ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಸಚಿವ ಸಂಪುಟಕ್ಕೆ ಸರ್ಜರಿ ಮಾಡುವ ವಿಚಾರ ಮುನ್ನಲೆಗೆ ಬಂದಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ನಡೆಯಲಿರುವ ಎಐಸಿಸಿ ಕಾರ್ಯಕಾರಣಿಯಲ್ಲಿ ಪಾಲ್ಗೊಳ್ಳಲು ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ. ಅಲ್ಲಿಯೇ ಹೈಕಮಾಂಡ್ ಬಳಿ ಸಂಪುಟ ಪುನಾರಾಚನೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ, ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ ಹಾಗೂ ಲಕ್ಷ್ಮಣ್ ಸವದಿಯವರನ್ನು ಈ ಬಾರಿ ಸಂಪುಟಕ್ಕೆ ಸೇರಿಸಿಕೊಳ್ಳುವ ಯೋಚನೆ ಕಾಂಗ್ರೆಸ್ ನಾಯಕರಿಗೆ ಇದೆ ಎಂದು ಹೇಳಲಾಗಿದೆ. ಹೈಕಮಾಂಡ್ ಒಪ್ಪಿದರೆ, ಸಂಪುಟದಿಂದ ಆರೇಳು ಮಂದಿಗೆ ಕೊಕ್ ಕೊಟ್ಟು, ಹಲವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಗಳು ದಟ್ಟವಾಗಿವೆ.
ಸಂಪುಟಕ್ಕೆ ಸೇರಬಹುದಾದವರ ಪಟ್ಟಿಯಲ್ಲಿ ಬೆಂಗಳೂರಿನ ವಿಜಯನಗರದ ಶಾಸಕ ಎಂ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಬಿ. ನಾಗೇಂದ್ರ, ಮೈಸೂರಿನ ತನ್ವೀರ್ ಸೇಠ್, ಹಾಲಿ ಆಹಾರ ಸಚಿವ ಕೆಎಚ್ ಮುನಿಯಪ್ಪನವರ ಪುತ್ರಿ ರೂಪಾ ಶಶಿಧರ್ (ಮುನಿಯಪ್ಪನವರ ಸ್ಥಾನಕ್ಕೆ), ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ಮಾಗಡಿ ಶಾಸಕ ಸಿಎಚ್ ಬಾಲಕೃ,ಷ್ಣ, ಬೆಳಗಾವಿ ಭಾಗದ ಪ್ರಮುಖ ನಾಯಕ ಲಕ್ಷ್ಮಣ ಸವದಿ ಮುಂತಾದವರ ಹೆಸರುಗಳು ಕೇಳಿಬರುತ್ತಿವೆ.




