರು.
ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಯಾಕೆ ಮಾಡಬಾರದು ಎಂದು ಹೇಳಿದ್ದಾರಷ್ಟೇ, ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವ ಅಧಿಕಾರ ರಾಜ್ಯಾಧ್ಯಕ್ಷರಿಗಿಲ್ಲ. ಅವರ ಹೇಳಿಕೆಯನ್ನು ಅಕ್ಷಮ್ಯ ಅಪರಾಧವೆಂದು ನಾನೇ ಹೇಳಿದ್ದೇನೆ. ಆ ವಿಚಾರ ಈಗ ಚಾಲ್ತಿಯಲ್ಲಿಲ್ಲ ಇದನ್ನು ಚಾಲ್ತಿಗೆ ತರದಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಸ್ಮಮೇಳನದ ಸಂಚಾಲಕಿ ಮೀರ ಶಿವಲಿಂಗಯ್ಯ, ಹರ್ಷ ಪಣ್ಣೇದೊಡ್ಡಿ, ಕೃಷ್ಣೇಗೌಡ ಹುಸ್ಕೂರು, ಅಪ್ಪಾಜಪ್ಪ, ಚಂದ್ರಲಿಂಗು, ಸುಜಾತ ಕೃಷ್ಣ ಇದ್ದರು.




