ರಾಜ್ಯದಲ್ಲಿ ೧೯೯೫ರ ನಂತರ ಪ್ರಾರಂಭಗೊಂಡ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ಅನುದಾನ ಪಡೆಯುವ ಉದ್ದೇಶದಿಂದ ರಾಜ್ಯ ಮಟ್ಟದ ಸಮಾವೇಶವನ್ನು ನವೆಂಬರ್ ೨೨ರಂದು ಹುಬ್ಬಳ್ಳಿಯ ಬಯೋಟೆಕ್ ಭವನದ ಬಿವಿಬಿ ಇಂಜಿನಿಯರ್ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅನುದಾನ ರಹಿತ ಶಾಲೆಗಳ ಪ್ರಾಂಶುಪಾಲರ ಸಂಘದ ಗೌರವ ಅಧ್ಯಕ್ಷ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು.
ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ವಾತಂತ್ರ್ಯ ಪೂರ್ವ, ಸ್ವಾತಂತ್ರ್ಯ ನಂತರದಲ್ಲಿಯೂ ಅಕ್ಷರ ಕಟ್ಟುವ ಕೆಲಸ ಮಾಡುತ್ತಿದ್ದು, ಅನುದಾನ ನೀಡುವ ಪ್ರಕ್ರಿಯೆಯನ್ನು ೧೯೮೫ಕ್ಕೆ ನಿಲ್ಲಿಸಲಾಗಿದ್ದು, ಕುಮಾರಸ್ವಾಮಿ ಅವರ ಮುಖ್ಯಮಂತ್ರಿಯಾದ ವೇಳೆ ೧೯೮೫ರಿಂದ ೧೯೯೫ರ ವರೆಗೆ ಅನುದಾನ ನೀಡಿದ್ದು, ತದನಂತರದ ಸರ್ಕಾರಗಳು ಕನ್ನಡ ಕಲಿಸುವ ಖಾಸಗಿ ಶಾಲೆಗಳಿಗೆ ಅನುದಾನ ನೀಡದ ಹಿನ್ನಲೆ ಕನ್ನಡ ಕಲಿಸುವ ಖಾಸಗಿ ಶಾಲೆಗಳು ಮುಚ್ಚಿ ಹೋಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾವಿರಾರು ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪುತಿದ್ದು, ಕನ್ನಡ ಅಕಾಡೆಮಿ, ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಚಿಂತಕರು ಕನ್ನಡ ಕಟ್ಟುವ ಕೆಲಸವನ್ನು ಕನ್ನಡ ಶಾಲೆಗಳು ಉಳಿಸುವ ಮೂಲಕ ಮಾಡಬೇಕು. ಈ ನಿಟ್ಟಿನಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆರಂಭವಾಗುವ ಮುನ್ನ ೧೯೯೫ ರಿಂದ ೨೦೦೫ರ ವರೆಗೆ ಕನಿಷ್ಠ ಹತ್ತು ವರ್ಷಗಳ ಕಾಲ ಕನ್ನಡ ಶಾಲೆಗಳಿಗೆ ಅನುದಾನ ನೀಡುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮ್ಮೇಳನ ಪ್ರಾರಂಭಮಾಡುವ ಒಳಗೆ ಅಥವಾ ಸಮ್ಮೇಳನದಲ್ಲಿ ಸರ್ಕಾರ ಈ ಘೋಷಣೆಯನ್ನು ಮಾಡದೆ ಇದ್ದರೆ ಯಾವ ಪುರುಷಾರ್ಥಕ್ಕೆ ಈ ಸಮ್ಮೇಳನ. ಮಕ್ಕಳಿಗೆ ಕನ್ನಡ ಕಲಿಸುವ ಕೆಲಸವಾಗದೇ ಸಮಾವೇಶದಲ್ಲಿ ಕನ್ನಡ ಕಟ್ಟುವ ಬೆಳೆಸುವ ಕೆಲಸವಾಗದು. ೧೯೯೫ ರಿಂದ ೨೦೦೫ರ ವರೆಗೆ ಕನಿಷ್ಠ ಹತ್ತು ವರ್ಷಗಳ ಕಾಲ ಕನ್ನಡ ಶಾಲೆಗಳಿಗೆ ಅನುದಾನ ನೀಡುವ ನಿರ್ಧಾರ ಸರ್ಕಾರ ಕೈಗೊಳ್ಳದಿದ್ದರೆ, ಸಕಲ ರೀತಿಯ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.
ಗೋಷ್ಠಿಯಲ್ಲಿ ಜಿ.ಸಿ.ಶಿವಪ್ಪ, ಕಾಳೇಗೌಡ, ಬೈರೇಗೌಡ, ಜಯಪ್ರಕಾಶ್, ಶಿವಕುಮಾರ್, ಸುರೇಶ್ ಇತರರಿದ್ದರು.




