ಮಂಡ್ಯ ತಾಲ್ಲೂಕು ಬೂದನೂರು ಗ್ರಾ.ಪಂ. ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಕಳೆದ 4 ವರ್ಷಗಳಿಂದ ಅಕ್ರಮ, ಅವ್ಯವಹಾರದಲ್ಲಿ ತೊಡಗಿದ್ದು, ಇದರ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಸ್ವಂತ ಮನೆ ನಮ್ಮ ಹಕ್ಕು ಹೋರಾಟಗಾರರು ಮಂಡ್ಯ ಜಿಲ್ಲಾ ಪಂಚಾಯಿತಿ ಎದುರು ಆಹೋರಾತ್ರಿ ಧರಣಿ ಅರಂಭಿಸಿದ್ದಾರೆ.
ಆಶ್ರಯ ಬಡಾವಣೆಗೆ ಶಾಸಕ ಪಿ.ರವಿಕುಮಾರ್ ಗಣಿಗ ಹೆಸರಿಡುವಂತೆ ಆಗ್ರಹಿಸಿ ಬ್ಯಾನರ್’ಗೆ ರಕ್ತ ಚೆಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು, ಭ್ರಷ್ಟಾಚಾರಿ ಅಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.
ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಭ್ರಷ್ಟಾಚಾರ ಹಾಗೂ ಅಧ್ಯಕ್ಷೆಯ ಅಕ್ರಮಗಳ ಕುರಿತು ಕಳೆದ ಜೂ.10ರಂದು ತಮ್ಮ ಕಚೇರಿ ಮುಂದೆ ಪ್ರತಿಭಟನೆ ನಡೆಸಿ 15 ವಿಷಯಗಳ ಕುರಿತು ಮನವಿ ಸಲ್ಲಿಸಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ತಾವು ನೇಮಿಸಿದ್ದ ಸಮಿತಿ ಯಾವುದೇ ವಿಚಾರಣೆ ಕೈಗೊಳ್ಳದೆ ಅವ್ಯವಹಾರ ಮುಂದುವರಿದಿದೆ. ಹಾಗಾಗಿ ಗ್ರಾಪಂನ ಅಕ್ರಮ, ಅವ್ಯವಹಾರ ಕುರಿತು ಸಮಗ್ರ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡುವವರೆಗೂ ಅನಿರ್ದಿಷ್ಟ ಆಹೋರಾತ್ರಿ ಧರಣಿ ನಡೆಸಲಾಗುವುದು ಹಮ್ಮಿಕೊಳ್ಳಲಾವುದು ಎಂದು ಸಮಿತಿಯ ಸಂಚಾಲಕ ಬಿ.ಕೆ.ಸತೀಶ್ ತಿಳಿಸಿದರು.
- ಹಕ್ಕೊತ್ತಾಯಗಳು1. ಸಾರ್ವಜನಿಕ ಸಹಭಾಗಿತ್ವ, ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಬೂದನೂರು ಗ್ರಾಮ ಪಂಚಾಯತಿ ವಿಫಲವಾಗಿದೆ. ಗ್ರಾಮದಲ್ಲಿ ನಿರ್ಮಾಣವಾಗಿರುವ ಆಶ್ರಯ ಬಡಾವಣೆಗೆ ಕ್ಷೇತ್ರದ ಜನಪ್ರಿಯ ಶಾಸಕರಾದ ಪಿ.ರವಿಕುಮಾರ್ ಗಣಿಗ ಅವರ ನಾಮಕರಣ ಮಾಡಲು ಫಲಾನುಭವಿಗಳ ಪರವಾಗಿ ಮನವಿ ನೀಡಿದರೆ, ಪ್ರಭಾವ, ಅಮಿಷಗಳಿಗೆ ಒಳಗಾಗಿರುವ ಸದಸ್ಯರು ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ಹೆಸರನ್ನು ನಾಮಕರಣ ಮಾಡಿ ಬಳಿಕ ಮತ್ತೆ ಪರಿಷ್ಕರಿಸುವ ಭರವಸೆ ನೀಡಿ 3 ತಿಂಗಳಿನಿಂದ ಸಾಮಾನ್ಯ ಸಭೆ ಕರೆಯದೇ ಕರ್ತವ್ಯಲೋಪ ಎಸಗಿದ್ದು, ಇದರ ಬಗ್ಗೆ ತನಿಖೆ ನಡೆಸಬೇಕು.
- 2. ಗ್ರಾಪಂ ಅಧ್ಯಕ್ಷೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಕೆಲ ಭ್ರಷ್ಟ ಸದಸ್ಯರು ಸೇರಿ ಬೂದನೂರು ಸರ್ವೇ ನಂ.382, 382/7 ರ ಭೂಮಿಯ ಆರ್’ಟಿಸಿ ಇಂಡೀಕರಣವಾಗಿಲ್ಲದಿದ್ದರೂ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನಕ್ಕೆ ಖಾಸಗಿ ವ್ಯಕ್ತಿಯ ನಿವೇಶನದ ಸಂಖ್ಯೆ ಬಳಸಿ ಕ್ರಮ ಸಂಖ್ಯೆಯ ಇ ಸ್ವತ್ತು ನಂ.152100405200220045 ತೆಗೆದು ಅಕ್ರಮ ಹಾಗೂ ಭ್ರಷ್ಟಾಚಾರ ಎಸಗಿರುವುದು ಕಂಡು ಬಂದಿದೆ. ತಾವು ಈ ಮೇಲಿನ ಸಂಖ್ಯೆಯ ಇ ಸ್ವತ್ತು ಸಂಬಂಧ ನಡೆದಿರುವ ವ್ಯವಹಾರ ಪರಿಶೀಲಿಸಬೇಕು.
- 3. ಬೂದನೂರು ಗ್ರಾಮ ಪಂಚಾಯತಿ ವತಿಯಿಂದ ಹೊಸ ಬೂದನೂರು ಬಳಿ ಪ್ಲೊ ಕೆಫೆ ಎಂಬ ಹುಕ್ಕಾಬಾರ್’ಗೆ ಅನಧಿಕೃತವಾಗಿ, ಅನ್ಯಕ್ರಾಂತವಾಗಿಲ್ಲದ ಹಾಗೂ ಸ್ವತ್ತಿನ ನೋಂದಣಿಗೆ ಆಡಳಿತ ಮಂಡಳಿ ಅನುಮತಿ ನೀಡಿದೆ. ಈ ವಿಚಾರದಲ್ಲಿ ಭೂಮಾಲೀಕರ ಸಂಬಂಧಿಯೇ ಸದಸ್ಯನಾಗಿ ಪ್ರಭಾವ ಬೀರಿರುವುದು ಸ್ಪಷ್ಟವಾಗಿದೆ. ಇವೆಲ್ಲ ಅಕ್ರಮದ ಅರಿವಿದ್ದರೂ ಗ್ರಾಪಂ ಪಿಡಿಒ ಅವರು ಯಾವುದೇ ಅಕ್ಷೇಪ ದಾಖಲಿಸದಿರುವುದು ಇದು ಸಂಘಟಿತವಾಗಿಯೇ ಅಕ್ರಮ ಎಸಗಿದ್ದರ ಪರಿಣಾಮ ಅಪ್ರಾಪ್ತರಿಗೆ ಹುಕ್ಕಾ ಮಾರಾಟವಾಗಿದೆ, ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.
- 4. ಘನತ್ಯಾಜ್ಯ ಘಟಕ ನಿರ್ಮಿಸಲು ಅಗತ್ಯ ಭೂಮಿ ಮಂಜೂರಾಗಿ 2 ವರ್ಷ ಕಳೆದರೂ ಕ್ರಮ ವಹಿಸಲು ಮೀನಾಮೇಷ ಎಣಿಸಲಾಗುತ್ತಿದೆ. ಅಲ್ಲದೆ ಬೂದು ಬಣ್ಣ ನೀರು ನಿರ್ವಹಣೆಗೆ ಚರಂಡಿ ನಿರ್ಮಿಸಲು ಮಂಜೂರಾಗಿರುವ ಅನುದಾನದಲ್ಲಿ ಸರ್ಕಾರ ನಿರ್ದೇಶನ ಮಾಡಿರುವಂತೆ ಕಾಮಗಾರಿ ನಡೆಸದೆ ನಿಯಮ ಉಲ್ಲಘಿಸಿ ಹಣ ದುರುಪಯೋಗ ಮಾಡಲಾಗಿದೆ. ಇದರಿಂದ ₹ 10 ಲಕ್ಷದಷ್ಟು ಕಾಮಗಾರಿ ಮೊತ್ತ ದುರ್ಬಳಕೆಯಾಗಿದೆ.
- 5. ಗ್ರಾಪಂನಲ್ಲಿ ಕಳೆದ 4 ವರ್ಷಗಳಿಂದ ಸಂಗ್ರಹವಾಗಿದ್ದ ಅನುಪಯುಕ್ತ ಪ್ಲಾಸ್ಟಿಕ್/ಕಬ್ಬಿಣ ಸಾಮಾಗ್ರಿಗಳ ಲೆಕ್ಕಪತ್ರ ನಿರ್ವಹಿಸದೆ ಮಾರಾಟ ಮಾಡಿ ಭ್ರಷ್ಟಾಚಾರ ಎಸಗಲಾಗಿದೆ.
- 6. ಗ್ರಾಪಂನಲ್ಲಿ ಸಕಾಲ, ಬಾಪೂಜಿ ಸೇವಾ ಕೇಂದ್ರ ಸೇರಿದಂತೆ ಜನೋಪಯೋಗಿ ಕಾರ್ಯಕ್ರಮಗಳಾದ ಇ ಸ್ವತ್ತು ವಿತರಣೆ ಹೊಸ ಬೂದನೂರು ಗ್ರಾಮಕ್ಕೆ ಮಾತ್ರ ಸೀಮಿತವಾಗಿದೆ. ಹಳೇ ಬೂದನೂರು ಗ್ರಾಮದಲ್ಲಿ ಜಾರಿ ಮಾಡಿಲ್ಲ. ಮಹಾತ್ಮಗಾಂಧಿ ನರೇಗಾ ಯೋಜನೆಯ ಮಾಹಿತಿ ಮತ್ತು ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಲು ಯಾವುದೇ ಪ್ರಚಾರಾಂದೋಲನ ನಡೆಸದೇ ಕರ್ತವ್ಯಲೋಪ ಎಸಗಲಾಗಿದೆ.
- 7. ಬೂದನೂರು ಗ್ರಾಪಂ ವ್ಯಾಪ್ತಿ ಹೆಚ್ಚಿದ್ದು, 8 ಸಾವಿರಕ್ಕೂ ಹೆಚ್ಚಿರುವ ಜನಸಂಖ್ಯೆಗೆ ಅನುಗುಣವಾಗಿ ಟ್ರಾಕ್ಟರ್ ಕೊಳ್ಳದೆ ಆಟೋ ಖರೀದಿಸಿ ಬಳಕೆ ಮಾಡುತ್ತಿಲ್ಲ. ಅದರ ಬದಲು ಟ್ರಾಕ್ಟರ್ ಬಾಡಿಗೆ ಪಡೆದು ಸಾರ್ವಜನಿಕ ಹಣ ಪೋಲಾಗುತ್ತಿದೆ.
- 8. ಕಳೆದ 4 ವರ್ಷಗಳಿಂದ ವರ್ಗ 2 ಹಣವನ್ನು ಯಾವುದೇ ಅನುಮತಿ ಇಲ್ಲದೆ ಅಧ್ಯಕ್ಷರ ವಿವೇಚನೆಯಲ್ಲಿ ಖರ್ಚು ಮಾಡಲಾಗಿದೆ.
- 9. ಸಾಮಾಗ್ರಿ ಖರೀದಿ ಹಾಗೂ ಕಾಮಗಾರಿಗಳಲ್ಲಿ ನಿಯಮ ಪಾಲನೆಯಾಗಿಲ್ಲ. ಬಿಡ್ ಮಾಡುವಾಗ ನಕಲಿ ಬಿಲ್ ಬಳಸಿ ಖರೀದಿ ಪ್ರಕ್ರಿಯೆ ನಡೆಸಲಾಗಿದೆ. ಇದರಿಂದ ಸರ್ಕಾರಿ ಅನುದಾನ, ತೆರಿಗೆ ಹಣದ ಅಪವ್ಯಯವಾಗಿದೆ.
- 10. ಮಂಗಯ್ಯ ನಗರದ ಜನತಾ ಮನೆ ನಿರ್ಮಾಣ ಮಾಡಿದ್ದ ಸಂಕೀರ್ಣಕ್ಕೆ ಸರ್ಕಾರದ ಆಯ್ಕೆ ಪ್ರಕ್ರಿಯೆ ಬಿಟ್ಟು ಗ್ರಾಪಂ ವತಿಯಿಂದ ಆಯ್ಕೆಪತ್ರವನ್ನು ಹಾಗೂ ಫಲಾನುಭವಿಗಳನ್ನು ಅಕ್ರಮವಾಗಿ ಆಯ್ಕೆ ಮಾಡಲಾಗಿದೆ. ಸದರಿ ಸಂಕೀರ್ಣದ ಇ ಸ್ವತ್ತು ಮಾಡುವಾಗ ನಕಲಿ ದಾಖಲೆಗಳನ್ನು ಬಳಸಲಾಗುತ್ತಿದೆ.
- 11. 2020ರಿಂದ 2023ರವರೆಗೆ ಖಾಸಗಿಯವರಿಗೆ ವಹಿಸಿರುವ ಶುದ್ದ ಕುಡಿಯುವ ನೀರಿನ ಘಟಕಗಳ ವಿದ್ಯುತ್ ಬಿಲ್ ಪಾವತಿಸಿ ಭ್ರಷ್ಟಾಚಾರ ಎಸಗಲಾಗಿದೆ.
- 12. ಆಡಳಿತ ಮಂಡಳಿಯ ಸಾಮಾನ್ಯ ಸಭೆಯ ಅನುಪಾಲನಾ ವರದಿ ಮಂಡನೆಯಾಗುತ್ತಿಲ್ಲ. ಸ್ಥಾಯಿ ಸಮಿತಿಗಳು ನಾಮಕಾವಸ್ಥೆಯಾಗಿದೆ.
- 13. ಗ್ರಾಮದ ವಾಣಿಜ್ಯ ಕೇಂದ್ರಗಳ ಪರವಾನಗಿ ಮಾಡಿಸಲು ಜಾಣಮೌನ ವಹಿಸಲಾಗಿದೆ. ಇದರಿಂದಾಗಿ ತೆರಿಗೆ ಸಂಗ್ರಹಣೆ ಕುಸಿದಿದೆ.
- 14. ಮಹಿಳೆಯರು ಮತ್ತು ಮಕ್ಕಳ ಬಜೆಟ್, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿ ಮುನ್ನೋಟ ಮಂಡನೆಯಾಗುತ್ತಿಲ್ಲ.
- 15. ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮವಾಗಿ ಹಾಗೂ ಯೋಜಿತವಲ್ಲದೆ ಮನೆ ನಿರ್ಮಾಣವಾಗುತ್ತಿದ್ದರೂ ಅದನ್ನು ತಡೆಯುವುದು ಇರಲಿ ನೋಟೀಸ್ ನೀಡದೇ ನಿರ್ಲಕ್ಷ್ಯ ವಹಿಸಲಾಗಿದೆ.
- 16. ಇ ಸ್ವತ್ತು ವಿತರಣೆಯಲ್ಲಿ ಬ್ಯಾಂಕ್ ಕಾಲೋನಿ ಮುಂತಾದೆಡೆ ಸಮುದಾಯಿಕ ಆಸ್ತಿ ನೋಂದಣಿಗೆ ಕ್ರಮ ವಹಿಸದೇ 9 & 11 ಎ ವಿತರಣೆಗೆ ನಿಯಮಬಾಹಿರ ನಿರ್ಣಯ ಕೈಗೊಂಡು ಸರ್ಕಾರದ ತೆರಿಗೆ ಹಣ ನಷ್ಟಕ್ಕೆ ಕಾರಣರಾಗಿದ್ದಾರೆ.
- 17. ಸಾರ್ವಜನಿಕ ಸಹಭಾಗಿತ್ವ, ಪಾರದರ್ಶಕ ಆಡಳಿತ ಅಲ್ಲದೆ ಸರ್ಕಾರದಿಂದ ಬರುವ ಜನಯೋಜನೆಗಳ ಫಲಾನುಭವಿ ತಯಾರಿಸುವಲ್ಲಿ ಪೂರ್ಣ ಗ್ರಾಪಂ ಆಡಳಿತ ಪೂರ್ಣ ವಿಫಲವಾಗಿದೆ. ಅಲ್ಲದೆ ಕೆಲವರು ದಂಧೆಕೋರರು,ಪ್ರಭಾವಿಗಳ ಕೈಗೊಂಬೆಯಾಗಿ ಕಾನೂನುಬದ್ದವಾಗಿ ಆಡಳಿತ ನಡೆಸುವಲ್ಲಿ ವಿಫಲವಾಗಿದೆ.
ಒಟ್ಟಾರೆ ಆಡಳಿತ ಮಂಡಳಿ ಮಾಡಿರುವ ಅವ್ಯವಹಾರಗಳ ಕುರಿತು ಸರ್ವ ಸದಸ್ಯರನ್ನು ಪ್ರತ್ಯೇಕ ವಿಚಾರಣೆಗೆ ಒಳಪಡಿಸಿ ಕ್ರಮ ವಹಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಹೆಚ್.ಡಿ.ಜಯರಾಂ, ಸವಿತಾ, ವಿಜಯ, ಮಂಗಳಾ, ಶಿವರಾಜು, ಕಾರ್ತಿಕ್ ಮೊದಲಾದವರಿದ್ದರು.




