ಪಾಂಡವಪುರ ತಾಲೂಕಿನ ಲಕ್ಷ್ಮಿಸಾಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಷೇರು ಹಣ ದುರುಪಯೋಗ ಮತ್ತು ಲೆಕ್ಕ ಪರಿಶೋಧನೆಯಲ್ಲಿ ದುರುಪಯೋಗಪಡಿಸಿಕೊಂಡು ಅವ್ಯವಹಾರ ಮಾಡುತ್ತಿರುವ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಭೆ ನಡೆಸದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ನಿರ್ದೇಶಕ ಎಲ್.ಡಿ.ಮಹೇಶ್ ಆರೋಪಿಸಿದರು.
ಸಂಘದ ಆವರಣದಲ್ಲಿ ಕಳೆದ ಗುರುವಾರ ಸಭೆ ಆಯೋಜಿಸಲಾಗಿತ್ತು. ಆದರೆ ಸಭೆಯ ಅರ್ಧದಲ್ಲೇ ಮುಖ್ಯ ನಿರ್ವಾಹಣಾಧಿಕಾರಿ ಕೆ.ವಿಜಯ್ ಅವರು ಸಂಘದ ನಿರ್ಣಯದ ಪುಸ್ತಕದೊಂದಿಗೆ ಸೀಲ್ ಹಾಗೂ ಸದಸ್ಯರ ಹಾಜರಾತಿ ಪುಸ್ತಕದ ಸಮೇತವಾಗಿ ಪರಾರಿಯಾಗಿದ್ದಾರೆ. ಅವರಿಗೆ ಕರೆ ಮಾಡಿದರೆ ಅವರ ಮೊಬೈಲ್ ನಂಬರ್ ಸ್ವಿಚ್ ಆಫ್ ಎಂಬುದಾಗಿ ಬರುತ್ತಿದೆ. ಅವರ ಚಿಕ್ಕಪ್ಪ ಸಂಘದ ಹಾಲಿ ನಿರ್ದೇಶಕ ಜೈಕೃಷ್ಣ ಕೂಡ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದಾಗ ಸುಮಾರು 4 ಲಕ್ಷ ರೂ.ವರೆಗೆ ಅವ್ಯವಹಾರ ನಡೆಸಿದ್ದಾರೆ ಎಂದು ಆಪಾದಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿಜಯ ಸುಮಾರು 5 ವರ್ಷಗಳಿಂದಲೂ
ಲಕ್ಷ್ಮಿಸಾಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸುಮಾರು 3 ವರ್ಷಗಳಿಂದ ಸಾಲಗಾರ ಸದಸ್ಯರ ಷೇರುಹಣವನ್ನು ಜಮಾ ತೆಗೆಯದೇ ದುರುಪಯೋಗ ಮಾಡಿಕೊಂಡು ಬರುತ್ತಿರುವುದು ಆಡಳಿತ ಮಂಡಳಿಯ ಗಮನಕ್ಕೆ ಬಂದಿರುತ್ತದೆ. ಅಲ್ಲದೇ 2022-2023, 2023-2024 ನೇ ಸಾಲಿನ ಲೆಕ್ಕಪರಿಶೋಧನೆ ವರದಿಯಲ್ಲಿ ದುರುಪಯೋಗಗಳನ್ನು ನಡೆಸಿ, ಅವ್ಯವಹಾರ ಮಾಡುತ್ತಿರುವುದು ಆಡಳಿತ ಮಂಡಳಿಯ ವರದಿಯಲ್ಲಿ ನಮ್ಮ ಗಮನಕ್ಕೆ ಬಂದಿರುತ್ತದೆ. ಈ ಕುರಿತು ಪಾಂಡವಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಸಂಘದ ಅಧ್ಯಕ್ಷರು/ಆಡಳಿತ ಮಂಡಳಿ ಸದಸ್ಯರು ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆಡಳಿತ ಮಂಡಳಿ ಅಧ್ಯಕ್ಷರ ಗಮನಕ್ಕೆ ತರದೆ ಡಿ.17 ರಂದು ಮುಂದಿನ ಆಡಳಿತ ಮಂಡಳಿ ಚುನಾವಣೆ ನಡೆಸಲು ದಿನಾಂಕ ನಿಗದಿಪಡಿಸುವ ಬಗ್ಗೆ ವಿಷಯ ತಂದಿರುತ್ತಾರೆ. ಇದು ಕಾನೂನುಬಾಹಿರವಾಗಿರುತ್ತದೆ, ಆದ್ದರಿಂದ ಕಾರ್ಯನಿರ್ವಹಣಾಧಿಕಾರಿ ಕೆ.ವಿಜಯ್ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ ಎಂದರು.




