ಚಡ್ಡಿ ಗ್ಯಾಂಗ್ ಮಾದರಿಯಲ್ಲೇ ಮಾರಕಾಸ್ತ್ರ ಹಿಡಿದು ದರೋಡೆಗೆ ಯತ್ನ ನಡೆದಿರುವ ಘಟನೆ ಕೆ.ಆರ್.ಪೇಟೆ ಪಟ್ಟಣದ ಹಳೆ ಮೈಸೂರು ರಸ್ತೆಯಲ್ಲಿ ಕಳೆದ ರಾತ್ರಿ ನಡೆದಿದೆ.
ಕೆ.ಆರ್.ಪೇಟೆ ಪಟ್ಟಣದ ನಿವಾಸಿ ಇಂದ್ರಮ್ಮ ರಂಗನಾಥ ಅವರ ನಿವಾಸದ ಮೇಲೆ ದಾಳಿ ನಡೆಸಲು ಯತ್ನಿಸಿರುವುದು ಸಿ.ಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಇದೇ ರೀತಿಯ ಘಟನೆ ಕೆ.ಆರ್.ಪೇಟೆ ಪಟ್ಟಣದ ತಾಲ್ಲೂಕು ಕಚೇರಿ ಸಮೀಪ ಹಾಗೂ ಐ.ಬಿ ವೃತ್ತದ ಬಳಿ ನಡೆದಿದೆ ಎನ್ನಲಾಗಿದೆ. ಇಂದಿರಾ ರಂಗನಾಥ್ ಅವರ ಮನೆಯ ಬಾಗಿಲನ್ನು ಚಡ್ಡಿ ಗ್ಯಾಂಗ್ ಮಾದರಿಯಲ್ಲಿಯೇ ಕಳ್ಳರು ಕಳ್ಳತನ ಮಾಡಲು ಯತ್ನ ನಡೆಸಿರುವ ಬಗ್ಗೆ ಕೆ.ಆರ್ ಪೇಟೆ ಪಟ್ಟಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಈ ಎಲ್ಲಾ ಘಟನೆಗಳಿಂದಾಗಿ ಕೆ.ಆರ್ ಪೇಟೆ ಪಟ್ಟಣದ ಭಯದ ವಾತಾವರಣ ನಿರ್ಮಾಣವಾಗಿದ್ದು, ನಾಗರೀಕರು ಆತಂಕಗೊಂಡಿದ್ಧಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಚಡ್ಡಿ ಗ್ಯಾಂಗ್ ಕೃತ್ಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ವಿಡಿಯೋಗಳು ಓಡಾಡುತ್ತಿದ್ದು, ಅವು ಕೆ.ಆರ್.ಪೇಟೆಯಲ್ಲೇ ನಡೆದಿವೆಯೇ ಎಂಬುದು ಇನ್ನೂ ಅಧಿಕೃತವಾಗಿಲ್ಲ ಎಂದು ತಿಳಿದು ಬಂದಿದೆ. ನುಡಿಕರ್ನಾಟಕ.ಕಾಂಗೂ ಅಂತಹ ವಿಡಿಯೋಗಳು ಲಭ್ಯವಾಗಿದ್ದು, ಅವು ಇನ್ನೂ ಅಧಿಕೃತವಾಗಿಲ್ಲದ ಕಾರಣ ಪ್ರಸಾರ ಮಾಡಿಲ್ಲ.
ಹೊರ ರಾಜ್ಯಗಳ ಕಾರ್ಮಿಕರ ಮೇಲೆ ಅನುಮಾನ
ಚಡ್ಡಿ ಗ್ಯಾಂಗ್ ಮಾದರಿಯಲ್ಲಿ ಕೆ.ಆರ್.ಪೇಟೆ ಪಟ್ಟಣದ ಮೂರು ಕಡೆಗಳಲ್ಲಿ ದರೋಡೆಗೆ ಯತ್ನ ನಡೆದಿರುವ ಹಿನ್ನೆಲೆಯಲ್ಲಿ ಪೊಲೀಸರು ಹೊರ ರಾಜ್ಯಗಳಿಂದ ಬಂದು ಕೆ.ಆರ್.ಪೇಟೆ ಪಟ್ಟಣದಲ್ಲಿ ನಾನಾ ಕೆಲಸಗಳನ್ನು ಮಾಡುತ್ತಿರುವ ಕಾರ್ಮಿಕರ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಇಂದು ನೂರಕ್ಕೂ ಹೆಚ್ಚು ಕಾರ್ಮಿಕರನ್ನು ವಿಚಾರಣೆ ನಡೆಸಿ, ತಮ್ಮ ತಮ್ಮ ರಾಜ್ಯಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ.




