ಪೂರ್ಣಿಮ ಜಿ, ಕರ್ನಾಟಕ ಜನಶಕ್ತಿ
ಮಂಡ್ಯದ ನೆಲದಲ್ಲಿ ಎದ್ದಿರುವ ಚರ್ಚೆ ಬರಿ ಊಟದ ವಿಚಾರ ಮಾತ್ರ ಆಗಿರದೇ ಬಹುಸಂಖ್ಯಾತರ ಅಸ್ಮಿತೆಯ ಮತ್ತು ಅಸ್ತಿತ್ವದ ಪ್ರಶ್ನೆಯಾಗಿದೆ. ಬ್ರಾಹ್ಮಣ್ಯವಾದದ ಶ್ರೇಷ್ಠತೆಯ ವ್ಯಸನ ಸಮಾಜದ ಎಲ್ಲಾ ವರ್ಗದ ಮೇಲೆಯೂ ಗಂಭೀರವಾದ ಪ್ರಭಾವ ಬೀರುತ್ತಿರುವುದು, ಅದರಿಂದ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗುತ್ತಿರುವುದು ಅಕ್ಷರಶಃ ಸತ್ಯವಲ್ಲವೇ..?
ಬಾಡೂ ತಿನ್ನುವ ಜನರು ಕೂಡಾ ಇವತ್ತಿನ ದಿನಗಳಲ್ಲಿ, ನಿರ್ದಿಷ್ಟವಾಗಿ ಇಂತಹ ದಿನಗಳಲ್ಲಿ ತಿನ್ನಬಾರದು, ಮನೆಯಲ್ಲಿ ಮಾಡಬಾರದು ಎಂಬ ನಿಬಂದನೆಗಳನ್ನು ಸ್ವತಃ ಹೇರಿಕೆ ಮಾಡಿಕೊಂಡಿದ್ದಾರೆ. ಮಡಿ ಮೈಲಿಗೆ ಎಂಬ ಭ್ರಮೆಯೊಳಕ್ಕೆ ಈ ಜನರನ್ನು ತಳ್ಳಿ, ಬಾಡು ತಿನ್ನುವ ಜನರೇ ಕೀಳು ಎಂಬಂತೆ ಬಿಂಬಿಸಲಾಗುತ್ತಿರುವ ಈ ಕಾಲಘಟ್ಟದಲ್ಲಿ ಆಹಾರದ ಸಂಸ್ಕೃತಿಯ ಚರ್ಚೆ ಬಹಳ ಅಗತ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಮೇಲು ಕೀಳು ಎಂಬ ವಾದದಲ್ಲಿ ಜಿದ್ದಿಗೆ ಬಿದ್ದಂತಿರುವ ಈ ಸಮಾಜ ಒಂದು ವರ್ಗದ ಜನ ದೇವಸ್ಥಾನ ಪ್ರವೇಶ ಮಾಡಿದರೂ ಎಂಬ ಕಾರಣಕ್ಕೆ ದೇವಸ್ಥಾನಗಳಿಗೆ ಬೀಗ ಜಡಿಯುತ್ತಿರುವುದು, ಒಡೆದಾಟ ಬಡಿದಾಟದ ಹಂತಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯ ವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಸರ್ಕಾರಿ ಸೇವೆಯಲ್ಲಿರುವವರನ್ನೆ ಜಾತಿಯ ಹೆಸರಿನಲ್ಲಿ ಕಛೇರಿಯಿಂದ ಹೊರಗಿಡುವುದು, ಶಾಲೆ ಅಂಗನವಾಡಿಗಳಲ್ಲಿ ಮಾಡಿದ ಅಡುಗೆಯನ್ನು ಮಕ್ಕಳಿಗೆ ಸೇವಿಸಲು ಬಿಡದೆ ಬಹಿಸ್ಕರಿಸುತ್ತಿರುವುದು ಇದೆಲ್ಲವೂ ಕೂಡಾ ಆಹಾರ ಸಂಸ್ಕೃತಿ ಮತ್ತು ಜಾತಿವಾದಕ್ಕೆ ಒಂದಕ್ಕೊಂದು ಪೂರಕವಾಗಿ ಬೆಸೆದುಕೊಂಡಿರುವ ವಿಚಾರವಾಗಿದೆ.
ಸಣ್ಣ ಸಣ್ಣ ಜಂತುಗಳಿಗೆಂದು ತೆಗೆದು ಇಟ್ಟು ನಂತರ ಊಟ
ಮಂಡ್ಯ ನೆಲ ಬದಲಾವಣೆಗೆ ಹೆಸರಾಗಿರುವ ನೆಲ ಇಲ್ಲಿ ಉಳುಮೆ ಮತ್ತು ಊಟದ ಸಂಸ್ಕೃತಿಗೆ ಬಹಳ ಹೆಸರುವಾಸಿಯಾದದ್ದೂ. ನನ್ನ ಸ್ವಂತ ಅನುಭವವನ್ನೆ ಹಂಚಿಕೊಳ್ಳುವುದಾದರೆ ನಮ್ಮ ತಾತ ಬೆಳಗಾಗೆದ್ದು ಶುಚಿಯಾಗಿ, ಜಗತ್ತಿಗೆ ಬೆಳಕು ಕೊಡುವ ಸೂರ್ಯನಿಗೆ ನಮಿಸಿ ಇದ್ದದ್ದನ್ನು ತಟ್ಟೆಗೆ ಬಡಿಸಿಕೊಂಡು ತಿನ್ನುವಾಗ ಅನ್ನದ ತಟ್ಟೆಗೆ ನಮಸ್ಕರಿಸಿ, ತಾನು ತಿನ್ನುವ ಮೊದಲು ಒಂದು ತುತ್ತನ್ನು ತಾನು ಸಾಕಿದ ನಾಯಿಗೆ ಮತ್ತೊಂದು ತುತ್ತನ್ನ ಭೂಮಿಯ ಮೇಲೆ ಇರುವ ಸಣ್ಣ ಸಣ್ಣ ಜಂತುಗಳಿಗೆಂದು ತೆಗೆದು ಇಟ್ಟು ನಂತರ ಊಟ ಮಾಡುತ್ತಿದ್ದ. ಬೆಲ್ಲ ತೆಗೆಯುವ ಕೆಲಸ ಆಲೆಮನೆ ನಿಂಗಯ್ಯ ಅಂತಲೇ ಹೆಸರುವಾಸಿ ಊರು ಉಮ್ಮಡಹಳ್ಳಿ. ಮಡಿ ಮೈಲಿಗೆಯ ವ್ಯಸನ ನೋಡಿದ್ದಿಲ್ಲ ವಾರ ಪೂರ್ತಿ ಕಬ್ಬು ಕಡಿದು, ನಾಟಿ ಹಾಕಿ ಕೂಲಿ ಮಾಡಿ ವಾರಕ್ಕೊಮ್ಮೆ ಮಾಂಸದಡಿಗೆ ಎಲ್ಲರ ಮನೆಯಲ್ಲೂ ಘಮಗುಡುತ್ತಿತ್ತು. ಆ ಮಾಂಸ ತರಲು ಟಿಪಾನ್ ಕ್ಯಾರಿಯರ್ ಹಿಡಿದು ಗುಡ್ಡೆ ಬಾಡಿಗಾಗಿ ತಾತನ ಜೊತೆಗೆ ತಮ್ಮ ಪುನೀತ್ ಮತ್ತು ನಾನು ಹೋಗುತ್ತಿದ್ದ ನೆನಪು. ಮಧ್ಯದಲ್ಲಿ ಯಾರದರೂ ಮಾಂಸ ಕಡಿದು ಪಾಲಾಕಿದ್ದರೆ ದುಡ್ಡಿಲ್ಲವಾದರೂ ಮಾಂಸ ಕೊಂಡು ನಂತರ ಕೂಲಿ ಬಂದಾಗ ಕೊಡುತ್ತಿದ್ದರು.
ನನ್ನಪ್ಪ ಶಿವಲಿಂಗೇಗೌಡರ ಜೊತೆಗೆ ಗದ್ದೆಗೆ ಹೋಗುವಾಗ ಅಪ್ಪ ಜೊತೆಯಲ್ಲಿ ಉಪ್ಪಿನೆಸರಿನ ಕಾರವನ್ನು ಯಾವಾಗಲೂ ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದ ಗದ್ದೆಗಳಲ್ಲಿ ನಳ್ಳಿ ಸಿಕ್ಕರೆ ಹಿಡಿದು ಅಲ್ಲೆ ಒಂದೆರಡು ತೆಂಗಿನ ಗರಿಯೋ ಅಥವಾ ಕಬ್ಬಿನ ಗರಿಯೋ ಹಾಕಿ ನಳ್ಳಿಗೆ ಉಪ್ಪೆಸರಿನ ಕಾರ ಸವರಿ ಸುಟ್ಟಿ ಕೊಡುತ್ತಿದ್ದ ಅದನ್ನು ತಿನ್ನಲು ಬಹಳ ರುಚಿ. ಆ ಕಾರಣಕ್ಕಾಗಿಯೇ ಅಪ್ಪನ ಹಿಂದೆ ಓಡುತ್ತಿದ್ದೆವು, ಇನ್ನೂ ಭತ್ತದ ಗದ್ದೆಗಳಲ್ಲಿ ಇಲಿಯ ಜಾತಿಗೆ ಸೇರಿದ ಆದರೆ ಇಲಿಯಲ್ಲದ ತ್ವಾಡಗಳನ್ನು ಹೊಡೆದು ಅದಕ್ಕು ಕಾರ ಸವರಿ ತನ್ನ ತಂಗಿಯರಿಗೆ ಸುಟ್ಟು ಕೊಡುತ್ತಿದ್ದನಂತೆ ಹಾಗಂತ ನಮ್ಮ ಅಮ್ಮ ನಾಗಮ್ಮ ಹೇಳುತ್ತಿದ್ದಳು. ಆದರೆ ಅದನ್ನು ತಿಂದ ಅನುಭವ ನಮಗಿಲ್ಲ.
ಹಂಚಿ ತಿನ್ನುವ ಪದ್ದತಿ ರೂಢಿಯಲ್ಲಿತ್ತು
ಕಾವಲಿಗಳಿಗೆ ನೀರು ಹಾಯಿಸಿದ ಸಂದರ್ಭದಲ್ಲಿ ಮೀನು ಹಿಡಿಯಲು ರಾತ್ರಿಯಲ್ಲ ಹೋಗುತ್ತಿದ್ದರು ತರಾವರಿಯ ಮೀನುಗಳು ಹೆಚ್ಚು ಯಾರು ಸಂಗ್ರಹಿಸುತ್ತಿದ್ದರೊ, ಅವರು ಉಳಿದವರಿಗೂ ಹಂಚಿ ತಮ್ಮ ಮನೆಗೆ ಬೇಕಾದಷ್ಟನ್ನು ತೆಗೆದುಕೊಂಡು ಬರುತಿದ್ದರು ಅದರಲ್ಲೂ ಹಂಚಿ ತಿನ್ನುವ ಪದ್ದತಿ ರೂಢಿಯಲ್ಲಿತ್ತು. ನಮಗೆಲ್ಲ ಖುಷಿಯ ಭೋಜನ, ಸಾಲು ಸಾಲು ಮನೆಯಲ್ಲಿ ಒಂದೇ ತರಹದ ಗಮಲೂ. ಕಬ್ಬಿನ ಗದ್ದೆಯಲ್ಲಿ ಹಂದಿಯನ್ನು ಹೊಡೆದರೆ ಗುಂಪಾಗಿ ಕೆಲಸಕ್ಕೆ ಹೋಗುತ್ತಿದ್ದ ಎಲ್ಲರಿಗೂ ಸಮಪಾಲು ಸಂಜೆಗೆ ಸಂಭ್ರಮದ ಅಡುಗೆ. ಅಡುಗೆ ಆದ ಮೇಲೆ ಹೊರ ಜಗುಲಿಯ ಪಡಸಾಲೆ ಮೇಲೆ ಊಟ, ಆ ಹೊತ್ತಿಗೆ ಯಾರೆ ಬಂದರೂ ಇದ್ದದ್ದರಲ್ಲೆ ಎಲ್ಲರಿಗೂ ಎರಡು ಚೂರು ಮಾಂಸ ಬಂದರು ಪರವಾಗಿಲ್ಲ ಅಂತ ತಮ್ಮ ಜೊತೆಗೆ ಅವರಿಗೂ ತಟ್ಟೆ ಇಡಿಸುತ್ತಿದ್ದರು.
ಶ್ರೇಷ್ಠತೆ ಕನಿಷ್ಠತೆಯ ವ್ಯಸನ ಇರಲಿಲ್ಲ
ಇನ್ನೂ ಪೂಜೆ ವಿಚಾರಕ್ಕೆ ಬಂದರೆ ನಮ್ಮಜ್ಜಿ ಕೆಂಪಮ್ಮ ಒಂದು ಶಿವನ ಪೋಟೊ ಮುಂದೆ ಮಣ್ಣಿನ ದೀಪ ಹಚ್ಚಿ ಸೆಗಣಿ ಉಂಡೆಗೆ ಒಂದೆರಡು ಗರಿಕೆ ಹುಲ್ಲು ಇಟ್ಟು ಅದಕ್ಕೆ ಕೈ ಮುಗಿದರೆ ಅಲ್ಲಿಗೆ ಪೂಜೆ ಮುಗಿದಿತ್ತು. ಯಾವ ಶ್ರೇಷ್ಠತೆ ಕನಿಷ್ಠತೆಯ ವ್ಯಸನ ಇರಲಿಲ್ಲ. ದುಡಿಮೆಯ ಸಂಸ್ಕೃತಿಯೇ ಬಹಳ ಶ್ರೇಷ್ಠ ಅಂತ ನೋಡುತ್ತಿದ್ದ ಕಾಲ. ಊರಹಬ್ಬಗಳು, ಪರಗಳಲ್ಲೂ ಕೂಡ ಮಾಂಸಹಾರ ಆಹಾರವೇ ಇರುತ್ತಿತ್ತು. ಯಾವ ಸತ್ಯನಾರಾಯಣನ ಪೂಜೆಯೂ ಇಲ್ಲ, ವರಮಹಾಲಕ್ಷಿಯ ಪೂಜೆಯೂ ಇಲ್ಲ. ಬ್ರಾಹ್ಮಣ್ಯವಾದದ ಮಡಿ ಮೈಲಿಗೆ ವಾರ ಒಪ್ಪತ್ತಿನ ಚಿಂತೆ ಮೊದಲೇ ಇರಲಿಲ್ಲ. ಇದ್ದದ್ದು ಒಂದೇ ದುಡಿಮೆಯ ಚಿಂತೆ ನೆಮ್ಮದಿಯಾಗಿ ಹೊಟ್ಟೆ ತುಂಬ ಉಣ್ಣುವ ಚಿಂತೆ. ಬಹುಪಾಲು ನಮ್ಮ ಪೂರ್ವಜರೆಲ್ಲರೂ ಹೀಗೆ ಸಾಗಿ ಬಂದಿದ್ದಾರೆ.
ಆದರೆ ಈಗ ಕಾಲ ಬದಲಾದಂತೆ ಆರ್ಥಿಕ ಸ್ಥಿತಿಗತಿ ಸ್ವಲ್ಪ ಮಟ್ಟಿಗೆ ಬದಲಾದರೂ ಸಹ ಪ್ರತಿ ಮನುಷ್ಯನು ಶ್ರೇಷ್ಠತೆಯ ವ್ಯಸನಕ್ಕೆ ಬಿದ್ದು ಹೊರಳಾಡುತ್ತಿದ್ದಾನೆ. ಬ್ರಾಹ್ಮಣ್ಯವಾದದ ಸತ್ಯನಾರಾಯಣ, ವರಮಹಾಲಕ್ಷ್ಮಿ ಪೂಜೆ ಎಲ್ಲರ ಮನೆಯ ಹಬ್ಬಗಳಾಗಿ ಮಾರ್ಪಾಡಾಗುತ್ತಿವೆ. ವಾರ ಒಪ್ಪತ್ತಿನ ಆಚರಣೆಗಳು ಹೆಚ್ಚಾಗಿ ಮಡಿ ಮೈಲುಗೆಯ ವ್ಯಸನಗಳು ಬೆಳೆದು , ಆ ಕಟ್ಟುಪಾಡುಗಳನ್ನು ನಿಭಾಯಿಸಿಕೊಳ್ಳಲು ಸಾಧ್ಯವಾಗದೆ ಮನುಷ್ಯ ಒಡೆದಾಟ ಬಡಿದಾಟಕ್ಕೆ ಮುಂದಾಗಿದ್ದಾನೆ.
ಬಹುಸಂಖ್ಯಾತರ ಆಹಾರದ ಹಕ್ಕನ್ನು ಕಸಿಯುತ್ತಿದೆ
ಯಾವುದೇ ಆಚರಣೆಗಳು ಮನುಷ್ಯನ ಮನಸ್ಸಿನ ನೆಮ್ಮದಿ ಶಾಂತಿ ಸೌಹಾರ್ದತೆಯ ಸಂಕೇತವಾಗ ಬೇಕೇ ವಿನಹ ದ್ವೇಷ ಅಸೂಯೆಯ ಸಂಕೇತವಾಗಬಾರದು. ಆಹಾರ ಪದ್ದತಿಯನ್ನು ಕೂಡಾ ಇವತ್ತಿನ ಸಮಾಜ ಶ್ರೇಷ್ಠ ಮತ್ತು ಕನಿಷ್ಠ ಎಂಬ ತುಲನೆಗೆ ಒಳಪಡಿಸಿ ಬಹುಸಂಖ್ಯಾತರ ಆಹಾರದ ಹಕ್ಕನ್ನು ಕಸಿಯುತ್ತಿದೆ. ಜೊತೆಗೆ ಪ್ರಜ್ಞಾಪೂರ್ವಕವಾಗಿ ಬಾಡನ್ನು ತಿನ್ನುವ ಜನರೆ ಅದನ್ನು ಮೈಲಿಗೆ ಎಂದು ತ್ಯಜಿಸುವಂತೆ ಮಾಡುತ್ತಿರುವುದರಲ್ಲಿ ಬ್ರಾಹ್ಮಣ್ಯವಾದ ಮೇಲು ಗೈ ಸಾಧಿಸುತ್ತಾ ಬಂದಿದೆ.
ಬ್ರಾಹ್ಮಣ್ಯವಾದದ ಸಂಕೇತವಲ್ಲದೆ ಮತ್ತೇನೂ ಅಲ್ಲ
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಹಾರವನ್ನು, ಮಧ್ಯಪಾನ ಮತ್ತು ಧೂಮಪಾನದ ಲಿಸ್ಟ್ ನಲ್ಲಿ ಸೇರಿಸಿ ನಿಷೇಧ ಅಂತ ಹೇರಿಕೆ ಮಾಡಿದ್ದು ಕೂಡಾ ಶ್ರೇಷ್ಠ ಮತ್ತು ಕನಿಷ್ಠದ ವ್ಯಸನ ಮತ್ತು ಬ್ರಾಹ್ಮಣ್ಯವಾದದ ಸಂಕೇತವಲ್ಲದೆ ಮತ್ತೇನೂ ಅಲ್ಲ. ನಮ್ಮ ರಾಜ್ಯದ ಮುಖ್ಯಮಂತ್ರಿಗಳನ್ನು ಮೂರ್ಖ ಮಾಧ್ಯಮಗಳು ನೀವು ಬಾಡು ತಿಂದು ದೇವಸ್ಥಾನ ಪ್ರವೇಶ ಮಾಡಿದ್ದೀರಿ ಎಂಬ ಆರೋಪ ಕೇಳಿ ಬರುತ್ತಿದೆ ಎಂದು ಪ್ರಶ್ನೆ ಮಾಡಿ, ಬಾಡು ತಿನ್ನುವುದೆ ಅಪರಾಧ ಎಂಬಂತೆ ಬಿಂಬಿಸಿದ್ದನ್ನು ನಾವು ಮರೆಯುವಂತಿಲ್ಲ. ಇಂತಹ ಸನ್ನಿವೇಶಗಳು ಪದೆ ಪದೇ ಮರುಕಳಿಸುತ್ತಿರುವ ಕಾಲದಲ್ಲಿ ಮಂಡ್ಯದ ಸಾಹಿತ್ಯ ಸಮ್ಮೇಳನದಲ್ಲಿ ಆಹಾರ ಸಂಸ್ಕೃತಿಯ ಬಗ್ಗೆ ಎದ್ದಿರುವ ಚರ್ಚೆ ಸ್ವಾಗತಿಸಬೇಕಾಗಿರುವುದು.
ಸಾಹಿತಿಗಳಲ್ಲಿ ಬಹುಪಾಲು ಮಾಂಸಹಾರಿಗಳೇ
86 ಸಾಹಿತ್ಯ ಸಮ್ಮೇಳನಗಳಲ್ಲಿ ಇದರ ಬಗ್ಗೆ ಚರ್ಚೆ ಬಂದಿಲ್ಲ ಎಂದರೆ ಬಹುಶಃ ಎಲ್ಲೊ ಒಂದು ಕಡೆ ಸಾಹಿತಿಗಳಿಗೂ ಶ್ರೇಷ್ಠತೆಯ ವ್ಯಸನ ತಗುಲಿದ್ದಿರಬಹುದು. ಇಲ್ಲ ಇದರಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂಬ ಅಳುಕಿನಂದಲೂ ಚರ್ಚೆ ಆಗದಿರಬಹುದು. ಆದರೆ ನೆಲದ ಬದುಕಿನ ಬವಣೆಗಳನ್ನು ಸಾಹಿತ್ಯದ ಮೂಲಕ ಹೊರ ಜಗತ್ತಿಗೆ ಪರಿಚಯಿಸಿದ ಸಾಹಿತಿಗಳಲ್ಲಿ ಬಹುಪಾಲು ಮಾಂಸಹಾರಿಗಳೇ ಇದ್ದಾರೆ. ಆದರೂ ತುಂಬಾ ಟೀಕೆಗಳು ಕೇಳಿಬರುತ್ತಿವೆ. ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಗಳು ಮುಖ್ಯವೋ ಅಥವಾ ಬಾಡೂಟ ಮುಖ್ಯವೋ ಎಂಬ ತೆಗಳಿಕೆಯ ವಿಚಾರಗಳು ಕೇಳಿ ಬರುತ್ತಿವೆ.
ಆಹಾರ ಸಂಸ್ಕೃತಿಯ ವಿಚಾರವೂ ಕೂಡ ಇವತ್ತಿನ ಕಾಲಘಟ್ಟದಲ್ಲಿ ಬಹಳ ಪ್ರಮುಖವಾಗಿ ಚರ್ಚೆಯಾಗ ಬೇಕಿರುವ ವಿಚಾರ, ಆಹಾರವು ಕೂಡ ಇವತ್ತಿನ ರೈತನ ಕೃಷಿ ಮತ್ತು ಹೈನುಗಾರಿಕೆಯ ಉದ್ಯಮದ ಜೊತೆಗೆ ನೇರಾ ನೇರ ಸಂಬಂಧ ಹೊಂದಿರುವ ವಿಚಾರವಾಗಿದೆ. ಜನರ ಬದುಕಿನ ವಿಷಯ ಮತ್ತು ಈ ನೆಲದ ಬಹುಸಂಖ್ಯಾತರ ಅಸ್ಮಿತೆಯ ವಿಷಯವೂ ಆಗಿರುವುದರಿಂದ ಬಾಡೂಟದ ಚರ್ಚೆ ಮತ್ತು ಬಾಡೂಟದ ವಿತರಣೆಯ ಮೂಲಕ ಬ್ರಾಹ್ಮಣ್ಯವಾದದ ಬೇರನ್ನು ಕೀಳಲು ಮಂಡ್ಯ ನೆಲದ ಜನ ಚರಿತ್ರೆ ಬರೆಯಲು ಮುಂದಾಗಲಿ. ದ್ವೇಷದ ಸಂಸ್ಕೃತಿಯ ಮುಂದೆ ಉಳುಮೆಯ ಸಂಸ್ಕೃತಿಯ ಮೇಲುಗೈ ಸಾಧಿಸಲಿ.
ಬಾಡೇ ನಮ್ಮ ಗಾಡು




