Thursday, November 19, 2026

ಪ್ರಾಯೋಗಿಕ ಆವೃತ್ತಿ

ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ : ಸಿಎಂ ಹೇಳಿಕೆಗೆ ಶಿವಸುಂದರ್ ಖಂಡನೆ

ವಿಕ್ರಂ ಗೌಡ ಹಲವು ನಕ್ಸಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದು, ನಕ್ಸಲ್ ಚಟುವಟಿಕೆಯನ್ನು ನಿಗ್ರಹಿಸಲು ಆತನನ್ನು ಎನ್ ಕೌಂಟರ್ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಈ ಹೇಳಿಕೆಯನ್ನು ಪ್ರಗತಿಪರ ಚಿಂತಕ ಶಿವಸುಂದರ್ ಖಂಡಿಸಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಿಎಂ, ವಿಕ್ರಂಗೌಡ ಅವರಿಗೆ ಶರಣಾಗುವಂತೆ ಆದೇಶ ನೀಡಲಾಗಿತ್ತು. ಆದರೆ ಅವರು ಶರಣಾಗಿರಲಿಲ್ಲ. ಅವರನ್ನು ಹಿಡಿದವರಿಗೆ ಕೇರಳ ಸರ್ಕಾರ 25 ಲಕ್ಷ ಹಾಗೂ ಕರ್ನಾಟಕ ಸರ್ಕಾರ 5 ಲಕ್ಷ ಬಹುಮಾನವನ್ನು ಘೋಷಿಸಿತ್ತು ಎಂದು ಹೇಳಿಕೆ ನೀಡಿದ್ದಾರೆ. ಇದನ್ನು ಪ್ರಶ್ನಿಸಿರುವ ಶಿವಸುಂದರ್, ಮುಖ್ಯಮಂತ್ರಿಗಳೇ, ಹೆಬ್ರಿ ಏನ್ಕೌಂಟರ್ ಬಗ್ಗೆ ತಮ್ಮ ಹೇಳಿಕೆಯೇ ಅದೊಂದು ಪೂರ್ವ ಯೋಜಿತ ಪೊಲೀಸ್ ಹತ್ಯೆ ಎಂದು ಸಾಬೀತು ಪಡಿಸುತ್ತದೆ! ಎಂದು ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿಗಳೇ ತಾವು ನಿನ್ನೆ ಹೆಬ್ರಿಯಲ್ಲಿ ನಡೆದ ಏನ್ಕೌಂಟರ್ ಬಗ್ಗೆ ಮಾತನಾಡುತ್ತಾ “ವಿಕ್ರಂ ಗೌಡಾಗೆ ಶರಣಾಗಲು ಹೇಳಿದ್ದೆವು. ಆತ ಶರಣಾಗಲಿಲ್ಲ.. ಆದ್ದರಿಂದ ಏನ್ಕೌಂಟರ್ ಮಾಡಲಾಯಿತು” ಎಂದು ಹೇಳಿದ್ದೀರಿ. ಹಾಗೆಯೇ ಗೃಹಮಂತ್ರಿ ಪರಮೇಶ್ವರ್ ಅವರೂ ಸಹ ಅದೇ ಬಗೆಯ ಮಾತುಗಳನ್ನು ಹೇಳಿದ್ದಾರೆ.ಅಂದರೆ ತಮ್ಮ ಮಾತಿನ ತಾತ್ಪರ್ಯವೇನು ಎಂದು ಪ್ರಶ್ನೆ ಮಾಡಿದ್ದಾರೆ.

ಪೊಲೀಸರು ವಿಕ್ರಂಗೌಡರನ್ನು ಕೊಂದಿದ್ದು ಅವರು ಪೋಲೀಸರ ಮೇಲೆ ದಾಳಿ ಮಾಡಿದ್ದಕ್ಕಲ್ಲ! ಪೊಲೀಸರಿಗೆ ಶರಣಾಗಲು ನಿರಾಕರಿಸಿದ್ದಕ್ಕೆ. ಈವರೆಗಿನ ವರದಿಗಳೂ ಕೂಡ ಹೇಳುವಂತೆ ನಕ್ಸಲರು ಅಲ್ಲಿಗೆ ಬಂದದ್ದು ಕೇವಲ ಜನರಿಂದ ಆಹಾರ ಪಡೆದುಕೊಳ್ಳಲು, ಹಾಗಿದ್ದರೂ ಅವರನ್ನು ಬಂಧಿಸದೇ ಸರ್ಕಾರದ ಆದೇಶದಂತೆ ಶರಣಾಗಲಿಲ್ಲ ಎಂಬ ಕಾರಣಕ್ಕಾಗಿಯೇ ಅವರನ್ನು ಗುಂಡಿಟ್ಟು ಸಾಯಿಸಲಾಗಿದೆ ಎಂಬುದು ಈಗ ನೀವೇ ಸ್ಪಷ್ಟಪಡಿಸುತ್ತಿದ್ದೀರಿ. ಹಾಗೆಯೇ”ನಕ್ಸಲ್ ಚಟುವಟಿಕೆಗಳನ್ನು ನಿಗ್ರಹಿಸುವ ಸಲುವಾಗಿ ವಿಕ್ರಂ ಗೌಡರನ್ನು ಏನ್ಕೌಂಟರ್ ಮಾಡಲಾಯಿತು” ಎಂದು ಕೂಡಾ ಹೇಳಿದ್ದೀರಿ. ಇದೂ ಕೂಡ ಏನ್ಕೌಂಟರ್ ನಡೆದಿರುವುದು ಸರ್ಕಾರದ ಪೂರ್ವ ಯೋಜನೆಯ ಭಾಗವಾಗಿಯೇ ವಿನಾ ಆ ಸಂದರ್ಭದಲ್ಲಿ ಪೋಲೀಸರ ಆತ್ಮರಕ್ಷಣೆಯ ಅಗತ್ಯದಿಂದ ಉದ್ಭವಿಸದ್ದಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಇದರ ಜೊತೆಗೆ ವಿಕ್ರಂ ಗೌಡರ ಬಳಿ ಅತ್ಯಾಧುನಿಕ ಮೆಷಿನ್ ಗನ್ ಇತ್ತೆಂದು ಪೊಲೀಸರು ಹೇಳಿದ್ದಾರೆ. ಆದರೆ ಅದನ್ನು ಆತ ಬಳಸಿಲ್ಲವೆನ್ನುವುದಕ್ಕೆ ಯಾವ ಪೊಲೀಸರಿಗೂ ಗಾಯಗಳೂ ಆಗದೆ ಇರುವುದೇ ಸಾಕ್ಷಿ…ಪೊಲೀಸರು ದಾಳಿ ಮಾಡುತ್ತಿದ್ದರೂ, ಮೆಷಿನ್ ಗನ್ ಇದ್ದರೂ ಆತ ಏಕೆ ಬಳಸಲಿಲ್ಲ ? ಎಂಬ ಪ್ರಶ್ನೆಗೂ ಪೊಲೀಸರು ಬಳಿ ಹಾಗೂ ನಿಮ್ಮ ಬಳಿ ಉತ್ತರವಿಲ್ಲ. . ಹೀಗಾಗಿ ಪೋಲೀಸರ ಈ ಕಥನವೂ ಎಷ್ಟು ನಂಬಾಲಾರ್ಹ ಎಂಬ ಪ್ರಶ್ನೆ ಇದ್ದೆ ಇದೆ. ಈ ಎಲ್ಲಾ ಪ್ರಾಥಮಿಕ ಪುರಾವೆಗಳು ಮತ್ತು ತಮ್ಮ ಹೇಳಿಕೆಗಳು ಇದು ನಕಲಿ ಏನ್ಕೌಂಟರ್ ಎಂಬ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಇದು ಒಂದು ನಾಗರಿಕ ಹಾಗೂ ಪ್ರಜಾತಾಂತ್ರಿಕ ಸರ್ಕಾರ ನಡೆದುಕೊಳ್ಳುವ ರೀತಿಯಲ್ಲ. ಆದ್ದರಿಂದ ನಿಮ್ಮ ಹಾಗೂ ಗೃಹಮತ್ರಿಗಳ ಹೇಳಿಕೆ ಅತ್ಯಂತ ಖಂಡನೀಯ ಎಂದಿದ್ದಾರೆ.

ಶರಣಾಗದ ನಕ್ಸಲರನ್ನು ಪೊಲೀಸರು ಬಂಧಿಸಬೇಕು. ಕೋರ್ಟಿಗೆ ಹಾಜರುಪಡಿಸಿ ಅವರ ಅಪರಾಧ ಸಾಬೀತು ಪಡಿಸಬೇಕು. ಕೋರ್ಟು ಅದರ ಸತ್ಯಾಸತ್ಯತೆಗಳನ್ನು ವಿಚಾರಣೆ ಮಾಡಿ ಶಿಕ್ಷೆ ವಿಧಿಸಬೇಕು ಅಥವಾ ತಮ್ಮ ಮೇಲೆ ದಾಳಿ ಮಾಡಿದರೆ ಆತ್ಮರಕ್ಷಣೆಗೆ ಗುಂಡುಹಾರಿಸಬೇಕು. ಪೂರ್ವಯೋಜಿತವಾಗಿ ಏನ್ಕೌಂಟರ್ ಮಾಡಿ ಸಾಯಿಸಬೇಕು ಎಂದು ನಡೆಸುವ ಕಾರ್ಯಾಚರಣೆ ಕಾನೂನು ಬಾಹಿರ ಮತ್ತು ಅದು ಸರ್ಕಾರಿ ಕೊಲೆ ಯಾಗುತ್ತದೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯ ವಿಷಯದಲ್ಲಿ ತಮಗೂ ಬಿಜೆಪಿ ಸರ್ಕಾರಕ್ಕೂ ಯಾವುದೇ  ವ್ಯತ್ಯಾಸವಿಲ್ಲವೆಂದು ಸ್ಪಷ್ಟವಾಗುತ್ತದೆ… ಮುಖ್ಯಮಂತ್ರಿಯಾಗಲೀ, ಪೊಲೀಸರಾಗಲೀ ನ್ಯಾಯಾಯಾಧೀಶರಲ್ಲ. ನಿಮಗೆ ಪ್ರಾಣ ತೆಗೆಯುವ ಅಧಿಕಾರವಿಲ್ಲ. ಆದ್ದರಿಂದ ಕೂಡಲೇ ಈ ಪೂರ್ವಯೋಜಿತ ಏನ್ಕೌಂಟರ್ ಬಗ್ಗೆ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆಯಾಗಬೇಕಿದೆ. ಕರ್ನಾಟಕದ ನಾಗರಿಕ ಸಮಾಜ ಸರ್ಕಾರದ ಈ ಅನಾಗರಿಕ ಏನ್ಕೌಂಟರ್ ಸಂಸ್ಕೃತಿಯನ್ನು ತಡೆಗಟ್ಟಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ