Friday, November 20, 2026

ಪ್ರಾಯೋಗಿಕ ಆವೃತ್ತಿ

ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ಆಗ್ರಹ | ಮಂಡ್ಯ ಡಿಸಿ ಆವರಣದಲ್ಲಿ ‘ಬಾಡೂಟದ ಗಾರೆಪರ’

ಮಂಡ್ಯ ಜಿಲ್ಲೆಯ ವಿವಿಧ ಜಾತಿ, ಸಮುದಾಯಗಳ ಮುಖಂಡರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಮಧ್ಯಾಹ್ನ ಬಾಡೂಟದ ಗಾರೆಪರ ಮಾಡಿ ಸಹಪಂಕ್ತಿ ಭೋಜನ ಸವಿಯುವ ಮೂಲಕ ಸಾಹಿತ್ಯ ಸಮ್ಮೇಳನದಲ್ಲೂ ಬಾಡೂಟ ವಿತರಿಸುವಂತೆ ಆಗ್ರಹಿಸಿ ವಿಭಿನ್ನವಾದ ಹೋರಾಟ ನಡೆಸಿದರು.

ಪ್ರಗತಿಪರ ಸಂಘಟನೆಗಳ ಮುಖಂಡರು ಯಾವುದೇ ಜಾತಿ, ಬೇಧವಿಲ್ಲದೇ ಸಹಪಂಕ್ತಿಯಲ್ಲಿ ಕೂತು ಮುದ್ದೆ, ಕೋಳಿ ಸಾರು, ಕೋಳಿ ಮಾಂಸ, ಅನ್ನ-ಸಾಂಬಾರು ಹಾಗೂ ಮೊಟ್ಟೆಯನ್ನು ಸವಿಯುವ ಮೂಲಕ ಅಂದು ಕುವೆಂಪು ಅವರು ವಿಚಾರ ಕ್ರಾಂತ್ರಿಗೆ ಆಹ್ವಾನ ನೀಡಿದರೆ, ಇಂದು ನಾವು ಮಂಡ್ಯದ ಜನ ಆಹಾರ ಕ್ರಾಂತಿಗೆ ಕರೆ ನೀಡುತ್ತಿದ್ದೇವೆ ಎಂಬ ಸಂದೇಶವನ್ನು ಇಡೀ ರಾಜ್ಯಕ್ಕೆ ರವಾನೆ ಮಾಡಿದರು.

ಸರ್ಕಾರ, ಮಂತ್ರಿಗಳು ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಬಹುದೊಡ್ಡ ಪ್ರಮಾಣದಲ್ಲಿ ಕನ್ನಡಮ್ಮನಿಗೆ ಹರಕೆ ಕಟ್ಟಿಕೊಂಡು ಅಲ್ಲೂ ಗಾರೆಪರ (ಮಾಂಸದೂಟ) ಮಾಡುತ್ತೇವೆ. ಮಂಡ್ಯದ ತಾಯಂದಿರು ತಲೆಯ ಮೇಲೆ ನಾಟಿಕೋಳಿ ಮುದ್ದೆಸಾರನ್ನು ಮಡೆ ಅನ್ನದ ರೀತಿ ಹೊತ್ತು ಬರಲಿದ್ದಾರೆ. ಇದು ತಡೆರಹಿತ ಹೋರಾಟ. ಸಸ್ಯಾಹಾರವನ್ನು ಗೌರವಿಸುತ್ತಾ ಮಾಂಸಾಹಾರ ನಿಷೇಧ ತೆರವು ಮಾಡಿಸಿಯೇ ತೀರುತ್ತೇವೆ. ಆಹಾರದಲ್ಲಿ ಬೇಧ-ಭಾವ ನಾಗರೀಕ ಸಮಾಜ ತಲೆತಗ್ಗಿಸುವಂತದ್ದು ಎಂದು ಸಂದೇಶ ನೀಡಿದರು. ಇದಕ್ಕೂ ಮುನ್ನ ಮಂಡ್ಯನಗರದ ಗಾಂಧಿಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್ ರ್‍ಯಾಲಿ ನಡೆಸಲಾಯಿತು.

ಬಾಡೂಟದ ಸಂದರ್ಭದಲ್ಲಿ ನ್ಯಾಯವಾದಿ ಬಿ.ಟಿ.ವಿಶ್ವನಾಥ್, ಕರುನಾಡ ಸೇವಕರು ಸಂಘಟನೆಯ ನಾಗಣ್ಣಗೌಡ, ನೆಲದನಿ ಬಳಗದ ಲಂಕೇಶ್, ದಸಂಸ ಎಂ.ವಿ.ಕೃಷ್ಣ, ಕರವೇ ಮುಖಂಡ ಹೆಚ್.ಡಿ.ಜಯರಾಂ, ಚಿತ್ರಕೂಟದ ಅರವಿಂದ ಪ್ರಭು ಸಮಾನ ಮನಸ್ಕರ ವೇದಿಕೆ ನರಸಿಂಹಮೂರ್ತಿ, ಪ್ರೊ.ಹುಲ್ಕೆರೆ ಮಹದೇವ, ಟಿ.ಡಿ.ನಾಗರಾಜು, ವಕೀಲ ಚೀರನಹಳ್ಳಿ ಲಕ್ಷ್ಮಣ್, ಜಾಗೃತ ಕರ್ನಾಟಕದ ನಗರಕೆರೆ ಜಗದೀಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ